ದುಬಾರಿ `ವಿಷಲ್'

7

ದುಬಾರಿ `ವಿಷಲ್'

Published:
Updated:
ದುಬಾರಿ `ವಿಷಲ್'

ಸುಮಾರು ಒಂದೂವರೆ ವರ್ಷದ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡು ಬಂದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. `ಲವ್ ಗುರು', `ಗಾನ ಬಜಾನಾ' ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಅವರು 35 ಲಕ್ಷ ರೂಪಾಯಿ ರೀಮೇಕ್ ಧನ ತೆತ್ತು ಪರಭಾಷಾ ಕಥನವನ್ನು ಹೊತ್ತುತಂದಿದ್ದಾರೆ.

ತಮಿಳಿನ ಹಿಟ್ ಚಿತ್ರ `ಪಿಜ್ಜಾ'ಕ್ಕೆ ಕನ್ನಡದಲ್ಲಿ `ವಿಷಲ್' ಎಂದು ನಾಮಕರಣ ಮಾಡಲಾಗಿದೆ. ಸುಮಾರು 32 ದಿನಗಳ ಚಿತ್ರೀಕರಣ ನಡೆಸಲಾಗಿದೆ. ರೀಮೇಕ್ ಮಾಡುವುದು ಸುಲಭವಲ್ಲ ಎನ್ನುವುದು ನಿರ್ದೇಶಕರ ಅನುಭವ. ಅದರಲ್ಲೂ ಈ ಚಿತ್ರ ತಾಂತ್ರಿಕವಾಗಿ ಸವಾಲಿನದ್ದು.

ಮೂಲ ಚಿತ್ರಕ್ಕೆ ಬದ್ಧರಾಗಿರುವ ಜೊತೆಯಲ್ಲಿ ತಮ್ಮತನವನ್ನೂ ಕಾದುಕೊಳ್ಳುವುದು ಸುಲಭವಲ್ಲ ಎನ್ನುವುದು ಪ್ರಶಾಂತ್ ಅನಿಸಿಕೆ. ಸಿನಿಮಾದ 40 ನಿಮಿಷಗಳ ಅವಧಿ ಕೇವಲ ಟಾರ್ಚ್ ಬೆಳಕಿನಲ್ಲಿಯೇ ಸಾಗುತ್ತದೆಯಂತೆ.

ಬೆಳಕಿನ ಜೊತೆಗೆ ಛಾಯಾಗ್ರಹಣಕ್ಕೂ ನೆರವಾಗುವಂಥ ಟಾರ್ಚ್‌ಗಾಗಿ ಅಂತರಜಾಲವನ್ನೆಲ್ಲಾ ಹುಡುಕಾಡಿ ಕೊನೆಗೂ ದುಬಾರಿ ಬೆಲೆಯ ಉತ್ತಮ ಬೆಳಕಿನ ಟಾರ್ಚ್ ಹುಡುಕುವಲ್ಲಿ ಯಶಸ್ವಿಯಾದರಂತೆ. ನಟ ಚಿರಂಜೀವಿ ಸರ್ಜಾ ನಟನೆಯ ಜೊತೆಗೆ ಲೈಟ್‌ಬಾಯ್ ಕೆಲಸವನ್ನೂ ಮಾಡಿದ್ದಾರೆ ಎಂದು ಚಟಾಕಿ ಹಾರಿಸಿದರು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ.ಹಾಸ್ಯ, ಥ್ರಿಲ್ಲರ್, ರೊಮ್ಯಾಂಟಿಕ್, ಎಮೋಷನ್ ಎಲ್ಲವೂ ಚಿತ್ರದಲ್ಲಿ ಸಂಗಮವಾಗಿವೆ ಎಂದರು ಪ್ರಶಾಂತ್ ರಾಜ್. ಈ ಚಿತ್ರದ ಪೂರ್ವ ತಯಾರಿಗಾಗಿ ಚಿರುಗೆ ಒಂದು ತಿಂಗಳು ತರಬೇತಿ ನೀಡಲಾಗಿದೆಯಂತೆ.

ನಟಿ ಪ್ರಣೀತಾರಿಗೆ `ವಿಷಲ್' ಹೊಸ ಅನುಭವ ನೀಡಿದೆಯಂತೆ. ಚಿತ್ರದಲ್ಲಿ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ.ಚಿತ್ರದ ಹಾಡುಗಳನ್ನೂ ಈ ವೇಳೆ ಬಿಡುಗಡೆ ಮಾಡಲಾಯಿತು.

ನಾಲ್ಕು ಹಾಡುಗಳು ಚಿತ್ರದಲ್ಲಿದ್ದು ಶ್ರೀಧರ್ ಜೋಶ್ವ ಮಟ್ಟು ಹಾಕಿದ್ದಾರೆ. `ಮನಸಾಲಜಿ' ಚಿತ್ರ ನಿರ್ದೇಶಿಸಿದ್ದ ದೀಪು ತಮ್ಮ `ಅರಸು' ಆಡಿಯೊ ಕಂಪೆನಿಗೆ ಈ ಚಿತ್ರದ ಮೂಲಕ ಮತ್ತೆ ಜೀವ ತುಂಬಿದ್ದಾರೆ. ಮಾರ್ಚ್ ಕೊನೆಯ ವಾರದೊಳಗೆ ಚಿತ್ರವನ್ನು ತೆರೆಗೆ ತರುವುದು ನಿರ್ಮಾಪಕ ನವೀನ್ ಉದ್ದೇಶ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry