ದುಡ್ಡು ಮಾಡೋ ಆಸೆ ಇಲ್ಲ: ಯಡಿಯೂರಪ್ಪ

7

ದುಡ್ಡು ಮಾಡೋ ಆಸೆ ಇಲ್ಲ: ಯಡಿಯೂರಪ್ಪ

Published:
Updated:
ದುಡ್ಡು ಮಾಡೋ ಆಸೆ ಇಲ್ಲ: ಯಡಿಯೂರಪ್ಪ

ಶಿವಮೊಗ್ಗ: ‘ಜಿಲ್ಲೆಯಲ್ಲಿ ಟ್ರಸ್ಟ್, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ಸ್ವಂತಕ್ಕಲ್ಲ; ಇಲ್ಲಿನ ಜನರಿಗಾಗಿ. ದುಡ್ಡು ಮಾಡಬೇಕೆಂಬ ಆಸೆ ನನಗಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದರು. ಶಿಕಾರಿಪುರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ಶಿಕಾರಿಪುರ ಸಾಂಸ್ಕೃತಿಕ ಉತ್ಸವ’ದ ಸಮಾರೋಪದಲ್ಲಿ ಅವರು ಮಾತನಾಡಿದರು.‘ದುಡ್ಡು ಮಾಡಬೇಕೆಂಬ ಆಸೆ ಇದ್ದಿದ್ದರೆ ಟ್ರಸ್ಟ್, ಶಿಕ್ಷಣ ಸಂಸ್ಥೆ, ಎಂಜಿನಿಯರ್ ಕಾಲೇಜುಗಳನ್ನು ಶಿವಮೊಗ್ಗ, ಶಿಕಾರಿಪುರದಲ್ಲಿ ಕಟ್ಟುತ್ತಿರಲಿಲ್ಲ. ದುಬೈನಲ್ಲೋ ಅಥವಾ ಇನ್ನಾವುದೋ ದೇಶದಲ್ಲಿ ಕಟ್ಟುತ್ತಿದ್ದೆ. ಜಿಲ್ಲೆಯ ಜನರಿಗಾಗಿ ಇಲ್ಲಿ ನಿರ್ಮಿಸಿದ್ದೇನೆ’ ಎಂದು ಸೂಚ್ಯವಾಗಿ ಹೇಳಿದರು.ವಿರೋಧಿಗಳಿಗೆ ತಿರುಗೇಟು: ‘ನನಗೆ ಗಟ್ಟಿಮುಟ್ಟಾದ ಇಬ್ಬರು ಗಂಡುಮಕ್ಕಳಿದ್ದಾರೆ. ಮೂವರು ಬುದ್ಧಿವಂತ ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಬದುಕುತ್ತಿದ್ದಾರೆ. ನಾನು ಯಾವುದಾದರೂ ಮೆಡಿಕಲ್ ಕಾಲೇಜು ಕಟ್ಟಲು ಚೆಕ್ ಬೌನ್ಸ್ ಮಾಡಿಲ್ಲ. ಯಾರಿಗೂ ಟೋಪಿ ಹಾಕುವ ಕೆಲಸ ಮಾಡಿಲ್ಲ’ ಎಂದು ವಿರೋಧಿಗಳಿಗೆ ಚುಚ್ಚಿದರು.  ಶಿಕಾರಿಪುರದಲ್ಲಿ ಇಂತಹ ಅದ್ಭುತ ಸಮಾರಂಭ ನಡೆಯುತ್ತಿರುವಾಗ ಮೈತ್ರಾದೇವಿ ಇರಬೇಕಿತ್ತು. ಬಹಳ ಖುಷಿ ಪಡುತ್ತಿದ್ದಳು ಎಂದು ಪತ್ನಿಯನ್ನು ಸ್ಮರಿಸಿದ ಮುಖ್ಯಮಂತ್ರಿ, ಅದಕ್ಕೂ ಯೋಗಬೇಕು ಎಂದರು.

ಇನ್ನು ಆರು ತಿಂಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಗಲಿದೆ. ರಸ್ತೆ, ಉದ್ಯಾನ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳು ಆಗಲಿವೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಾಮಾಣಿಕರಿದ್ದಾರೆ. ಯಾವುದಕ್ಕೂ ತೊಂದರೆ ಆಗುವುದಿಲ್ಲ ಎಂದರು.ಜಿಲ್ಲೆಯಲ್ಲಿ ಹಿಂದೆ ಸಂಸದರಿದ್ದರು. ನಾಲ್ಕೈದು ತಿಂಗಳಿಗೊಮ್ಮೆ ದೇವರ ದರ್ಶನದಂತೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಸಂಸದ ರಾಘವೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾನೆ. ಅವನ ಬಗ್ಗೆ ಅಭಿಮಾನ ಮೂಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಆದರೆ, ಅವು ಪ್ರಾಮಾಣಿಕ ಮತ್ತು ಗುಣಮಟ್ಟದ್ದಾಗಿರಬೇಕು ಎಂದು ಸೂಚಿಸಿದರು.ತೊಂದರೆ ಕೊಟ್ಟರೆ ಕೈ-ಕಾಲು ಮುರಿಯಿರಿ: ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಯಾವುದೇ ಗೂಂಡಾಗಿರಿಗೆ ಅವಕಾಶ ನೀಡಬಾರದು. ಈಜಾಡುವುದು, ದನ-ಕರುಗಳ ಮೈತೊಳೆಯುವುದು ಮಾಡಬಾರದು. ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದ ಅವರು, ಹೆಣ್ಣುಮಕ್ಕಳಿಗೆ ಯಾರಾದರೂ ತೊಂದರೆ ಮಾಡಿದರೆ ಅಲ್ಲಿಯೇ ಕೈ-ಕಾಲು ಮುರಿಯಿರಿ ಎಂದು ಆದೇಶಿಸಿದರು.‘ಶಿಕಾರಿಪುರ ಉತ್ಸವ’ ಪ್ರತಿ ವರ್ಷ ನಡೆಯಬೇಕು. ಈ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಬಂದು ಮೂರು ದಿನ ಇಲ್ಲಿಯೇ ಇರುತ್ತೇನೆ ಎಂದ ಅವರು, ಇದೇ ರೀತಿ ‘ಜಿಲ್ಲಾ ಉತ್ಸವ’ ಕೂಡ ನಡೆಯಬೇಕು. ಕುವೆಂಪು ಹುಟ್ಟಿದ ನಾಡು ಇದು. ಇಲ್ಲಿಯವರು ಈ ಬಗ್ಗೆ ಯೋಚಿಸಬೇಕು ಎಂದರು. ಇದು ‘ಜನೋತ್ಸವ’: ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಿದ ಕೆಲಸ ಅದ್ವಿತೀಯವಾದುದು. ಇತಿಹಾಸದಲ್ಲಿ ಉಳಿಯುವುದು ಸಾಧನೆ ಹೊರತು, ಟೀಕೆ-ಟಿಪ್ಪಣಿಗಳಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಶ್ಲಾಘಿಸಿದರು.ಅಪಾರ ಶ್ರದ್ಧೆ ಹೊಂದಿದ ಯಡಿಯೂರಪ್ಪ ಅವರು, ಯಾವ ಮುಖ್ಯಮಂತ್ರಿ ಮಾಡದ ಜನ, ಕೇರಿ, ಪ್ರದೇಶಗಳನ್ನು ಭೇಟಿ ಮಾಡಿದ್ದಾರೆ. ಇದು ನಾನು ಆತ್ಮಸಾಕ್ಷಿಯಾಗಿ ಹೇಳುವ ಮಾತು. ಈ ಉತ್ಸವ ಬರೀ ‘ಸಾಂಸ್ಕೃತಿಕ ಉತ್ಸವ’ ಅಲ್ಲ; ‘ಜನರ ಉತ್ಸವ’ ಎಂದು ಬಣ್ಣಿಸಿದರು. ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಶಿಕಾರಿಪುರ ಕ್ರಾಂತಿ ಪುರುಷರ ನಾಡು. ಯಾರೂ ಮಾಡದ ಸಾಧನೆಯನ್ನು ಮಾಡಿ ತೋರಿಸುವ ಜನ ಇಲ್ಲಿದ್ದಾರೆ. ಅಂತಹ ಸಾಧನೆ ಯಡಿಯೂರಪ್ಪ ಅವರು ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳಿಂದ ಜಿಲ್ಲೆಯ ಚಹರೆ ಬದಲಾಗಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಶಕ್ತಿ ಆ ದೇವರು ನೀಡಲಿ ಎಂದರು.ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಉಪಾಧ್ಯಕ್ಷ ಹುನವಳ್ಳಿ ಗಂಗಾಧರಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಎಂಎಡಿಬಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಎಸ್. ಅನಂತರಾಮಯ್ಯ, ಶಿವಮೊಗ್ಗ ನಗರಸಭೆ ಸದಸ್ಯ ಎಸ್.ಎನ್. ಚನ್ನಬಸಪ್ಪ, ಪುರಸಭೆ ಅಧ್ಯಕ್ಷೆ ಲತಾ ಮಂಜಪ್ಪ, ಬಿಜೆಪಿ ಮುಖಂಡ ಎಸ್. ದತ್ತಾತ್ರಿ, ಜಿಲ್ಲಾಧಿಕಾರಿವಿ. ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಮಣ್ ಗುಪ್ತ, ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry