ದುಂಡಾಣು, ಡೈಬ್ಯಾಕ್ ರೋಗಕ್ಕೆ ದಾಳಿಂಬೆ ಬಲಿ: ರೈತ ಕಂಗಾಲು

7

ದುಂಡಾಣು, ಡೈಬ್ಯಾಕ್ ರೋಗಕ್ಕೆ ದಾಳಿಂಬೆ ಬಲಿ: ರೈತ ಕಂಗಾಲು

Published:
Updated:
ದುಂಡಾಣು, ಡೈಬ್ಯಾಕ್ ರೋಗಕ್ಕೆ ದಾಳಿಂಬೆ ಬಲಿ: ರೈತ ಕಂಗಾಲು

ಬಾಗಲಕೋಟೆ: ಜಿಲ್ಲೆಯ ರೈತರ ಪ್ರಮುಖ ತೋಟಗಾರಿಕಾ ಬೆಳೆಯಾದ ದಾಳಿಂಬೆಗೆ ದುಂಡಾಣು ಅಂಗಮಾರಿ  ಮತ್ತು ಡೈಬ್ಯಾಕ್(ಒಣಗುವುದು) ಎಂಬ ರೋಗಗಳು ಕಾಣಿಸಿಕೊಂಡಿದ್ದು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ದಾಳಿಂಬೆ ಗಿಡಗಳು ಒಣಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ದುಂಡಾಣು ಅಂಗಮಾರಿ ಮತ್ತು ಡೈಬ್ಯಾಕ್ ರೋಗಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಅನೇಕ ರೈತರು ತಮ್ಮ ಹೊಲದಲ್ಲಿ ಒಣಗಿ ನಿಂತಿರುವ ದಾಳಿಂಬೆ ಗಿಡಗಳನ್ನು ಕಿತ್ತುಹಾಕುತ್ತಿದ್ದಾರೆ. ಅಧಿಕ ವರಮಾನ ನೀಡುತ್ತದೆ ಎಂಬ ಆಸೆಯಿಂದ ಸಾಲ ಮಾಡಿ ಬೆಳೆಸಿದ ದಾಳಿಂಬೆ ಕೈಕೊಟ್ಟಿರುವುದರಿಂದ ರೈತರು ದಿಕ್ಕಲತೋಚದೇ ಕಂಗಾಲಾಗಿದ್ದಾರೆ.ಜಿಲ್ಲೆಯ ಕಲಾದಗಿ, ಗೋವನಕೊಪ್ಪ, ಲೋಕಾಪುರ, ಕೆರೂರ ಹೋಬಳಿ ವ್ಯಾಪ್ತಿಯಲ್ಲಿ  ಒಟ್ಟು 1,200 ಹೆಕ್ಟೇರ್ ಪ್ರದೇಶದಲ್ಲಿ ರೈತರು ದಾಳಿಂಬೆ ಬೆಳೆದ್ದಿದ್ದಾರೆ. ಕೆಲವೆಡೆ ಕನಿಷ್ಠ ಶೇ 10 ರಿಂದ ಗರಿಷ್ಠ ಶೇ 80ರಷ್ಟು ಭಾಗದಲ್ಲಿ ಈ ರೋಗ ವ್ಯಾಪಿಸಿದೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಸ್.ಡಿ. ಬಿದ್ದಿಮನಿ `ಪ್ರಜಾವಾಣಿ~ಗೆ ತಿಳಿಸಿದರು.ಕೆಲವೆಡೆ ದುಂಡಾಣು ಅಂಗಮಾರಿ ಮತ್ತೆ ಹಲವೆಡೆ ಡೈಬ್ಯಾಕ್ ರೋಗ ಕಾಣಿಸಿಕೊಂಡಿದೆ.  ಹವಾಮಾನ ವೈಪರಿತ್ಯ ಮತ್ತು ಮಣ್ಣಿನಲ್ಲಿರುವ ಲವಣಾಂಶ ಆಧಾರವಾಗಿ ಈ ರೋಗ ಹರಡುತ್ತಿದೆ. ಈ ಸಂಬಂಧ ತಜ್ಞರು ಸಾಕಷ್ಟು ಪರೀಕ್ಷೆ ನಡೆಸಿದ್ದಾರೆ ಎಂದು ಅವರು ಹೇಳಿದರು.ಜಿಲ್ಲೆಯಲ್ಲಿ ಪ್ರಮುಖವಾಗಿ ಗಣೇಶ, ಜ್ಯೋತಿ ಮತ್ತು ಭಗ್ವ ಎಂಬ ದಾಳಿಂಬೆ ತಳಿಯನ್ನು ಬೆಳೆಯಲಾಗುತ್ತಿದೆ. ಗಣೇಶ ಮತ್ತು ಜ್ಯೋತಿ ತಳಿಯ ಗಿಡಗಳಿಗಿಂತ ಹೆಚ್ಚಾಗಿ ಭಗ್ವ ತಳಿಯ ದಾಳಿಂಬೆ ತಳಿಯಲ್ಲಿ ಈ ರೋಗ ವ್ಯಾಪಕವಾಗಿ ಕಂಡು ಬರುತ್ತಿದೆ.ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಬೀಳಗಿ ತಾಲ್ಲೂಕಿನ ಅನಗವಾಡಿಯ ರೈತ ಶ್ರೀಶೈಲಗೌಡ, ಅರ್ಧಕ್ಕೂ ಅಧಿಕ ಎಕರೆಯಲ್ಲಿ ತಾವು ಬೆಳೆದಿರುವ ದಾಳಿಂಬೆ ತೋಟ ಡೈಬ್ಯಾಕ್ ಎಂಬ ಈ ವಿಚಿತ್ರ ರೋಗಕ್ಕೆ ತುತ್ತಾಗಿದೆ. ನಿಂತಲೇ ಒಣಗಿ ಹೋಗಿದೆ, ಯಾವುದೇ ಔಷಧಿ ಸಿಂಪಡಿಸಿದರೂ ಇದುವರೆಗೂ ರೋಗ ನಿವಾರಣೆಯಾಗಿಲ್ಲ ಎಂದರು.`ಕೃಷಿ ವಿಜ್ಞಾನಿಗಳು, ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ದಾಳಿಂಬೆಗೆ ತಗುಲಿರುವ ಈ ರೋಗವನ್ನು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಆದರೆ ಇದುವರೆಗೂ ರೋಗಕ್ಕೆ ಪರಿಹಾರ ಸಿಕ್ಕಿಲ್ಲ. ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ಸಾಕಷ್ಟು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡುವುದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರ ತಕ್ಷಣ ಕೃಷಿ ತಜ್ಞರನ್ನು ನೇಮಿಸಿ, ರೋಗದ ಕಾರಣಗಳನ್ನು ಪತ್ತೆಹಚ್ಚಿ ಬೆಳೆಗಾರರನ್ನು ರಕ್ಷಿಸಬೇಕು~ ಎಂಬುದು ಅವರ ಒತ್ತಾಯ.ರಾಜ್ಯದಲ್ಲಿ ದಾಳಿಂಬೆ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ವಿಜಾಪುರ, ಚಿತ್ರದುರ್ಗ, ಕೊಪ್ಪಳ ಮತ್ತು ತುಮಕೂರು ಜಿಲ್ಲೆಯಲ್ಲೂ ದುಂಡಾಣು ಅಂಗಮಾರಿ ಮತ್ತು ಡೈಬ್ಯಾಕ್ ರೋಗ ಕಾಣಿಸಿಕೊಂಡು ಹಲವಾರು ವರ್ಷಗಳೇ ಕಳೆದರೂ ರೋಗ ನಿವಾರಣೆಗೆ ಕೃಷಿ ವಿಜ್ಞಾನಿಗಳಾಗಲಿ, ಸರ್ಕಾರವಾಗಲಿ ಯಾವುದೇ  ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸುತ್ತಾರೆ ರೈತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry