ಬುಧವಾರ, ಜೂನ್ 23, 2021
29 °C

ದೀಪಿಕಾ ಜ್ಞಾಪಕ

–ಎನ್ವಿ Updated:

ಅಕ್ಷರ ಗಾತ್ರ : | |

ದೀಪಿಕಾ ಪಡುಕೋಣೆ ಯಾಕೆ ಹದವರಿತು ಬೆರೆಸಿದ ಮಾಡೆಲ್‌, ನಟಿ ಎಂಬುದಕ್ಕೆ ಫ್ಯಾಷನ್‌ ಪಂಡಿತರು ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಇಂತಿವೆ...ಮೊದಲನೆಯದಾಗಿ ಅವರು ಕಣ್ಣಿಗೆ ಮಾಡುವ ಆರೈಕೆ. ಕನ್ನಡದಲ್ಲಿ ‘ಐಶ್ವರ್ಯಾ’ ಚಿತ್ರದಲ್ಲಿ ನಟಿಸಿದರೂ ಅವರು ಮೊದಮೊದಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದು ಹಿಂದಿಯ ‘ಓಂ ಶಾಂತಿ ಓಂ’ ತಮ್ಮ ಪ್ರಥಮ ಚಿತ್ರ ಎಂದು. ಆಮೇಲೆ ವೆಬ್‌ಸೈಟ್‌ಗಳಲ್ಲಿ ಅವರ ಸಂಪೂರ್ಣ ಪರಿಚಯ ಪ್ರಕಟವಾದ ಮೇಲೆ ಈ ವಿಷಯದಲ್ಲಿ ಅವರು ತಿದ್ದುಪಡಿ ಮಾಡಿಕೊಂಡರು. ‘ಓಂ ಶಾಂತಿ ಓಂ’ ಬಿಡುಗಡೆಯ ಹೊತ್ತಿಗೆ ಅವರು ಕವರ್‌ ಪೇಜ್‌ ಗರ್ಲ್‌ ಎನಿಸಿಕೊಂಡರು. ಮೊದಲ ಹಿಂದಿ ಚಿತ್ರದಲ್ಲಿ ನಟೀಮಣಿಯ ಪಾತ್ರವೇ ಸಿಕ್ಕಿದ್ದರಿಂದ ಅವರಿಗೆ ಅದು ಸವಾಲೊಡ್ಡಿತು. ಅಭಿನಯದಲ್ಲಿ, ಮಾಡೆಲಿಂಗ್‌ನಲ್ಲಿ ಕಣ್ಣಿನ ಪಾತ್ರ ಏನೆಂಬುದು ಅವರಿಗೆ ಗೊತ್ತು. ಅವರು ಬಳಸುವ ಕಾಡಿಗೆಯ ಬಣ್ಣಗಳು, ಐ ಶೇಡ್‌ಗಳು ಅವರ ನೋಟ, ಅಭಿನಯ ಕೌಶಲಕ್ಕೆ ಕಾಣಿಕೆ ಸಲ್ಲಿಸಿವೆ.ಎರಡನೆಯದಾಗಿ, ತಮ್ಮ ನೀಳವಾದ ಕಾಲುಗಳ ಸೌಂದರ್ಯ ಪ್ರಜ್ಞೆ ಅವರಿಗಿದೆ. ಅವನ್ನು ಪಾತ್ರ ಪೋಷಣೆಗೆ ತಕ್ಕಷ್ಟು ತೋರಿಸಲು ಹಿಂಜರಿಯದ ಅವರಿಗೆ ಮೊದಲಿನಿಂದಲೂ ತಾವು ತೊಡುವ ಪ್ಯಾಂಟ್‌ನ ಅಳತೆ ಹೇಗಿರಬೇಕು, ರಚನೆ ಎಂತಿರಬೇಕು ಎಂಬ ಪ್ರಜ್ಞೆ ಇದೆ. ‘ಕಾರ್ತಿಕ್‌ ಕಾಲಿಂಗ್‌ ಕಾರ್ತಿಕ್‌’, ‘ಹೌಸ್‌ಫುಲ್‌’, ‘ಯೆ ಜವಾನಿ ಹೈ ದಿವಾನಿ’, ‘ಬ್ರೇಕ್‌ ಕೆ ಬಾದ್‌’, ‘ಲವ್‌ ಆಜ್‌ಕಲ್‌’ ಈ ಎಲ್ಲಾ ಚಿತ್ರಗಳಲ್ಲದೆ ನೆಸ್ಕೆಫೆ ಜಾಹೀರಾತಿನಲ್ಲಿ ಅವರು ತೊಟ್ಟ ಪ್ಯಾಂಟುಗಳನ್ನು ನೋಡಿದರೆ ಅವರ ಆಯ್ಕೆ ಎಂಥದೆಂಬುದು ಅರಿವಾಗುತ್ತದೆ. ‘ಕಾಕ್‌ಟೇಲ್‌’ ಚಿತ್ರದಲ್ಲಿ ಅವರು ಬಳಸಿದ ಪ್ಯಾಂಟ್‌ ಅಂತೂ 1960ರ ದಶಕದ ಫ್ಯಾಷನ್‌ ಸ್ಟೇಟ್‌ಮೆಂಟನ್ನು ನೆನಪಿಸಿತು.ಮೂರನೆಯದಾಗಿ, ದೀಪಿಕಾ ತಾವು ಎಂಥ ಕನ್ನಡಕ ಹಾಕಿಕೊಂಡರೂ ಅದರಿಂದ ಕಣ್ಣುಗಳು ಹೊರಡಿಸಬೇಕಾದ ಸಂಕೇತಗಳಿಗೆ ಅಡಚಣೆಯಾಗದಂತೆ ನಿಗಾ ವಹಿಸುತ್ತಾರೆ. ದಡ್ಡಿಯಂಥ ವೇಷದಲ್ಲೂ ಸೆಕ್ಸಿಯಾಗಿ ಕಾಣುವುದು ಹೇಗೆಂಬುದು ಅವರಿಗೆ ಗೊತ್ತು. ಲಜ್ಜೆ, ಸಂಕೋಚ ತುಳುಕಿಸಿದರೂ ಸೆಕ್ಸಿ ಆಗಿ ಉಳಿಯುವ ಕಲೆಯಲ್ಲೂ ಅವರು ನಿಷ್ಣಾತೆ.ನಾಲ್ಕನೆಯದಾಗಿ, ಅವರು ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌. ದಿಟ್ಟ ಸುಂದರಿ ಎಂದು ಇದನ್ನು ಅನುವಾದಿಸಿಕೊಳ್ಳಬಹುದು. ಅಲಂಕಾರ ಮಾಡಿಕೊಳ್ಳುವುದರಲ್ಲಿ ಅವರು ಪ್ರಯೋಗಶೀಲೆ. ತಮ್ಮನ್ನು ತಾವು ಹೊಸ ರೀತಿಯ ಸ್ಟೈಲ್‌ಗೆ ಅರ್ಪಿಸಿಕೊಳ್ಳುವ ಧೈರ್ಯವನ್ನು ಎಲ್ಲರೂ ಮಾಡುವುದಿಲ್ಲ. ‘ಕಾರ್ತಿಕ್‌ ಕಾಲಿಂಗ್‌ ಕಾರ್ತಿಕ್‌’ ಚಿತ್ರದಲ್ಲಿ ಅವರು ತೊಟ್ಟಿರುವ ಗೌನ್‌ ಕಂಡು ಕೆಲವರು ನಟಿಯೊಬ್ಬಳು ಇಂಥ ಪ್ರಯೋಗಕ್ಕೂ ಒಡ್ಡಿಕೊಳ್ಳಬಹುದೇ ಎಂದು ಹುಬ್ಬೇರಿಸಿದ್ದರು.ಐದನೆಯದಾಗಿ, ಅವರ ಸೀರೆ ಮೋಹ. ಅಂತರರಾಷ್ಟ್ರೀಯ ವೇದಿಕೆ ಏರುವಾಗ ಪಾಶ್ಚಿಮಾತ್ಯ ಉಡುಗೆಗಳನ್ನು ತೊಡುವವರೇ ಹೆಚ್ಚು. ಕಾನ್‌ನಲ್ಲಿ ಕೆಂಪುಹಾಸಿನ ಮೇಲೆ ನಡೆಯಲು ದೀಪಿಕಾ ಸಾಂಪ್ರದಾಯಿಕ ಸೀರೆ ಉಡಲು ನಿರ್ಧರಿಸಿದ್ದೂ ಅನೇಕರಿಗೆ ಸೋಜಿಗದಂತೆ ಕಂಡಿತ್ತು. ರೋಹಿತ್‌ ಬೆಹ್ಲ್‌ ಆ ಸೀರೆಯನ್ನು ವಿನ್ಯಾಸಗೊಳಿಸಿದ್ದರು.ಆರನೆಯದಾಗಿ, ‘ಗೋಲಿಯೋಂ ಕಿ ರಾಸಲೀಲಾ–ರಾಮಲೀಲಾ’ ಹಿಂದಿ ಚಿತ್ರದಲ್ಲಿ ಅವರು ತೊಟ್ಟ ಘಾಗ್ರಾ–ಚೋಲಿಯ ತೂಕ. ಮೊದಲು ಫೋಟೊಶೂಟ್‌ಗೆ ಅದನ್ನು ತೊಟ್ಟಾಗ ಅವರಿಗೆ ಕುಸಿಯುವಂತಾಗಿತ್ತು. ಯಾಕೆಂದರೆ, ಅದರ ತೂಕ 30 ಕೆ.ಜಿ. ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅಂಥದ್ದೊಂದು ಉಡುಗೆಯನ್ನು ಅವರ ಮೇಲೆ ಹಾಕಿದ್ದರು.ಇದರಲ್ಲಿ ದೀಪಿಕಾ ಅಗ್ಗಳಿಕೆ ಏನಿದೆ? ಎಲ್ಲಾ ವಿನ್ಯಾಸಕರ ಮಹಿಮೆಯಲ್ಲವೇ ಎನಿಸಬಹುದು. ಆದರೆ, ದೀಪಿಕಾ ವಿನ್ಯಾಸಕರು ಹೇಳಿದ್ದೆಲ್ಲವನ್ನೂ ಒಪ್ಪುವ ಜಾಯಮಾನದವರಲ್ಲ. ಮಾಡೆಲಿಂಗ್‌ನಲ್ಲಿ ಅವರು ಈ ವಿಷಯಗಳಲ್ಲಿ ಚೆನ್ನಾಗಿಯೇ ಪಳಗಿದ್ದಾರೆ. ಫ್ಯಾಷನ್‌, ಪ್ರಸಾಧನ, ಸಾಧನಗಳು ಇತ್ಯಾದಿ ವಿಷಯಗಳ ಜೊತೆ ಅವರೊಟ್ಟಿಗೆ ಚರ್ಚೆಗಿಳಿದವರಿಗೆ ಇದು ಅನುಭವಕ್ಕೆ ಬಂದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.