ದುಃಸ್ಥಿತಿಯಲ್ಲಿ ಬೆನ್ನಿಗಾನಹಳ್ಳಿ ಕೆರೆ

7

ದುಃಸ್ಥಿತಿಯಲ್ಲಿ ಬೆನ್ನಿಗಾನಹಳ್ಳಿ ಕೆರೆ

Published:
Updated:
ದುಃಸ್ಥಿತಿಯಲ್ಲಿ ಬೆನ್ನಿಗಾನಹಳ್ಳಿ ಕೆರೆ

ಕೃಷ್ಣರಾಜಪುರ: ಇಲ್ಲಿಗೆ ಸಮೀಪದ ಬೆನ್ನಿಗಾನಹಳ್ಳಿ ಕೆರೆ ಸುಮಾರು 30 ಎಕರೆಯಷ್ಟು ಪಸರಿಸಿದೆ. ಬಹುಶಃ ಈ ಭಾಗದಲ್ಲಿ ಒತ್ತುವರಿಯಾಗದೆ ಉಳಿದಿರುವ ಬೆರಳಣಿಕೆಯಷ್ಟು ಹಾಗೂ ಕೆರೆಗಳಲ್ಲಿ ನಾಗರಿಕರು ಗುರುತಿಸುವಂತಹ ಕೆರೆಗಳಲ್ಲಿ ಇದೂ ಒಂದಾಗಿದೆ ಎನ್ನಬಹುದು.ಒಂದೂವರೆ ವರ್ಷದ ಹಿಂದೆ ಕೆರೆಯನ್ನು ಸ್ವಚ್ಛಗೊಳಿಸಿದ್ದರಿಂದ ಅದು ನೋಡುಗರ ಕಣ್ಮನ ತಣಿಸುವಂತಿತ್ತು. ಆದರೆ, ಆ ಕೆರೆಯೊಳಗೆ ಇದೀಗ ಹುಲ್ಲು ಬೆಳೆದು ವಿಷ ಜಂತುಗಳ ಉಗಮ ಸ್ಥಾನವಾಗಿದೆ. ಹುಲ್ಲಿನ ಜತೆಗೆ ಜಂಡು ಬೆಳೆದು ಶುಚಿತ್ವ ಕಾಣದೆ ಕೆರೆಯ ಪಕ್ಕದಲ್ಲಿನ ಪೈ ಬಡಾವಣೆ, ವಿಜನಾಪುರ, ಉದಯನಗರ ಹಾಗೂ ಚೆನ್ನಸಂದ್ರ ನಿವಾಸಿಗಳ ವಾಯುವಿಹಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.`ಕೆರೆ ಅಭಿವೃದ್ಧಿಪಡಿಸಲು ಬಿಬಿಎಂಪಿ ತೋರುತ್ತಿರುವ ನಿರ್ಲಕ್ಷ್ಯದಿಂದ ನೀರು ಮಲಿನಗೊಂಡು ಕಪ್ಪು ಬಣ್ಣಕ್ಕೆ ತಿರುಗಿ ಕೆಟ್ಟ ವಾಸನೆ ಬರುತ್ತಿದೆ. ಅಲ್ಲದೆ, ಸುತ್ತಲಿನ ಜನರ ಅನಾರೋಗ್ಯಕ್ಕೂ ಎಡೆ ಮಾಡಿಕೊಟ್ಟಿದೆ~ ಎಂದು ಹಿರಿಯ ನಾಗರಿಕ ವೇಣುಗೋಪಾಲ್ ಆರೋಪಿಸಿದರು.`ಕೆರೆಯ ಮಗ್ಗುಲಲ್ಲಿರುವ ಉದ್ಯಾನ ಕೂಡ ಸ್ವಚ್ಛತೆ ಕಾಣದೆ, ಪುಂಡರು, ಕಳ್ಳರು ಹಾಗೂ ಮದ್ಯವ್ಯಸನಿಗಳ ಕಾರ್ಯ ಸ್ಥಾನವಾಗಿದೆ. ಇದರಿಂದ ವಾತಾವರಣ ಕೂಡ ಹದಗೆಡುತ್ತಿದೆ~ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.ಬಿಬಿಎಂಪಿ ಸ್ಪಷ್ಟನೆ: ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್ ಮಾತನಾಡಿ, `ಒಂದೂವರೆ ವರ್ಷದ ಹಿಂದೆ ಕೆರೆಯ ಹೂಳು ತೆಗೆದು ಅಭಿವೃದ್ಧಿಗೊಳಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಂದಿನ ಕ್ರಮಕ್ಕಾಗಿ ಕಡತ ಕಳುಹಿಸಲಾಗಿದೆ~ ಎಂದು ತಿಳಿಸಿದರು.ಆರ್ಟ್ ಆಫ್ ಲಿವಿಂಗ್: ಈ ಕುರಿತು ಪ್ರತಿಕ್ರಿಯಿಸಿರುವ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ, `ಕೆರೆ ಅಭಿವೃದ್ಧಿಪಡಿಸುವುದು ಸಂಸ್ಥೆ ಉದ್ದೇಶ. ಸ್ವಯಂಸೇವಕರು ಈಗಾಗಲೇ ಕೆರೆಯಲ್ಲಿ ಪಾರ್ಥೇನಿಯಂ ಮತ್ತು ಕುರುಚಲು ಗಿಡತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಯ ಪರಿಸರ ಹಾಳಾಗದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

 

ನಾಗರಿಕರ ಸಹಕಾರದೊಂದಿಗೆ ಕೆರೆ, ಪರಿಸರ ಹಾಗೂ ಉದ್ಯಾನವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡಲಿದೆ. ಶಾಸಕರೊಡನೆ ಮೂರ‌್ನಾಲ್ಕು ದಿನಗಳಲ್ಲಿ ಚರ್ಚಿಸಿ ಕೆರೆಯ ನೀರಿನ ಶುದ್ಧೀಕರಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry