ದುದ್ದ ರಸ್ತೆ ಕಾಮಗಾರಿ ಸ್ಥಗಿತ: ಸವಾರರಿಗೆ ಪೀಕಲಾಟ

7

ದುದ್ದ ರಸ್ತೆ ಕಾಮಗಾರಿ ಸ್ಥಗಿತ: ಸವಾರರಿಗೆ ಪೀಕಲಾಟ

Published:
Updated:

ಹಾಸನ: ದುದ್ದ ರಸ್ತೆಯ ಕಾಮಗಾರಿ ಶೀಘ್ರದಲ್ಲೇ ಮುಗಿಯುತ್ತದೆ ಎಂದು ಭಾವಿಸಿದ್ದ ಪ್ರಯಾಣಿಕರಿಗೆ ಇದೊಂದು ಕಹಿಸುದ್ದಿ. ಈ ರಸ್ತೆಯ ಕಾಮಗಾರಿ ಸ್ಥಗಿತಗೊಂಡು 15 ದಿನಗಳಾಗಿವೆ.ಕಾಮಗಾರಿ ಸ್ಥಗಿತಗೊಳ್ಳಲು ನಿಖರವಾದ ಕಾರಣ ಲಭ್ಯವಾಗಿಲ್ಲ. ನಿರ್ಮಾಣ, ನಿರ್ವಹಣೆ ಹಾಗೂ ಹಸ್ತಾಂತರ (ಬಿಒಟಿ) ಆಧಾರದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಮಹಾ ರಾಷ್ಟ್ರದ ನಾಗ್ಪುರ ಮೂಲದ ಸಂಸ್ಥೆಯಲ್ಲಿ ಹಣಕಾಸಿನ ಅಡಚಣೆ ಬಂದಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.ಹಾಸನದಿಂದ ಚಿಕ್ಕನಾಯಕನಹಳ್ಳಿ ಸಂಪರ್ಕಿಸುವ, 76.921 ಕಿ.ಮೀ. ಉದ್ದದ ಈ ರಸ್ತೆಯನ್ನು ಒಟ್ಟು 241 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. ಮಹಾರಾಷ್ಟ್ರದ ನಾಗಪುರ ಮೂಲದ ಅಭಿಜಿತ್ ಟೋಲ್‌ರೋಡ್ ಕನ್‌ಸ್ಟ್ರಕ್ಷನ್ ಲಿ. (ಅಭಿಜೀತ್ ಗ್ರುಪ್ ಆಫ್ ಕಂಪೆನೀಸ್‌ಗಳಲ್ಲಿ ಒಂದು) ಸಂಸ್ಥೆಯವರು ಈ ಕಾಮಗಾರಿ ಕೈಗೆತ್ತಿಕೊಂಡಿದ್ದರು. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಮಾಡಿ ಹಸ್ತಾಂತರಿಸುವುದು, ವಿವಿಧ ಇಲಾಖೆಗಳಿಂದ ಆಗ ಬೇಕಾದ ಕೆಲಸಗಳನ್ನು ಮಾಡಿಕೊಡುವುದು ಮಾತ್ರ ಇ್ಲ್ಲಲಿ ಸರ್ಕಾರದ ಹೊಣೆ. ಸರ್ಕಾರ ಈ ಕಾರ್ಯವನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಮಾಡುತ್ತಿದೆ.ಉಳಿದಂತೆ ಯೋಜನೆಯ ಒಟ್ಟು ವೆಚ್ಚದ ಶೇ 61ನ್ನು ಸಂಸ್ಥೆಯವರು ಹಾಕಬೇಕು. ಶೇ 20ರಷ್ಟನ್ನು ಕೇಂದ್ರ ಸರ್ಕಾರ ಹಾಗೂ ಶೇ 19 ಅನ್ನು ರಾಜ್ಯ ಸರ್ಕಾರ ನೀಡಬೇಕು. ಇದು ಒಪ್ಪಂದದಲ್ಲಿರುವ ಅಂಶಗಳು. ಒಪ್ಪಂದದ ಪ್ರಕಾರ 2012ರ ಜ.5 ರಿಂದ ಕಾಮಗಾರಿ ಆರಂಭವಾಗಿ 2014ರ ಜನವರಿ 4ರೊಳಗೆ ಪೂರ್ಣಗೊಳ್ಳಬೇಕು.ಇದಾದ ಬಳಿಕ 28 ವರ್ಷಗಳ ಕಾಲ (ನಿರ್ಮಾಣ ಹಂತ ಸೇರಿದರೆ 30 ವರ್ಷ) ರಸ್ತೆಯಲ್ಲಿ ಸಂಸ್ಥೆಯವರು ಟೋಲ್ ಸಂಗ್ರಹಿಸಬಹುದು. ಹಾಸನದ ಕೃಷ್ಣ ನಗರದ ಸಮೀಪ ಹಾಗೂ ಚಿಕ್ಕನಾಯಕನ ಹಳ್ಳಿಗಳಲ್ಲಿ ಟೋಲ್ ಗೇಟ್ ಸ್ಥಾಪಿಸುವ ಪ್ರಸ್ತಾಪ ಯೋಜನೆಯಲ್ಲಿದೆ.ಚಿಕ್ಕನಾಯಕನಹಳ್ಳಿ ಕಡೆಯಿಂದ ಜನವರಿ ತಿಂಗಳಲ್ಲೇ ಕಾಮಗಾರಿ ಆರಂಭಿಸಿರುವ ಸಂಸ್ಥೆಯವರು, ಕೆಲವು ತಿಂಗಳ ಬಳಿಕ ಹಾಸನದ ಕಡೆಯಿಂದಲೂ ಕಾಮಗಾರಿ ಆರಂಭಿಸಿದ್ದರು. ಈವರೆಗೂ ನಿರೀಕ್ಷಿತ ವೇಗದಲ್ಲೇ ಕೆಲಸ ನಡೆ ಯುತ್ತಿತ್ತು. ಆದರೆ 15 ದಿನಗಳಿಂದ ಕೆಲಸ ಸ್ತಬ್ಧಗೊಂಡಿದೆ. ಕಂಪೆನಿಯಲ್ಲಿ ಹಣದ ಮುಗ್ಗಟ್ಟು ಉಂಟಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.ಕಾಮಗಾರಿ ಅವಧಿ ಒಟ್ಟು ಎರಡು ವರ್ಷಗಳಿರುವುದರಿಂದ ಸಂಸ್ಥೆಗೆ ನೋಟಿಸ್ ನೀಡಲು ಕೆಆರ್‌ಡಿಸಿಎಲ್‌ಗೆ ಅವಕಾಶ ಇಲ್ಲ. ಆದರೆ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಈಗಾಗಲೇ ಪತ್ರ ವ್ಯವಹಾರ ಆರಂಭಿಸಿದ್ದಾರೆ ಎನ್ನಲಾಗಿದೆ.ಹಗರಣದ ವಾಸನೆ: ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕಲ್ಲಿದ್ದಲು ಹಗರಣದ ವಿಚಾರದಲ್ಲಿ ಅಭಿಜಿತ್ ಸಮೂಹ ಸಂಸ್ಥೆಯ ಹೆಸರು ಸಹ ಒಂದೆರಡು ಕಡೆ ಕೇಳಿ ಬಂದಿತ್ತು. ಸಂಸ್ಥೆಯ ಮುಖ್ಯಸ್ಥ ಮನೋಜ್ ಜೈಸ್ವಾಲ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬ ವರದಿ ಗಳು ಕೆಲವು ಮಾಧ್ಯಮಗಳಲ್ಲಿ ಬಂದಿದ್ದವು. ಈ ವರದಿ ಬಂದ ಕೆಲವೇ ದಿನದಲ್ಲಿ ಹಾಸನ- ದುದ್ದ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ದಿನನಿತ್ಯ ಈ ರಸ್ತೆಯಲ್ಲಿ ಓಡಾಡುವವರು ಚಿಂತೆಗೆ ಒಳಗಾಗಿದ್ದಾರೆ.ಅಭಿಜಿತ್ ಸಂಸ್ಥೆಯವರು ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಮೊದಲ ಕಾಮಗಾರಿ ಇದಾಗಿದ್ದು, ಈಗಾಗಲೇ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅವರಿಗೂ ನಷ್ಟವಾಗುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಭರವಸೆ ಇದೆ ಎಂದು ಸಂಸ್ಥೆಯ ಅಧಿಕಾರಿಗಳು ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry