ದುಡಿಮೆಗಿಂತ ದೊಡ್ಡ ಕರ್ಮ ಬೇರೆ ಇಲ್ಲ

7

ದುಡಿಮೆಗಿಂತ ದೊಡ್ಡ ಕರ್ಮ ಬೇರೆ ಇಲ್ಲ

Published:
Updated:

ಯಲ್ಲಾಪುರ:  ದೇವರ ಮೇಲೆ ಸಂಪೂರ್ಣ ಅವಲಂಬನೆ ಕೂಡ ದೇವರಿಗೆ ಹೆಚ್ಚು ಇಷ್ಟವಾಗುವುದಿಲ್ಲ. ಕರ್ಮವೇ ಶ್ರೇಷ್ಠವಾದದ್ದು, ರೈತನ ದುಡಿಮೆಗಿಂತ ಹೆಚ್ಚಿನ ಕರ್ಮ ಬೇರಾವುದಿಲ್ಲ. ಇದನ್ನು ದೇವರು ಮೆಚ್ಚುತ್ತಾನೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಯಲ್ಲಾಪುರದ ವೈ.ಟಿ.ಎಸ್.ಎಸ್. ಮೈದಾನದಲ್ಲಿ ಮಂಗಳವಾರ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಯೋಜನೆ ಒಳ್ಳೆಯದಿದೆ. ಇದರಲ್ಲಿ ನಾವು ಪಾಲ್ಗೊಂಡರೆ ನಮ್ಮ ಪ್ರಗತಿ ಸಾಧ್ಯ ಎಂದು ಮನಗಂಡು ಜನರು ನಿಷ್ಠೆಯಿಂದ ಪಾಲ್ಗೊಂಡ ಕಾರಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿದೆ. ಯಲ್ಲಾಪುರ ತಾಲ್ಲೂಕಿನಲ್ಲಿ ವಾರಕ್ಕೆ ಹತ್ತು ರೂ. ನಂತೆ ಉಳಿತಾಯ ಮಾಡಿದ ಹಣ ರೂ. 2.95 ಕೋಟಿಗಳಷ್ಟಾಗಿದೆ. 42 ಕೋಟಿ ರೂ.ನಷ್ಟು ಸಾಲ ವ್ಯವಹಾರ ನಡೆಸಲಾಗಿದೆ. ಈ ಮೂಲಕ ವ್ಯವಹಾರದ ಜಾಣ್ಮೆ ಲಭ್ಯವಾಗಿದೆ. ಪ್ರತಿಯೊಂದಕ್ಕೂ ಪಟ್ಟಣವನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಸವಲತ್ತುಗಳನ್ನು ಹಕ್ಕಿನಿಂದ ಪಡೆದುಕೊಳ್ಳಿ, ಜನರು ಆಲಸ್ಯದಿಂದ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುತ್ತಿಲ್ಲ. ಎಂದು ವಿಷಾದ ವ್ಯಕ್ತಪಡಿಸಿದರು.ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಕ್ಷೇತ್ರದ ಮಧ್ಯಮ ವರ್ಗದ ಜನರಲ್ಲಿ ಸಂಘಟನೆಯ ಶಕ್ತಿಮೂಡಿಸಿ ಸ್ವಾಭಿಮಾನ ಜಾಗೃತಿ ಮಾಡುವ ಕಾರ್ಯ ಮಾಡುತ್ತಿದೆ.  ಇಂದು ಸಾಮಾಜಿಕ, ರಾಷ್ಟ್ರೀಯ ಭಾವನೆ ಯುವಕರಲ್ಲಿ ಮೂಡಬೇಕಿದೆ. ಇದು ಜಾಗೃತವಾಗಬೇಕಾದರೆ ಅದು ಕೇವಲಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸಮಾಜದ ಹತ್ತಾರು ಸಂಘ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಪರಿವರ್ತನೆಯನ್ನು ತರುವ ಕೆಲಸ ಮಾಡಬೇಕು ಎಂದು ಹೇಳಿದರು.ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಕಾರ್ಯಕ್ರಮದ ಸಂಘಟನೆಯ ಕಾರ್ಯಧ್ಯಕ್ಷ ಶಿವರಾಂ ಹೆಬ್ಬಾರ್, ಮಾತನಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಎಸ್. ಪಾಟೀಲ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದರೆ ಉತ್ತಮ ಕಾರ್ಯಕ್ರಮ ಸಂಘಟಿಸಬಹುದಾಗಿದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ ಅನಂತ ನಾಗರಜಡ್ಡಿ, ರಾಘವೇಂದ್ರ ಭಟ್ಟ,  ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಮೋಹನ ರಾಜ್, ಪ.ಪಂ. ಅಧ್ಯಕ್ಷ ಮಾಜಿ. ಜಿ.ಪಂ. ಸದಸ್ಯ ಉಮೇಶ ಭಾಗ್ವತ,  ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ವೈ.ಟಿ.ಎಸ್.ಎಸ್. ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್ಟ,  ಉಪಸ್ಥಿತರಿದ್ದರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಅಮರ ಪ್ರಸಾದ ಸ್ವಾಗತಿಸಿದರು. ಗೀತಾ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಸರಸ್ವತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ಡಾ. ರವಿ ಭಟ್ಟ ವಡ್ರಮನೆ ಮತ್ತು ಸಣ್ಣಪ್ಪ ಭಾಗ್ವತ್ ನಿರೂಪಿಸಿದರು. ಬಸವರಾಜ ವಂದಿಸಿದರು.ಯಲ್ಲಾಪುರಕ್ಕೆ ಆಗಮಿಸಿದ ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ಸ್ಥಳೀಯ ವೆಂಕಟ್ರಮಣ ಮಠದಿಂದ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯಲ್ಲಿ ಕರೆತರಲಾಯಿತು. ಅಪಾರ ಜನಸ್ತೋಮ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry