ಸೋಮವಾರ, ನವೆಂಬರ್ 18, 2019
28 °C

`ದುಃಖ ದೂರ ಮಾಡುವ ದೇವರ ನಂಬಿ'

Published:
Updated:

ಕುರುಗೋಡು: ತುಲಾಭಾರದಿಂದ ಬರುವ ಹಣ ಅನಾಥ ಹಾಗೂ ಅಂಧ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸದ್ವಿನಿಯೋಗವಾಗುತ್ತದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ತಿಳಿಸಿದರು.ಇಲ್ಲಿಗೆ ಸಮೀಪದ ಗೆಣಿಕೆಹಾಳು ಗ್ರಾಮದಲ್ಲಿ ಶರಣ ಬಸವೇಶ್ವರ ಪುರಾಣ ಮುಕ್ತಾಯ ಸಮಾರಂಭದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ತುಲಾಭಾರ ಸೇವೆ ಸ್ವೀಕರಿಸಿ ಮಾತನಾಡಿದ ಅವರು, ಸದಾ ಸುಖವನ್ನೇ ಬಯಸುವ ಮಾನವರನ್ನು ಆಶ್ರಯಿಸದೇ ನಂಬಿದರೆ ಸುಖಕೊಟ್ಟು ದುಃಖವನ್ನು ದೂರ ಮಾಡುವ ದೇವರನ್ನು ನಂಬಿ ಜೀವಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.ಸಮಾಜದ ಎಲ್ಲ ವರ್ಗದ ಜನರಿಗೆ ಬೇಡವಾದ ಮಕ್ಕಳು ವೀರೇಶ್ವರ ಪುಣ್ಯಾಶ್ರಮದಲ್ಲಿ ಆಶ್ರಯ ಪಡೆದು ಸಮಾಜದಲ್ಲಿ ತಮ್ಮಿಂದ ಆಗುವ ಅಳಿಲು ಸೇವೆ ಮಾಡುತ್ತಿದ್ದಾರೆ ಎಂದು ಆಶ್ರಮದ ವೈಶಿಷ್ಟತೆಯನ್ನು ವಿವರಿಸಿದರು. `ಇಂದು ನೀವು ನೆರವೇರಿಸಿದ ತುಲಾಭಾರ ಸೇವೆ ನನಗಲ್ಲ. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳಿಗೆ ಸಲ್ಲಿಸಿದ ತುಲಾಭಾರವಾಗಿದೆ' ಎಂದು ಹೇಳಿದರು.ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥ ಸಾಧನೆಗಿಂತ ಸಮುದಾಯದ ಅಭಿವೃದ್ಧಿಗೆ ನೆರವಾಗುವ ಮನಸ್ಸು ಮುಖ್ಯ. ಅಂಥ ಮನಸ್ಸುಗಳು ಎಲ್ಲೆಡೆ ಬೆಳಗುತ್ತವೆ. ಸಮಾಜದ ಆಸ್ತಿಯಾಗಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ. ಅಂಥ ವ್ಯಕ್ತಿತ್ವವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅದಕ್ಕೆ ಆತ್ಮವಿಶ್ವಾಸದ ನಡೆದ ಮುಖ್ಯ ಎಂದು ನುಡಿದರು.ಪುರಾಣ ಸಮಿತಿ ವತಿಯಿಂದ ತುಲಾಭಾರ ನೆರವೇರಿಸಿದರೆ, ಗ್ರಾಮದ ಎಸ್. ಶಾಂತನಗೌಡ, ಅರ‌್ವಿ ತಿಮ್ಮನಗೌಡ, ವೈ. ಪಾಲಾಕ್ಷಿಗೌಡ, ಕೆ.ಆರ್. ಮರೇಗೌಡ, ಆರ್. ಮಲ್ಲಿಕಾರ್ಜುನಗೌಡ, ಬೇವಿನಹಳ್ಳಿ ಈರಮ್ಮ ಕುಟುಂಬದವರು ಪ್ರತ್ಯೇಕವಾಗಿ ತುಲಾಭಾರ ಸೇವೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಕಳೆದ 15 ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ಹೇಮರಾಜಶಾಸ್ತ್ರಿ ಪುರಾಣ ಪ್ರವಚನ ನೀಡಿದರು. ಚನ್ನಬಸವರಾಜ ತಬಲಾ ಸಾಥ್ ನೀಡಿದರು. ಮಲ್ಲಿಕಾರ್ಜುನ ಗವಾಯಿ ಸಂಗೀತ ಸೇವೆ ಸಲ್ಲಿಸಿದರು. ಜಯಂತ್ ಕಾರ್ಯಕ್ರಮ ನಿರೂಪಿಸಿದರು.ಅರ‌್ವಿ ತಿಮ್ಮಪ್ಪ, ವಿರೂಪಾಕ್ಷಪ್ಪ, ಮರೇಗೌಡ, ಎಸ್. ಶಾಂತನಗೌಡ, ಜಿ.ಎಂ. ಶಾಂತಯ್ಯಸ್ವಾಮಿ, ಎಂ. ಧರ್ಮವೀರ, ರವಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)