ಮಂಗಳವಾರ, ಮೇ 24, 2022
23 °C

ದೀವಟಿಗೆ ದೀಪಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಾವಳಿ ದೀಪಗಳ ಹಬ್ಬ. ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ಹಬ್ಬ. ಮನೆಗಳ ಮುಂದೆ ಸಾಲು ಸಾಲು ಹಣತೆಗಳನ್ನು ಹಚ್ಚಿಟ್ಟು ಅದರ ಬೆಳಕಿನಲ್ಲಿ ಸಂಭ್ರಮಿಸುವ ಹಬ್ಬ.

 

ಮನೆಗಳ ಮುಂದೆ ಬೆಳಗುವ ಹಣತೆಗಳ ಬೆಳಕಲ್ಲಿ ಮನೆ, ಮನಗಳ ಕತ್ತಲನ್ನು ಓಡಿಸಿ ಎಲ್ಲಡೆ ಬೆಳಕು ಮೂಡಿಸುವ ಹಬ್ಬ. ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ರೀತಿ ಆಚರಿಸುವ ಸಂಪ್ರದಾಯಗಳಿವೆ.ಆಚರಣೆಯಲ್ಲಿ ಸಾಮ್ಯತೆಯೂ ಇದೆ. ಆದರೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ, ಬೆಟ್ಟದ ತುಂಗ, ಕುಡಕೂರು ಗ್ರಾಮಗಳಲ್ಲಿ ನಡೆಯುವ ದೀವಟಿಗೆ ದೀಪಾವಳಿ ವಿಶಿಷ್ಟ ಆಚರಣೆ. ಈ ರೀತಿ ದೀಪಾವಳಿ ಆಚರಿಸುವ ಪರಿಪಾಠ ಇನ್ನೆಲ್ಲೂ ಇಲ್ಲ. ಅದನ್ನು ನೋಡಲು ಎರಡು ಕಣ್ಣುಗಳು ಸಾಲವು.ಬಲಿಪಾಡ್ಯಮಿಯ ದಿನ ಸಾವಿರಾರು ಜನರು ಕೈಯಲ್ಲಿ ಉರಿಯುವ ದೀವಟಿಗೆ (ಪಂಜು)ಗಳನ್ನು ಹಿಡಿದು ಸುಮಾರು 20 ಕಿ.ಮೀ ದೂರ ಮೆರವಣಿಗೆಯೋಪಾದಿಯಲ್ಲಿ ಸಾಗುವ ರೀತಿಯೇ ವಿಭಿನ್ನ, ವಿಶಿಷ್ಟ.ಹೀಗೆ ದೀವಟಿಗೆ ಹಿಡಿದು ಸಾಗುವವರ ಬೇಡಿಕೆಗಳನ್ನು ದೇವರು ಸಿಡ್ಲು ಮಲ್ಲಿಕಾರ್ಜುನ ಸ್ವಾಮಿ ಈಡೇರಿಸುತ್ತಾನೆ ಎಂಬ ನಂಬಿಕೆ ಈ ಭಾಗದ ಜನರಲ್ಲಿ ಇದೆ. ಜನರ ಕಷ್ಟಗಳ ನಿವಾರಣೆಗಾಗಿ ದೀವಟಿಗೆ ಹಿಡಿದು ಸಾಗುವ ಹರಕೆಯನ್ನು ಭಕ್ತರು ಹೊರುತ್ತಾರೆ.  ಪ್ರತಿ ವರ್ಷ ಇಲ್ಲಿ ದೀವಟಿಗೆ ಹಿಡಿದು ಸಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಬೆಟ್ಟದಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ದೀವಟಿಗೆ ಸೇವೆ ಹೆಸರಿನಲ್ಲಿ ದೀಪಾವಳಿ ಆಚರಿಸುವ ಪರಿಪಾಠ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಬೆಟ್ಟದ ಮೇಲೆ ಸಿಡ್ಲು ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ.

 

ಈ ಹಿಂದೆ ವಿಜಯಗಿರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲೆ ಮಲ್ಲಿಕಾರ್ಜುನಸ್ವಾಮಿ ನೆಲೆಗೊಂಡನಂತೆ. ಈ ಪ್ರದೇಶವನ್ನು ಆಳುತ್ತಿದ್ದ ಚೆಂಗಳ ರಾಜರು ಮಲ್ಲಿಕಾರ್ಜುನಸ್ವಾಮಿ ಉತ್ಸವವನ್ನು ಆಚರಣೆ ಆರಂಭಿಸಿದರು ಎಂಬ ಐತಿಹ್ಯವಿದೆ.ಬಲಿಪಾಡ್ಯಮಿ ದಿನ ಮಧ್ಯಾಹ್ನದ ವೇಳೆಗೆ ಉರಿಯುವ ದೀವಟಿಗೆಗಳನ್ನು ಹಿಡಿದ ನೂರಾರು ಭಕ್ತರು ಈ ಉತ್ಸವಕ್ಕೆ ಚಾಲನೆ ನೀಡುತ್ತಾರೆ. ಖುರ್ಜು ಎಂದು ಕರೆಯುವ ಮರದ ಮಂಟಪಗಳಲ್ಲಿ ಭ್ರಮರಾಂಭ ದೇವಿ, ಮಲ್ಲಿಕಾರ್ಜುನಸ್ವಾಮಿ, ಹಾಗೂ ಬೆಳ್ಳಿ ಬಸಪ್ಪನ ಉತ್ಸವ ಮೂರ್ತಿಗಳನ್ನು ಹೊತ್ತು ಮೆರವಣಿಗೆಯಲ್ಲಿ ಹೊರಡುತ್ತಾರೆ.ಬೆಟ್ಟದಪುರದಿಂದ ಆರಂಭವಾಗುವ ಈ ದೀವಟಿಗೆ ಸೇವೆ ಬೆಟ್ಟದ ತುಂಗ, ತುಂಗದ ಕೊಪ್ಪಲು, ಕುಡಕೂರು ಕೊಪ್ಪಲು ಮಾರ್ಗವಾಗಿ ಕುಡಕೂರನ್ನು ಮುಸ್ಸಂಜೆಯ ವೇಳೆಗೆ ತಲುಪುತ್ತದೆ.ಕುಡಕೂರನ್ನು ತಲುಪಿ ಇಲ್ಲಿನ ಬಸವೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ದೀವಟಿಗೆ ಮೆರವಣಿಗೆ ಕೆಲ ಸಮಯ ವಿರಮಿಸಿಕೊಂಡು ರಾತ್ರಿ 10 ಗಂಟೆಗೆ ಬೆಟ್ಟದ ಪುರಕ್ಕೆ ಕಾಲುದಾರಿಯ ಮೂಲಕ ಸಾಗುತ್ತದೆ.ಬೆಟ್ಟದ ತುಂಗ ಮತ್ತು ಕುಡಕೂರಿನಲ್ಲಿ ನಡೆಯುವ ಈ ಉತ್ಸವ ಇನ್ನುಳಿದ ಗ್ರಾಮಗಳಿಗಿಂತ ವಿಶೇಷವಾಗಿರುತ್ತದೆ. ಈ ಸಂದರ್ಭದಲ್ಲಿ ಪ್ರತಿ ಮನೆಗಳ ಮುಂದೆ ಚಪ್ಪರ ಹಾಕಿ ರಂಗೋಲಿ ಬಿಡಿಸಿ ಉತ್ಸವ ಮೂರ್ತಿಗಳ ಸ್ವಾಗತಕ್ಕೆ ಅಲಂಕಾರಗೊಂಡಿರುತ್ತದೆ. ಈ ಸನ್ನಿವೇಶ ನೋಡಲು ಅಹ್ಲಾದಕರವಾಗಿರುತ್ತದೆ. ಈ ರೀತಿ ಅಲಂಕೃತಗೊಂಡ ಪ್ರತಿ ಮನೆಯ ಚಪ್ಪರದ ಮುಂದೆ ಉತ್ಸವ ಮೂರ್ತಿಗಳನ್ನು ಪೂಜಿಸುತ್ತಾರೆ.ಕೆಲ ವರ್ಷಗಳ ಹಿಂದೆ ವಿವಿಧ ರೀತಿಯ ಜನಪದ ಕ್ರೀಡೆಗಳು ಕುಸ್ತಿ, ಗೂಳಿ ಕಾಳಗ, ಟಗರು ಕಾಳಗ, ಇತ್ಯಾದಿಗಳು ನಡೆಯುತ್ತಿದ್ದವು. ಈಗ ಈ ಪ್ರದರ್ಶನಗಳು ಕಡಿಮೆಯಾಗಿವೆ.  ಇದೆಲ್ಲ ಮುಗಿಯುವ ಹೊತ್ತಿಗೆ ರಾತ್ರಿ ಸುಮಾರು 10 ಗಂಟೆಯಾಗಿರುತ್ತದೆ. ಆನಂತರ ಉತ್ಸವ ಮೂರ್ತಿಗಳೊಂದಿಗೆ ಪಂಜಿನ ಮೆರವಣಿಗೆ ಕಾಲುದಾರಿಯಲ್ಲಿ ಬೆಟ್ಟದಪುರಕ್ಕೆ ಸಾಗುತ್ತದೆ. ಇಲ್ಲಿನ ದೀವಟಿಗೆ ಸೇವೆ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

 

ದೀವಟಿಗೆಗಳ ಬೆಳಕು ಕತ್ತಲನ್ನು ಸೀಳಿ ಬೆಳಕನ್ನು ಮೂಡಿಸುವ ದೃಶ್ಯವನ್ನು ಸವಿಯಲು ಸಾವಿರಾರು ಭಕ್ತರು  ಸೇರುತ್ತಾರೆ. ಸಂಜೆಗತ್ತಲಿನಲ್ಲಿ ಸಾಗುವ ದೀವಟಿಗೆಗಳ  ಮೆರವಣಿಗೆ ನೋಡಿದರೆ ದೀಪಗಳಿಗೆ ಕಾಲು ಮೂಡಿದವೇನೋ ಎಂಬಂತೆ ಭಾಸವಾಗುತ್ತವೆ. ಮೈಸೂರು ದಸರಾದ ಪಂಜಿನ ಕವಾಯತು ಈ ಸಮಯದಲ್ಲಿ ನೆನಪಿಗೆ ಬರುತ್ತದೆ.ಈ ದೀವಟಿಗೆ ಸೇವೆಯ ವೇಳೆ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭರನ್ನು ಕುರಿತು ಜನಪದ ಮಟ್ಟುಗಳನ್ನು ಭಕ್ತರು ಉತ್ಸಾಹದಿಂದ ಹಾಡುತ್ತಾ, ಕುಣಿಯುತ್ತಾ ಗಮನ ಸೆಳೆಯುತ್ತಾರೆ.ಪಂಜಿನ ಮೆರವಣಿಗೆ ಸಾಗುವಾಗ ದೀವಟಿಗೆ ಹಿಡಿದವರಿಗೆ ಭಕ್ತರು ನೀರುಮಜ್ಜಿಗೆ, ಪಾನಕ, ಕೋಸಂಬರಿ ಇತ್ಯಾದಿಗಳನ್ನು ನೀಡಿ ತಮ್ಮ ಸೇವೆಯನ್ನು ಮೆರೆಯುತ್ತಾರೆ. ಕೆಲವರು ಅರವಟ್ಟಿಗೆಗಳನ್ನು ಇಟ್ಟು  ಸೇವೆಯನ್ನು ಸಲ್ಲಿಸುತ್ತಾರೆ. ಜೊತೆಗೆ ಬಲಿಪಾಡ್ಯಮಿಯ ದಿನ ಬಹುತೇಕ ಮನೆಗಳಲ್ಲಿ ಚಿರೋಟಿ ಮಾಡುತ್ತಾರೆ. ಇದು ಕೂಡ ಇಲ್ಲಿನ ಸಂಪ್ರದಾಯ.ಕುಡಕೂರಿನ ಮತ್ತು ಬೆಟ್ಟದ ತುಂಗದ ಅರಸು ಮನೆತನದವರಿಗೆ ದೀವಟಿಗೆ ಸೇವೆ ಉತ್ಸವ ಒಂದು ಪ್ರತಿಷ್ಠೆಯ ಹಬ್ಬ. ಇದಕ್ಕಾಗಿ ಅವರು ಎರಡು ತಿಂಗಳು ಮುಂಚಿನಿಂದಲೇ ತಯಾರಿ ನಡೆಸುತ್ತಾರೆ.

 

ಚಂಗಾಳ್ವ ಅರಸು ಪರಂಪರೆಯ ಬೆಟ್ಟದ ತುಂಗ ಯಜಮಾನರ ವಂಶಸ್ಥರಾದ ಕೈಗಾರಿಕೋದ್ಯಮಿ ಟಿ.ಎಂ. ರವಿರಾಜ ಅರಸ್ ಹಾಗು ಕುಡುಕೂರಿನ ಯಜಮಾನರಾಗಿದ್ದ ಸಂಗರಾಜೇ ಅರಸರ ಸಂತತಿಯವರಾದ ಕೆ.ಬಿ. ವೀರರಾಜೇ ಅರಸು ಹಾಗೂ ವೀರರಾಜೇ ಅರಸು ಅವರ ಮಕ್ಕಳಾದ ಜಯಪ್ರಕಾಶರಾಜೇ ಅರಸು ಅವರು ಇಂದಿಗೂ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.ಈ ಪಾರಂಪರಿಕ ಪದ್ಧತಿಯ ಪ್ರಕಾರ ವೀರರಾಜೇ ಅರಸರ ಮನೆಯವರು ಜಾತ್ರೆಗೆಂದು ಬರುವ ಸಮಸ್ತ ಜನರಿಗೂ ಊಟ ಉಪಚಾರಗಳ ವ್ಯವಸ್ಥೆ ಮಾಡುತ್ತಾರೆ.  ಇದರಿಂದಾಗಿ ಜಾತ್ರೆಗೆ ಬರುವ ಯಾರೊಬ್ಬರೂ ಊಟಕ್ಕಾಗಿ ಪರದಾಡುವಂತಿಲ್ಲ. ಈ ಉತ್ಸವ ಕತ್ತಲಿನಲ್ಲಿ ಸಾಲುಗಳಲ್ಲಿ ಸಾಗುವ ದೀವಟಿಗೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿದರೆ ರುಚಿರುಚಿಯಾದ ಊಟ  ಜನರಿಗೆ ತೃಪ್ತಿ ನೀಡುತ್ತದೆ.ಒಂದು ಪಂಜಿನಿಂದ ಇನ್ನೊಂದು ಪಂಜನ್ನು ಉರಿಸಲು ಇಲ್ಲಿ ಅವಕಾಶವಿದೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಅಂತರಂಗದಲ್ಲಿ ಬೆಳಕನ್ನು ಮೂಡಿಸಬಲ್ಲ ಎನ್ನುವ ಸಾಂಕೇತಿಕ ರೂಪವೇ ಈ ದೀವಟಿಗೆ ದೀಪಾವಳಿಯ ವೈಶಿಷ್ಟ್ಯ.ಆಸಕ್ತರು ಇದೇ ಬಲಿಪಾಡ್ಯಮಿಯ ದಿನ ಈ ಉತ್ಸವದಲ್ಲಿ ಭಾಗವಹಿಸಿ ದೀವಟಿಗೆ ದೀಪಾವಳಿ ಸಂಭ್ರಮವನ್ನು  ಕಣ್ತುಂಬಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.