ದುಡಿಮಿ ಇಲ್ಲಾಂದ್ರ ಹೊಟ್ಟಿಗಿ ಹಿಟ್ಟಿಲ್ಲರ‌್ರೀ..

7

ದುಡಿಮಿ ಇಲ್ಲಾಂದ್ರ ಹೊಟ್ಟಿಗಿ ಹಿಟ್ಟಿಲ್ಲರ‌್ರೀ..

Published:
Updated:
ದುಡಿಮಿ ಇಲ್ಲಾಂದ್ರ ಹೊಟ್ಟಿಗಿ ಹಿಟ್ಟಿಲ್ಲರ‌್ರೀ..

ಬಾಗಲಕೋಟೆ: `ಕಾರ್ಮಿಕರ ದಿನಾ ಆದ್ರೇನು... ಹಬ್ಬ ಆದ್ರೇನ್ರಿ... ನಮ್ಮ ಹೊಟ್ಟಿಗೆ ದಿನಾನೂ ದುಡಿಲೇಬೇಕಲ್ರಿ.. ಕಾರ್ಮಿಕರ ದಿನಾ ಐತಿ ಅಂತಾ ದುಡೀಲಿಲ್ಲಾ ಅಂದ್ರ ಹೊಟ್ಟೀಗಿ ಯಾರೂ ಹೊತ್ತಿನ ಊಟ ಹಾಕಲ್ರಿ...~ಕಾರ್ಮಿಕರ ದಿನವನ್ನು ಮಂಗಳವಾರ ದೇಶದಾದ್ಯಂತ ಆಚರಣೆ ಮಾಡಲಾಯಿತು. ಕಾರ್ಮಿಕರು ಮಾತ್ರ ತಮ್ಮ ದುಡಿಮೆಯನ್ನು ಮುಂದುವರೆಸಿದ್ದಾರೆ. ಅವರಿಗೆ ಕಾರ್ಮಿಕ ದಿನಾಚರಣೆ ಅಂದರೇನು ಎಂಬುದೇ ಗೊತ್ತಿಲ್ಲ. ಇದು ವಾಸ್ತವ.ಕಾರ್ಮಿಕ ದಿನಾಚರಣೆ ಕುರಿತು ಬಾಗಲಕೋಟೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಹಮಾಲಿ ಕಾರ್ಮಿಕರ ಜೊತೆ ಮಾತನಾಡಿದಾಗ,  ಕಾರ್ಮಿಕರ ದಿನಾ ಅಂತಾ ರಜೆ ಮಾಡಿದ್ರೆ ನಮ್ಮ ಮನಿಯಾಗಿನ ಜನ್ರ ಉಪಜೀವನಕ್ಕೆ ಹಿಟ್ಟು ಬೇಕಲ್ರಿ... ಒಂದು ದಿನದ ದುಡಿಮೆ ಹೋದ್ರ ಕುಟುಂಬ ನಿಭಾಯಿಸೋಕೂ ಕಷ್ಟ ಪಡಬೇಕಾದ ಸ್ಥಿತಿ ಐತಿರಿ..~ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.`ಕಾರ್ಮಿಕ ದಿನಾಚರಣೆ ಹೆಸರಿನಲ್ಲಿ ಸರ್ಕಾರ ಕಚೇರಿಗೆ ರಜೆ ಕೊಡಲಷ್ಟೇ ಸೀಮಿತವಾಗಿದೆ. ಅದು ನಮಗೇನೂ ಸಂಬಂಧವೇ ಇಲ್ಲದಂತಿದೆ. ಕಾರ್ಮಿಕರ ಭವಿಷ್ಯ, ಜೀವನ ರೂಪಿಸುವ ನಿಟ್ಟಿನಲ್ಲಿ ಕನಿಷ್ಠ ಸಹಾಯದ ಭರವಸೆಯೂ ಇಲ್ಲ. ನಾವಿದ್ದೇವಿ, ಇಲ್ಲಾ ಅನ್ನೋ ವಿಚಾರಾನೂ ಮಾಡಂಗಿಲ್ಲ.ಇಂಥ ವ್ಯವಸ್ಥೆಯಲ್ಲಿ ಕಾರ್ಮಿಕರ ಬದುಕಿದೆ. ದಿನಾನೂ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತರುವ ಸಂತೆ ಚೀಲ, ಮನೆ ಸಾಮಾನುಗಳನ್ನು ಎತ್ತಿಡುವ ಹಮಾಲಿ ಕೆಲಸ ಮಾಡ್ತೇವಿ. ನಮಗಾವ ಭದ್ರತೆನೂ ಇಲ್ಲ, ಯಾವ ಸೌಲಭ್ಯಾನೂ ಕೊಟ್ಟಿಲ್ಲ~ ಎನ್ನುತ್ತಾರೆ ಹಮಾಲರಾದ ರೆಹಮಾನ್ ಚೌಧರಿ ಮತ್ತು ಮೆಹಬೂಬ್ ಜಿರಾತೆ.`ನನಗೆ 60 ವರ್ಷ ಆಗಿದೆ. ಈಗಲೂ ಹಮಾಲಿ ಕೆಲಸಾನೇ ಮಾಡ್ತೇನಿ. ಕೂಲಿ ಮಾಡದಿದ್ದರೆ ಮನೆಯಾಗ ಹೆಂಡ್ತಿ, ಮಕ್ಕಳು ಉಪವಾಸ ಬೀಳ್ತಾರ. ಕಾರ್ಮಿಕರಿಗೆ ಅನುಕೂಲವಾಗುವಂತಹ ಯಾವ ಯೋಜನೆನೂ ನಮಗೆ ತಲುಪಿಲ್ಲ. ಸರ್ಕಾರಿ ನೌಕರದಾರರಿಗೆ 60 ವರ್ಷಕ್ಕಾದರೂ ನಿವೃತ್ತಿ ಆಕೇತಿ.ಸರ್ಕಾರ ಪಗಾರ ಕೊಡತೇತಿ. ನಮಗ ಎಂಬತ್ತಾದರೂ ಯಾರೂ ದಿಕ್ಕಿಲ್ಲ~ ಎಂಬುದು ರಾಯಪ್ಪ ಬರಗಿ ಅಭಿಪ್ರಾಯ.ಕಾರ್ಮಿಕ ದಿನಾಚರಣೆಯಂದು ಮನೆ ಕಟ್ಟಡ, ಇಟ್ಟಿಗೆ ಬಟ್ಟಿ,  ಖಾಸಗಿ ಕಾರ್ಖಾನೆಗಳಲ್ಲಿ ಕಾರ್ಮಿಕರು ದುಡಿಯುತ್ತಾರೆ. ಅವರಿಗೆ ಯಾವುದೇ ರಜೆ ಇಲ್ಲ. ಕಂಪನಿ ಮಾಲೀಕರ ಪ್ರಕಾರ ರಜೆ ನೀಡಿರುತ್ತಾರೆ. ಇಲ್ಲಿ ಹಮಾಲರಿಗೆ ಮಾತ್ರ ಪ್ರತಿದಿನ ದುಡಿಯಲೇಬೇಕು. ಅದ್ಯಾವ ಹಬ್ಬವಾಗಲಿ, ದಿನಾಚರಣೆಯಾಗಲಿ ಸಂಬಂಧವಿಲ್ಲದಂತೆ ಕೂಲಿಯನ್ನು ಮುಂದುವರಿಸಿದ್ದಾರೆ.ನಗರದ ಮಾರುಕಟ್ಟೆಯಲ್ಲಿ ಒತ್ತು ಗಾಡಿಯಲ್ಲಿ ತೆಗೆದುಕೊಂಡು ಹೋಗುವ ಕೂಲಿಕಾರ್ಮಿಕರೂ ಸಹ ಕಾರ್ಮಿಕ ದಿನದಂದು ರಜೆ ಸಿಕ್ಕಿಲ್ಲ. ಕಾಯಕ ಜೀವಿಗಳಿಗೆ ಯಾವ ದಿನವೂ ರಜೆ ಇಲ್ಲ. ರಜೆಗಾಗಿ ಎಂದಿಗೂ ಬಯಸುವುದಿಲ್ಲ. ದುಡಿಮೆಯೊಂದೇ ಹೊಟ್ಟೆ ಪಾಡು. ಅದೇ ಅವರ ಭವಿಷ್ಯ. ನಿಜವಾದ ಅರ್ಥದಲ್ಲಿ ಅವರಿಗೆ ಕಾಯಕವೇ ಕೈಲಾಸ ಎನ್ನುತ್ತಾರೆ ಕಾರ್ಮಿಕ ಮುಖಂಡ ಮಹಮ್ಮದ್ ಹುಸೇನ್ ಅವರ ಹೇಳಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry