ಮಂಗಳವಾರ, ಜನವರಿ 28, 2020
17 °C

ದುಬಲಗುಂಡಿ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರೇ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ‘ಯಾವುದೇ ಒಂದು ಗ್ರಾಮ, ನಗರದ ಅಭಿವೃದ್ಧಿಗೆ ಆ ಭಾಗವನ್ನು ಪ್ರತಿನಿಧಿಸುವ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ಜೊತೆ ಗ್ರಾಮಸ್ಥರ ಸಹಕಾರ ಇದ್ದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ­ವಾಗುತ್ತದೆ. ಅದರ ಜೊತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆ ಊರಿನ ಅಭಿವೃದ್ಧಿ ಕುಂಠಿತಕ್ಕೂ ಬೆರಳೆಣಿಕೆ ಗ್ರಾಮಸ್ಥರೇ ಕಾರಣರಾಗುತ್ತಾರೆ ಎನ್ನುವುದಕ್ಕೆ ನಮ್ಮ ಗ್ರಾಮ ನಿದರ್ಶನ’ ಎನ್ನುತ್ತಾರೆ ತಾಲ್ಲೂಕಿನ ದುಬಲಗುಂಡಿ ಗ್ರಾಮದ ಅಭಿವೃದ್ಧಿ ಚಿಂತಕರು.ದುಬಲಗುಂಡಿ ಗ್ರಾಮವನ್ನು 1979ರಲ್ಲಿ ಪಟ್ಟಣ ಯೋಜನಾ ಪ್ರಾಧಿಕಾರ ರಸ್ತೆ ವಿಸ್ತರಣೆ ಸಂಬಂಧ ನೀಲ­ನಕ್ಷೆ ಸಿದ್ಧಪಡಿಸಿತ್ತು. ಆದರೆ ಮೂರು ದಶಕ ಗತಿಸಿದರೂ  ಅನುಷ್ಠಾನ­ಗೊಳ್ಳಲಿಲ್ಲ. ಹರ್ಷಗುಪ್ತಾ ಅವರು 2008ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀರಿಸಿದ ಬಳಿಕ ಜಿಲ್ಲಾ, ತಾಲ್ಲೂಕು ಕೇಂದ್ರಗಳು ಮಾತ್ರವಲ್ಲದೇ ಪ್ರಮುಖ ಗ್ರಾಮಗಳ ರಸ್ತೆ ವಿಸ್ತರಣೆಗೂ ಮುಂದಾಗಿದ್ದರು. ಅಂಥವುಗಳ ಪೈಕಿ ತಾಲ್ಲೂಕು ದುಬಲಗುಂಡಿ ಗ್ರಾಮ ಆಯ್ಕೆ ಮಾಡಿಕೊಂಡಿದ್ದೂ ಅಲ್ಲದೇ ತೆರವುಗೊಳ್ಳಬೇಕಾದ ಪ್ರದೇಶಗಳಲ್ಲಿ ಗುರುತು ಹಾಕುವ ಪ್ರಕ್ರಿಯೆ ಮುಗಿಸಿದ್ದರು.ಹರ್ಷಗುಪ್ತಾ ವರ್ಗಾವಣೆ ಬಳಿಕ ತೆರವು ಕಾರ್ಯಾಚರಣೆ ನನೆಗುದಿಗೆ ಬಿದ್ದವು. ಹಾಗೆ ಉಳಿದವುಗಳ ಪೈಕಿ ದುಬಲಗುಂಡಿ ಸಹ ಒಂದಾಗಿದೆ ಎಂದು  ಗ್ರಾಮಸ್ಥರು ಹೇಳುತ್ತಾರೆ. ನಂತರ ಹೊಸದಾಗಿ ಬಂದ ಜಿಲ್ಲಾಧಿಕಾರಿ ಡಾ.ಪಿ.ಸಿ ಜಾಫರ್‌ 2012ರ ಆಗಸ್ಟ್‌ ತಿಂಗಳಲ್ಲಿ ತೆರವು ಕಾರ್ಯಾಚರಣೆ ಕುರಿತು ಗ್ರಾಮ ಪಂಚಾಯಿತಿ ಸಭೆ ನಿರ್ಣಯ ನಡವಳಿಕೆ ಹಾಗೂ ಪಂಚಾಯಿತಿ ಮನವಿಗೆ ಸ್ಪಂದಿಸಿ ಗ್ರಾಮಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕಾರ್ಯ ಚುರುಕು­ಗೊಳಿಸಿದರು. ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ­ಗೊಳಿಸಲು ಸಿದ್ಧವಿರುವುದಾಗಿ ಶಾಸಕ ಬಿ. ಆರ್‌.ಪಾಟೀಲ್‌ ತಿಳಿಸಿದ್ದರು.ಶೇ 99ರಷ್ಟು  ಕಟ್ಟಡ ವಾರಸು­ದಾರರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದರು. ಆದರೆ ಬೆರಳಣಿಕೆ ವ್ಯಾಪಾರಸ್ಥರು ಮಾತ್ರ ತೆರವುಗೊಳಿಸು­ವುದಕ್ಕೆ ವಿಳಂಬ ಧೋರಣೆ ಅನುಸರಿಸು­ತ್ತಿರುವ ಕಾರಣ ಎಂದೋ ಪೂರ್ಣ­ಗೊಳ್ಳ­ಬೇಕಿದ್ದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ.ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ನನೆಗುದಿಗೆ ಬಿದ್ದ ಕಟ್ಟಡಗಳನ್ನು ಶೀಘ್ರ ತೆರವುಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎನ್ನು­ವುದು ಗ್ರಾಮ ಪಂಚಾಯಿತಿ ಸದಸ್ಯ­ರಾದ ಮೆರಾಜ್‌ ಭಾಲ್ಕಿಬೇಸ್‌, ಪ್ರತಿಭಾ ವಿಜಯಕುಮಾರ ನಾತೆ, ತುಕಾರಾಮ ಭೋಜಗುಂಡಿ, ಸಂಜೀವಕುಮಾರ ಗೌಳಿ, ಅನಿಲ ಭೋಲಾ, ರಾಜಪ್ಪ ನಂದಿ, ಪಾಂಡುರಂಗ ಇಮ್ಲೇಕರ್‌, ಎಪಿಎಂಸಿ ಉಪಾಧ್ಯಕ್ಷ ಅಶೋಕ ಚಳಕಾಪೂರೆ ಅವರ ಒತ್ತಾಯ.ತೆರವು ಕಾರ್ಯಾಚರಣೆ ಸ್ಥಗಿತ­ಗೊಂಡ ಏಕೈಕ ಕಾರಣ ಅಭಿವೃದ್ಧಿ ಕೆಲಸ­ಗಳು ಕುಂಠಿತಗೊಂಡಿವೆ. ತ್ಯಾಜ್ಯ  ಮಾರುಕಟ್ಟೆ ಪ್ರದೇಶದಲ್ಲಿ ಸಂಗ್ರಹ­ಗೊಂಡು ಗಬ್ಬು ನಾರುತ್ತಿದೆ. ನನೆಗುದಿಗೆ ಬಿದ್ದ ವಿದ್ಯುತ್‌ ಕಂಬ ಅಳವಡಿಕೆ, ಬಸ್‌ ನಿಲ್ದಾಣ ಸೌಕರ್ಯ ಕೊರತೆ ಕಾರಣ ದುಬಲಗುಂಡಿ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿ ಹಾಗೂ ಪ್ರಯಾಣಿಕರು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸ­ಲಾದ ತಾತ್ಕಾಲಿಕ ಶೆಡ್‌ ಅನ್ನೇ ಆಶ್ರಯಿಸಿದ್ದಾರೆ.   ಗ್ರಾಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಹೀಗಂತಾರೆ...

‘ಶೀಘ್ರ ಕಾಮಗಾರಿ ಪೂರ್ಣ’


‘ಮೇಲಧಿಕಾರಿಗಳು ಹಾಗೂ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಸಾಧ್ಯವಾದಷ್ಟು ಶೀಘ್ರ ತೆರವು ಕಾರ್ಯ ಪೂರ್ಣಗೊಳಿಸಿ, ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದು’.

– ಹಣಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.‘ಸ್ವಲ್ಪ ಕಾಲಾವಕಾಶ ನೀಡಿ’


‘ಗ್ರಾಮದ ರಸ್ತೆ ವಿಸ್ತರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಕಟ್ಟಡ ತೆರವು ಕಾರ್ಯಾಚರಣೆ ವಿಷಯದಲ್ಲಿ ಕೊಂಚ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕಟ್ಟಡವನ್ನು ಬೇಕಾಬಿಟ್ಟಿ ಕೆಡವಿದರೆ ಅದರಿಂದ ಹಾನಿಯಾಗುವುದು ನಮಗೆ. ಹಾನಿ ತಪ್ಪಿಸುವ ಹಾಗೂ ಸಕಾಲಕ್ಕೆ ಕಾರ್ಮಿಕರು ಲಭ್ಯವಾಗದೇ ಇರುವ ಕಾರಣ ಕೊಂಚ ವಿಳಂಬವಾಗಿದೆ. ಸಾಧ್ಯವಾದಷ್ಟು ಶೀಘ್ರ ತೆರವುಗೊಳಿಸಿ, ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಸಿದ್ಧ’.

– ಬಸವರಾಜ ಚಿಕಟವಾರ್‌, ವ್ಯಾಪಾರಸ್ಥ.‘ಇಬ್ಬಗೆ ನೀತಿ ಕೈಬಿಡಿ’


‘ಗ್ರಾಮದ ಅಭಿವೃದ್ಧಿ ಬಗ್ಗೆ ನಮಗೂ ಕಾಳಜಿ ಇದೆ. ತೆರವು ಕಾರ್ಯಾಚರಣೆ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ದುಬಲಗುಂಡಿ ಗ್ರಾಮ ಮಹಾನಗರವೇನಲ್ಲ. ಈಗಾಗಲೇ ಕಟ್ಟಡ ತೆರವುಗೊಳಿಸಲಾಗಿದೆ. ಪಂಚಾಯಿತಿ ಆದೇಶ ಪ್ರಕಾರ ಬಾಕಿ ಉಳಿದುಕೊಂಡಿರುವ 15 ಇಂಚನ್ನು ತೆರವುಗೊಳಿಸಿದರೆ ಕಟ್ಟಡದ ಛಾವಣಿ ಕುಸಿದು ಬೀಳುತ್ತದೆ.

ಆ ಕಾರಣಕ್ಕಾಗಿ ನಿಯಮ ಕೊಂಚ ಸಡಿಲಗೊಳಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ. ಅದಕ್ಕೆ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಕಾರ್ಯಾಚರಣೆ ನೆಪದಲ್ಲಿ ಕೆಲವರು ಅನಗತ್ಯ ತೊಂದರೆ ನೀಡುತ್ತಿದ್ದಾರೆ’.

–ಮಲ್ಲಪ್ಪ ಜೋಳದಪ್ಪಗೆ, ಕಟ್ಟಡ ಮಾಲೀಕ.

ಪ್ರತಿಕ್ರಿಯಿಸಿ (+)