ದುಡ್ಡಿನ ದಂಧೆಯು ಅನೇಕ; ಸೃಷ್ಟಿಸಬೇಡವೊ ನರಕ

7

ದುಡ್ಡಿನ ದಂಧೆಯು ಅನೇಕ; ಸೃಷ್ಟಿಸಬೇಡವೊ ನರಕ

Published:
Updated:

ಯೋಗಪಟುಗಳು ಸಂಘಟಿಸುವ ಯೋಗ ತಾಲೀಮುಗಳಿಗೆ ಹತ್ತಿಪ್ಪತ್ತು ಸಾವಿರ ಸಂಖ್ಯೆಯಲ್ಲಿ  ಜನರು ಸೇರುತ್ತಾರೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ಕೊಡಲಾಗುವ ಔಷಧೋಪಚಾರಗಳಿಗೆ ಐದಾರು ಸಾವಿರ ಜನರು ಜಮಾಯಿಸುತ್ತಾರೆಂಬುದು ಕೆಲವರ ಅನಿಸಿಕೆ. ಇದು ಸಹಜ. ನೋವಿನಿಂದ ಬಳಲುವವರು ಅದರ ನಿವಾರಣೆಗೆ ಒಂದಿಲ್ಲೊಂದು ಪರಿಹಾರವನ್ನು ಬಯಸುತ್ತಾರೆ.

ಈ ಕಾರಣದಿಂದ ನೋವು ನಿವಾರಕರನ್ನು ಹುಡುಕುತ್ತ, ಅವರು ಕೊಡುವ ಔಷಧೋಪಚಾರಗಳನ್ನು ಸ್ವೀಕರಿಸುತ್ತ, ಸಲಹೆ-ಸೂಚನೆಗಳನ್ನು ಪಾಲಿಸುತ್ತಾರೆ. ಇವರ ಸ್ಥಿತಿ ಹೀಗಾದರೆ, ನೋವು ನಿವಾರಕರ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ಪ್ರತಿಯೊಬ್ಬ ನಿವಾರಕನು ಹೊಸಹೊಸ  ನೋವಿನಿಂದ ನರಳುವ ವ್ಯಕ್ತಿಯನ್ನು ನಿರೀಕ್ಷಿಸುತ್ತಾನೆ.

ಅವನು ಇಂಥವರ ಸಂಖ್ಯೆಯು ಅಧಿಕವಾಗಲೆಂದು ಬಯಸುತ್ತಾನೆ. ಇನ್ನುಮುಂದೆ ನೋವೇ ಬರುವುದಿಲ್ಲವೆಂದು ಜಾಹೀರಾತು ಮಾಡುತ್ತ, ರೋಗಿಗಳನ್ನು ತನ್ನತ್ತ ಸೆಳೆಯುತ್ತಾನೆ. ನನ್ನ ಪ್ರಕಾರ ಶರೀರಧಾರಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯ್ಲ್ಲಲೂ ಒಂದೊಂದು ನೋವು. ಒಂದು ನೋವು ಅಥವಾ ಯಾತನೆ ನಿವಾರಣೆಯಾದ ಬಳಿಕ ಮತ್ತೊಂದು ನೋವು ಕಾಣಿಸಿಕೊಳ್ಳುತ್ತದೆ. ಅನುಭವಿಸುವ ನೋವು ಶಾಶ್ವತವಲ್ಲ. ಒಂದರ ನಂತರ ಮತ್ತೊಂದು ಬರುತ್ತಲೇ ಇರುತ್ತದೆ. ಹಳೇನೋವಿಗೆ ವಿದಾಯ; ಹೊಸನೋವಿಗೆ ಶುಭಾಶಯ.ಹೀಗೇಕೆ? ಶರೀರವೆಂದರೆ, ಶಕ್ತಿ-ಸಾಹಸ-ಸಾಧನೆಯ ಕೇಂದ್ರವೆಂದು ಭಾವಿಸುವಂತೆ, ಅದು ನೋವು-ಯಾತನೆ-ದುಃಖ-ಸಂಕಟ-ರೋಗರುಜಿನಗಳ ಗೂಡಾಗಿದೆ. ಒಂದು ನೋವು ನಿವಾರಣೆಯ ಹಂತವನ್ನು ತಲುಪುತ್ತಲೇ ಇನ್ನೊಂದು ನೋವು ಇಣುಕಿ ಹಾಕುತ್ತದೆ. ನೋವು ಇಲ್ಲದ ಬದುಕು ಸಾಧ್ಯವಿಲ್ಲ. ಒಂದನ್ನು ವಾಸಿ ಮಾಡಿಕೊಳ್ಳುತ್ತಲೇ ಮತ್ತೊಂದರ ನಿವಾರಣೆಗೆ ಹಾದಿಯನ್ನು ಹುಡುಕಬೇಕಾಗುತ್ತದೆ. ಕೆಲವರು ಎಂಥ ತೀವ್ರತರವಾದ ನೋವಿಗೂ ಅಂಜುವುದಿಲ್ಲ. ಹಲವರು ಒಂದು ಸಣ್ಣ ನೋವಿಗೂ ಅಂಜಿ ಆತಂಕಪಡುತ್ತಾರೆ. ಈ ಜನ್ಮದ ನೋವನ್ನು ನಿವಾರಿಸಲು ಎಲ್ಲಿಲ್ಲದ ಪ್ರಯಾಸಪಡಬೇಕಾಗುತ್ತದೆ. ಹೀಗಿರುವಾಗ ಕೆಲವರು ಹಿಂದಿನ ಜನ್ಮದ ನೋವನ್ನು ಸಂಮೋಹನ ವಿದ್ಯೆಗೆ ಒಳಪಡಿಸಿ, ತಿಳಿಯಲು ಹೋಗುತ್ತಾರೆ.

ಮುಗ್ಧರನ್ನು ಸಂಮೋಹನ ವಿದ್ಯೆಗೆ ಒಳಪಡಿಸಿ, ಏನನ್ನು ಬೇಕಾದರು ಹೇಳಿಸಬಹುದು. ಇಷ್ಟರಿಂದ ಆ ವ್ಯಕ್ತಿಯ ಜೀವನದಲ್ಲಿ  ನೋವು ಶಾಶ್ವತವಾಗಿ ಶಮನವಾಗುವುದೆ? ಇಂಥ ಅವೈಜ್ಞಾನಿಕ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಜನರು ನರಳಾಟವನ್ನು ಅನುಭವಿಸುತ್ತಲೇ ಇರುತ್ತಾರೆ. ಇದರಿಂದಾಗಿ ಅಪರೋಕ್ಷವಾದ ನರಕ ಸೃಷ್ಟಿ. ದುಡ್ಡು ಹೋಗುವುದು ನಿಲ್ಲಲಿಲ್ಲ; ನೋವು ಪೂರ್ತಿ ವಾಸಿ ಆಗಲಿಲ್ಲ.ಇನ್ನು ಕೆಲವರು ಮಾಟ-ಮಂತ್ರದ ವಿಧಾನವನ್ನು ಬಳಸುತ್ತ, ತಮ್ಮ ಮೇಲೆ ವಿಶಿಷ್ಟವಾದ ಶಕ್ತಿಯೊಂದು ಆವಿರ್ಭವಿಸಿದೆಯೆಂಬುದನ್ನು ತೋರಿಸುತ್ತಾರೆ. ವಾಮಾಚಾರವನ್ನು ಮಾಡಿ, ಕೆಲವರನ್ನು ಅಂಜಿಸುವುದನ್ನು ಕಾಣಬಹುದಾಗಿದೆ. ಬಾನಾಮತಿಯ ಮುಖಾಂತರ ಭೀತಿಯನ್ನು ಹುಟ್ಟಿಸುತ್ತಾರೆ ಕೆಲವರು. ಹುಣ್ಣಿಮೆ-ಅಮಾವಾಸ್ಯೆಯಂದು ಎಂಥೆಂಥದೋ ಪೂಜೆಯನ್ನು ಸಲ್ಲಿಸಿ, ವರವನ್ನು ಪಡೆಯಲು ಪ್ರಯತ್ನ. ಅಂತ್ರ ಕಟ್ಟುತ್ತ, ಮಂತ್ರ ಬರೆಯುತ್ತ ಜನಸಾಮಾನ್ಯರಿಗೆ ಅವುಗಳ ಬಗೆಗೆ ಮಂಕುಬೂದಿ ಎರಚುತ್ತಾರೆ. ದುಡ್ಡಿಗಾಗಿ ನಡೆಸುವ ದಂಧೆಗಳಲ್ಲಿ ಇದೂ ಒಂದು.

ದುಡ್ಡನ್ನು ದುಡಿಯಲು ಅನೇಕ ದಾರಿಗಳಿವೆ. ದುಡ್ಡು ದುಡಿಯುವುದೇ ಮುಖ್ಯವಲ್ಲ; ದುಡಿಮೆಯ ದಾರಿ ಅತಿಮುಖ್ಯ. ಶೋಷಣೆಯಿಂದ ಬಂದ ದುಡ್ಡು ಸಂತೃಪ್ತಿಯನ್ನು ನೀಡಲಾರದು. ಅದು ಬರುವ ಮಾರ್ಗದಿಂದ ಬಂದರೆ ಮಾತ್ರ ಖುಷಿ

ವಾಮಾಚಾರ ಮತ್ತು ಮೂಢಾಚಾರದಿಂದ ಒಂದಷ್ಟು ಪ್ರಖ್ಯಾತಿ. ಪ್ರಖ್ಯಾತಿಗೆ ಒಳಗಾದ ವ್ಯಕ್ತಿಯ ಬದುಕಿನಲ್ಲಿ  ಪ್ರತಿಷ್ಠೆ. ಇಂಥ ಹುಸಿಪ್ರತಿಷ್ಠೆಗೆ ಒಳಗಾಗುವುದು ನಿಜವ್ಯಕ್ತಿತ್ವವಲ್ಲ. ಒಬ್ಬ ಧಾರ್ಮಿಕ ವ್ಯಕ್ತಿಗೆ ಒಳಿತನ್ನು ಮಾಡಲು ಏನೆಲ್ಲ ಅವಕಾಶಗಳಿವೆ. ಅಂಧಾನುಕರಣೆಯನ್ನು ಬಿಟ್ಟುಕೊಟ್ಟು, ಆದರ್ಶದ ಅನುಕರಣೆಗೆ ಒಳಗಾದರೆ ಪ್ರಬುದ್ಧ ವ್ಯಕ್ತಿತ್ವ. ಮಾನವೀಯತೆ, ಸಮಾನತೆ ಹಾಗು ಪ್ರಬುದ್ಧತೆಯೊಂದಿಗೆ ಜೀವನ ನಡೆಸುತ್ತ ಜನಸಾಮಾನ್ಯರ ಬದುಕಿಗೆ ಮೌಲ್ಯಗಳೆಂಬ ಔಷಧಿಯನ್ನು ನೀಡುತ್ತ ಹೋದರೆ, ಒಂದು ಬಲಿಷ್ಠ ಸಮಾಜದ ರಚನೆ.

ಜೊಳ್ಳು ವಿಚಾರಗಳಿಂದ ಸುಭದ್ರ ಸಮಾಜವನ್ನು ಮತ್ತು ಗಟ್ಟಿವ್ಯಕ್ತಿತ್ವವನ್ನು ಕಟ್ಟಲಾಗುವುದಿಲ್ಲ. ನಾನೊಬ್ಬ ಧಾರ್ಮಿಕನಾಗಿ ಇಂಥ ವಿದ್ಯೆಗಳನ್ನು ಜನಸಾಮಾನ್ಯರ ಮೇಲೆ ಪ್ರಯೋಗಿಸಬಹುದಿತ್ತು. ಉಳಿದವರಂತೆ ಅವುಗಳಿಂದ ಹಣವನ್ನು ಸಂಪಾದಿಸಲು ಸಾಧ್ಯವಿತ್ತು. ಮುಗ್ಧರಿಗೆ ಮಂಕುಬೂದಿ ಎರಚುವ, ಜನಸಾಮಾನ್ಯರನ್ನು ಶೋಸಬಾರದೆಂಬ ಎಚ್ಚರ ನನ್ನಲ್ಲಿ ಆರಂಭದಿಂದಲೂ ಕೆಲಸ ಮಾಡುತ್ತ ಬಂದಿದೆ. ಈ ಜಾಗೃತಿಯಿಂದಾಗಿಯೇ ನಾನು ಇಂಥವುಗಳನ್ನು ಪ್ರಯೋಗಿಸುತ್ತ ಬಂದಿರುವುದಿಲ್ಲ. ಎಷ್ಟೇ ಒತ್ತಡಗಳಿದ್ದಾಗ್ಯೂ ಈ ಬದ್ಧತೆಯನ್ನು ಕಾಯ್ದುಕೊಂಡು ಬಂದಿದ್ದೇನೆ.ಒಬ್ಬ ವ್ಯಕ್ತಿಯು ತಾನು ಉದರಂಬರಣಕ್ಕಾಗಿ ಇಂಥದ್ದನ್ನೆಲ್ಲ ಮಾಡಬಾರದೆಂಬ ಬಲವಾದ ನಂಬುಗೆ. ನನ್ನೊಬ್ಬನ ಉಪಜೀವನಕ್ಕಾಗಿ ಹಲವಾರು ಮುಗ್ಧರಿಗೆ ಮೋಸ ಮಾಡಬಾರದೆಂಬ ಜಾಗೃತಿ. ಕೆಲ ಧಾರ್ಮಿಕರು, ಮಾಂತ್ರಿಕರು, ಪವಾಡ ಪುರುಷರು ಈ ರೀತಿಯ ಶುಷ್ಕವಾದ ಆಚರಣೆಗಳಲ್ಲಿ ತೊಡಗಿ, ವಂಚಿಸುತ್ತಾರೆ. ಇನ್ನು ಕೆಲವು ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಮಾಡಿಕೊಡಲು ಲಂಚವನ್ನು ತೆಗೆದುಕೊಳ್ಳುತ್ತಾರೆ. ರಾಜಕಾರಣದ ಮುಖಾಂತರ ಅಧಿಕಾರ ಗದ್ದುಗೆ ಹಿಡಿದ ವ್ಯಕ್ತಿಗಳು, ಹೊನ್ನು-ಮಣ್ಣಿನ ಆಮಿಷಕ್ಕೆ ಒಳಗಾಗುತ್ತಾರೆ.

ಸಿಕ್ಕಷ್ಟುದಿನ ಅಧಿಕಾರವನ್ನು ಅನುಭವಿಸಿ, ಅತಿಆಸೆಗೆ ಈಡಾಗಿ ಹಣ ಮಾಡುವ ಪ್ರವೃತ್ತಿಯನ್ನು ಆರಂಭಿಸಿಕೊಳ್ಳುತ್ತಾರೆ. ಸತ್ಕಾರ್ಯಗಳ ಮುಖಾಂತರ ಹೆಸರು ಗಳಿಸಬೇಕೆನ್ನುವವರು ಆದರ್ಶದ ಮಾರ್ಗವನ್ನು ಅನುಸರಿಸುತ್ತಾರೆ. ಅಧಿಕಾರ ಇದ್ದಾಗ ಹಣ ಮಾಡಬೇಕೆನ್ನುವವರು ಅನಾರೋಗ್ಯಕರವಾದ ಹಾದಿಯನ್ನು ತುಳಿಯುತ್ತಾರೆ. ಹಣ, ಅಂತಸ್ತು ಗಳಿಸಿ, ಜನರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆನ್ನುವ ಹಪಾಹಪಿ.

ಪ್ರಸ್ತುತ ರಾಜಕಾರಣದಲ್ಲಿ ಹಣವು ಪ್ರಮುಖ ಅಂಶವಾಗಿದೆ. ಅರ್ಹತೆಯನ್ನು ನೋಡಿ, ಟಿಕೆಟ್ ಕೊಡುವುದಕ್ಕಿಂತಲೂ ಆರ್ಥಿಕವಾದ ಸ್ಥಿತಿ-ಗತಿಯನ್ನು ನೋಡಿ ಅವಕಾಶವನ್ನು ಕೊಡಲಾಗುತ್ತಿದೆ. ಇದು ತಪ್ಪಲ್ಲವೆ? ಅನಾರೋಗ್ಯಕರವಾದ ರೀತಿಯಲ್ಲಿ ಹಣ ಸಂಪಾದಿಸಿದ ವ್ಯಕ್ತಿಯು, ಆರ್ಥಿಕವಾಗಿ ಪ್ರಬಲ. ಪ್ರಬಲನ ಆಮಿಷಕ್ಕೆ ದುರ್ಬಲನ ಬಲಿ. ಇದು ದುರ್ಬಲನ ಬಲಿ ಮಾತ್ರವಲ್ಲ; ಆದರ್ಶದ ಬಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry