ದುಃಸ್ವಪ್ನದಂತೆ ಕಾಡುತ್ತಿದೆ ನಮ್ಮಮೆಟ್ರೊ

7

ದುಃಸ್ವಪ್ನದಂತೆ ಕಾಡುತ್ತಿದೆ ನಮ್ಮಮೆಟ್ರೊ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಎಂದು ಸರ್ಕಾರ ಹೆಮ್ಮೆಯಿಂದ ಹೇಳಬಹುದಷ್ಟೇ, ಆದರೆ ನಮ್ಮ ಪಾಲಿಗೆ ಇದು ದುಃಸ್ವಪ್ನದಂತೆ ಕಾಡುತ್ತಿದೆ. ವಾಹನಗಳ ದಟ್ಟಣೆ ಒಂದೆಡೆಯಾದರೆ, ಕಾಮಗಾರಿಯಿಂದ ಏಳುವ ದೂಳು ನಮ್ಮನ್ನು ಆಸ್ಪತ್ರೆಯೆಡೆ ಮುಖ ಮಾಡುವಂತೆ ಮಾಡಿದೆ. ನಮ್ಮ ಆರೋಗ್ಯವನ್ನು ಇದು ಬಲಿ ತೆಗೆದುಕೊಳ್ಳುತ್ತಿದೆ...

-ಹೆಸರಘಟ್ಟ ಕ್ರಾಸ್‌ನಿಂದ ಯಶವಂತಪುರದವರೆಗೆ ನಡೆಯುತ್ತಿರುವ ಮೆಟ್ರೊ ಕಾಮಗಾರಿಯ ‘ಫಲಾನುಭವಿಗಳ’ ಮಾತಿದು.ಮೆಟ್ರೊ ಯೋಜನೆಯ ಉತ್ತರ-ದಕ್ಷಿಣ ಕಾರಿಡಾರ್‌ನ ಮಾರ್ಗದ ನಡುವೆ ಈ ಪ್ರದೇಶ ಇದೆ. ಕಾರಿಡಾರ್‌ನ ಆರಂಭಿಕ ಕೇಂದ್ರವಾಗಿರುವ ಹೆಸರಘಟ್ಟ ಕ್ರಾಸ್‌ನಲ್ಲಿ ನಿಲ್ದಾಣದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅಲ್ಲಿಂದ ದಾಸರಹಳ್ಳಿ, ಜಾಲಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಯಶವಂತ ಪುರದವರೆಗೂ ನಡೆಯುತ್ತಿದೆ.ಪುಟ್ಟೇನಹಳ್ಳಿವರೆಗಿನ ಈ ಕಾರಿಡಾರ್ ಸುಮಾರು 24 ಕಿ.ಮೀ ಉದ್ದವಿದೆ. ಇದರಲ್ಲಿ ಯಶವಂತಪುರದವರೆಗಿನ ಅಂತರ ಸುಮಾರು 12-13 ಕಿ.ಮೀ ಇದೆ.ಯಶವಂತಪುರ ಹಾಗೂ ಪೀಣ್ಯದ ಸುತ್ತಮುತ್ತ ಹಲವಾರು ಗಾರ್ಮೆಂಟ್ಸ್ ಫ್ಯಾಕ್ಟರಿಗಳು, ಸಣ್ಣ ಕೈಗಾರಿಕೆಗಳು ಇರುವುದರಿಂದ ಸಾವಿರಾರು ಕಾರ್ಮಿಕರ ಓಡಾಟ ಇಲ್ಲಿ ಸಾಮಾನ್ಯ. ಅಲ್ಲದೇ, ನೆಲಮಂಗಲ, ತುಮಕೂರು ಮೂಲಕ ಹೋಗುವ ವಾಹನಗಳು ಈ ಮಾರ್ಗವನ್ನು ಬಳಸುತ್ತವೆ. ಪ್ರತಿ ಗಂಟೆಗೆ 15,000 ವಾಹನಗಳು ಸಂಚರಿಸುತ್ತವೆ.ಇವು ಉಗುಳುವ ಹೊಗೆ ಹಾಗೂ ಮೆಟ್ರೊ ಪಿಲ್ಲರ್‌ಗಳ ಅಳವಡಿಕೆ ಕಾಮಗಾರಿಯಿಂದಾಗಿ ಇಡೀ ವಾತಾವರಣ ಕಲುಷಿತಗೊಂಡಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಪ್ರತಿದಿನ ಮೆಟ್ರೊ ಕಾಮಗಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ತೀವ್ರವಾಗಿ ಕಾಡುತ್ತಿರುವ ಆರೋಗ್ಯದ ಸಮಸ್ಯೆ: ‘ಆರು ತಿಂಗಳಿನಿಂದ ಈ ಕಾಮಗಾರಿ ನಡೆಯುತ್ತಿದೆ. ಅಡಿ ಅಡಿಗೂ ನಿಲ್ಲುವ ವಾಹನಗಳು, ಅವುಗಳು ಉಗುಳುವ ಹೊಗೆ, ಕಾಮಗಾರಿಯಿಂದ ಏಳುವ ದೂಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ’ ಎಂದು ಹಲವು ಜನ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.‘ಈಗಾಗಲೇ ಹಲವು ಜನ ನೆರೆಹೊರೆಯವರು ಅಸ್ತಮಾ, ಕೆಮ್ಮು ಎಂದು ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ಮಕ್ಕಳು ಹಾಗೂ ತಾತಂದಿರರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.ನಮಗೆ ಯಾವಾಗ ಈ ಸ್ಥಿತಿ ಬರುತ್ತದೆಯೋ ಎಂದು ಆತಂಕ ಉಂಟಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.  ‘ಜಾಗ ತೆಗೆದುಕೊಂಡಿದ್ದಕ್ಕೆ, ಮನೆ ಕೆಡವಿಹಾಕಿದ್ದಕ್ಕೆ ಸರ್ಕಾರ ಪರಿಹಾರ ನೀಡಿದೆ. ಆದರೆ, ಈಗ ಹದೆಗೆಡುತ್ತಿರುವ ಆರೋಗ್ಯದ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳಲು ಸಾಧ್ಯ? ನಮ್ಮಗಳ ಹೆಣಗಳ ಮೇಲೆ ‘ಮೆಟ್ರೊ’ ಓಡಿಸಲು ಸಹ ಇವರು ಹಿಂಜರಿಯಲಾರರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಾಹನ ದಟ್ಟಣೆ ಸಮಸ್ಯೆ: ಗೊರಗುಂಟೆ ಪಾಳ್ಯ ರಸ್ತೆಯ ನಡುವೆ ಪಿಲ್ಲರ್‌ಗಳನ್ನು ಅಳವಡಿಸುತ್ತಿರುವುದರಿಂದ ಎರಡೂ ಬದಿಯ ರಸ್ತೆಗಳು ಚಿಕ್ಕದಾಗಿವೆ. ಬಸ್, ಲಾರಿಯಂತಹ ದೊಡ್ಡ ದೊಡ್ಡ ವಾಹನಗಳನ್ನು ಓಡಿಸುವ ಚಾಲಕರಿಗೆ ಸವಾಲೇ ಸರಿ. ‘ಗೋವರ್ಧನ ಚಿತ್ರಮಂದಿರ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದ ನಡುವೆಯೂ ಇದೇ ಸಮಸ್ಯೆ. ರಸ್ತೆ ಅತ್ಯಂತ ಕಿರಿದಾಗಿದೆ. ಕೇವಲ ಒಂದು ಬಸ್ ಹೋಗುವಷ್ಟು ಜಾಗ ಮಾತ್ರ ಇರುವುದು ಇಲ್ಲಿ. ಬೆಳಿಗ್ಗೆ ಹಾಗೂ ಸಂಜೆ ವಾಹನಗಳ ದಟ್ಟಣೆ ಜಾಸ್ತಿ ಇದ್ದಾಗಂತಲೂ ಚಾಲಕರ ಸ್ಥಿತಿ ಕೇಳತೀರದು’ ಎಂದು ಆಟೊ ಚಾಲಕರ ಅಳಲು.‘ಕಾಮಗಾರಿ ಆರಂಭವಾದಾಗಿನಿಂದ ಆಟೊ ಕೇಳಿಕೊಂಡು ಬರುವ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಬಹಳಷ್ಟು ಜನರು ಈ ಮಾರ್ಗದಲ್ಲಿ ಬರುವುದನ್ನೇ ನಿಲ್ಲಿಸಿದ್ದಾರೆ. ನಮ್ಮ ಆದಾಯ ಸಾಕಷ್ಟು ಕಡಿಮೆಯಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.‘ವಾಹನ ಸಂಚಾರ ದಟ್ಟಣೆಯಿಂದಾಗಿ ಎಷ್ಟೋ ಸಲ ನಿಗದಿತ ಅವಧಿಗೆ ಕಂಪೆನಿಗೆ ಹೋಗಲು ಸಾಧ್ಯವಾಗುವುದಿಲ್ಲ’ ಎಂದು ಗಾರ್ಮೆಂಟ್ಸ್ ಉದ್ಯೋಗಿ ರಾಜು ನುಡಿದರು. ‘ಕಂಪೆನಿಯವರೇ ವಾಹನ ಸೌಲಭ್ಯ ಮಾಡಿರುವುದರಿಂದ ಆರ್ಥಿಕವಾಗಿ ನಮಗೇನೂ ನಷ್ಟವಿಲ್ಲ’ ಎಂದು ಅವರು ಹೇಳಿದರು.‘ಮುಖ್ಯ ರಸ್ತೆಯಷ್ಟೇ ಅಲ್ಲದೇ ಸರ್ವಿಸ್ ರಸ್ತೆಯಲ್ಲೂ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.  ಬಸ್ ಹಾಗೂ ಆಟೊ ಸೌಕರ್ಯ ಸಾಕಷ್ಟು ಇರುವುದರಿಂದ ಮೆಟ್ರೊ ರೈಲಿನಿಂದ ಹೇಳಿಕೊಳ್ಳುವಂತಹ ಪ್ರಯೋಜನ ಏನೂ ಆಗುವುದಿಲ್ಲ’ ಎಂದು ಅವರು ನುಡಿದರು.ಬದಲಿ ಮಾರ್ಗಗಳನ್ನು ಬಳಸಿ: ‘ಸಾಧ್ಯವಾದಷ್ಟು ಮುಖ್ಯ ರಸ್ತೆಗೆ ಬಾರದೇ ವಾಹನ ಚಾಲಕರು ಒಳರಸ್ತೆಗಳನ್ನು ಬಳಸಿದರೆ ಟ್ರಾಫಿಕ್ ಕೊಂಚ ಕಡಿಮೆಯಾಗಬಹುದು’ ಎಂದು ಸ್ಥಳೀಯ ನಿವಾಸಿಗಳು ಸಲಹೆ ನೀಡಿದರು.‘ಕೆಎಲ್‌ಇ ದಂತ ವೈದ್ಯಕೀಯ ಕಾಲೇಜಿನಿಂದ ಪಾರ್ಲೆ ಬಿಸ್ಕಟ್ ಫ್ಯಾಕ್ಟರಿಯವರೆಗೆ ಮೇಲು ಸೇತುವೆ ಇರುವುದರಿಂದ ಸ್ವಲ್ಪ ಪರವಾಗಿಲ್ಲ. ಇಲ್ಲಿಂದ ವಾಹನಗಳು ಸಲೀಸಾಗಿ ಸಂಚರಿಸುತ್ತವೆ’ ಎಂದು ಅವರು ಹೇಳಿದರು.ವಿದ್ಯಾರ್ಥಿಗಳ ಸಮಸ್ಯೆ: ‘ನವರಂಗ್, ಮಲ್ಲೇಶ್ವರದಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿಗೆ ಈ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಹೋಗುತ್ತಾರೆ. ವಾಹನ ದಟ್ಟಣೆ ಸಮಸ್ಯೆಯಿಂದ ನಮಗೆಲ್ಲ ಅನಾನುಕೂಲವಾಗುತ್ತದೆ. ನಾಲ್ಕು ತಾಸಿನ ಕ್ಲಾಸಿಗಾಗಿ ಆರು ತಾಸು ಬಸ್‌ನಲ್ಲಿ ಕಳೆದರೆ ಎಷ್ಟೊಂದು ಸಮಯ ಪೋಲಾದಂತೆ ಅಲ್ಲವೇ?’ ಎನ್ನುವುದು ಹಲವು ವಿದ್ಯಾರ್ಥಿಗಳ ಮಾತು.ಸಂಚಾರ ಪೊಲೀಸರ ಸಂಕಷ್ಟ: ಈ ಮಾರ್ಗದ ನಡುವೆ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ಪ್ರತಿ ವೃತ್ತದಲ್ಲಿಯೂ 2-3 ಜನ ಸಂಚಾರ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಕಾಮಗಾರಿ ಪೂರ್ಣಗೊಳ್ಳುವವರೆಗೆ ಏನೂ ಮಾಡಲಾಗದು. ಎಲ್ಲರೂ ಸಹಕರಿಸಬೇಕು, ವಾಹನ ಚಾಲಕರು ಟ್ರಾಫಿಕ ಸೂಚನೆಗಳನ್ನು ಪಾಲಿಸಿದರೆ ವಾಹನಗಳು ಸಲೀಸಾಗಿ ಸಂಚರಿಸುತ್ತವೆ. ಇದಕ್ಕಾಗಿ ಚಾಲಕರು ಸ್ವಲ್ಪ ತಾಳ್ಮೆ ತೆಗೆದುಕೊಳ್ಳಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಕಾನ್ಸ್‌ಟೆಬಲ್ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry