ದುಬಾರೆ: ಪ್ರವಾಸಿಗರಿಗೆ ಸಾಕಾನೆಗಳ ಮೋಡಿ

7

ದುಬಾರೆ: ಪ್ರವಾಸಿಗರಿಗೆ ಸಾಕಾನೆಗಳ ಮೋಡಿ

Published:
Updated:
ದುಬಾರೆ: ಪ್ರವಾಸಿಗರಿಗೆ ಸಾಕಾನೆಗಳ ಮೋಡಿ

ಕುಶಾಲನಗರ: ಬೇಸಿಗೆಯ ರಜಾ ಅವಧಿ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ಕೊಡಗಿನ ಮುಖ್ಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.ಏಷ್ಯಾ ಖಂಡದಲ್ಲೇ ಪ್ರಸಿದ್ಧಿ ಹೊಂದಿರುವ ಈ ಸಾಕಾನೆ ಶಿಬಿರವು ಹಸಿರಿನ ವನರಾಶಿಯ ನಡುವೆ ಇದೆ. ಸುತ್ತಲೂ ದಟ್ಟವಾದ ಕಾಡು ಹಾಗೂ ಕಾಡಂಚಿನಲ್ಲಿ ಹರಿಯುವ ಜೀವನದಿ ಕಾವೇರಿ ತಟದಲ್ಲಿರುವ ಸುಂದರ ಹಾಗೂ ಪ್ರಾಕೃತಿಕ ಪರಿಸರಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ.ಮರಿಯಾನೆಗಳು ಸೇರಿದಂತೆ ಒಟ್ಟು 22 ಸಾಕಾನೆಗಳಿದ್ದು, ಅವುಗಳ ಅಧ್ಯಯನ, ಜೀವನ ಕ್ರಮ, ಆಹಾರ ಬಳಕೆ, ದಿನಚರಿ ಕುರಿತು ರಾಜ್ಯ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ವತಿಯಿಂದ ಪ್ಯಾಕೇಜ್ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.100 ವರ್ಷಗಳ ಹಳೆಯ ಪ್ರವಾಸಿ ಬಂಗಲೆಯೊಂದಿಗೆ ಜಂಗಲ್ ಲಾಡ್ಜ್ ವತಿಯಿಂದ ಹೊಸದಾಗಿ ಆರಂಭಿಸಿರುವ ವಿಶಿಷ್ಟ ಕುಟೀರಗಳು ಪ್ರಮುಖ ಆಕರ್ಷಣೆಯಾಗಿವೆ. ಪ್ರತಿದಿನ ಬೆಳಿಗ್ಗೆ 9 ರಿಂದ ಆರಂಭಗೊಳ್ಳುವ ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ಆನೆಗಳನ್ನು ಸ್ಪರ್ಶಿಸುವ, ಮಾವುತರ ನೆರವಿನೊಂದಿಗೆ ಆಹಾರ ನೀಡುವ ಹಾಗೂ ಆನೆ ಸಫಾರಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆನೆಗಳ ಜೀವನ ಕ್ರಮ ಹಾಗೂ ಆಹಾರ ಪದ್ಧತಿ ಕುರಿತು ವಿವರಣೆ ನೀಡಲಾಗುತ್ತಿದೆ. ಆನೆ ಸಫಾರಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಇರುತ್ತದೆ.ನಂಜರಾಯಪಟ್ಟಣದಿಂದ ದುಬಾರೆಗೆ ತೆರಳಲು ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದೀಗ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿರುವುದರಿಂದ ಅಲ್ಲಿಯ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರು ಕಲ್ಲಿನ ಬಂಡೆ ಮೇಲೆಯೇ ದಾಟಿ ಬರುವುದು ಸಾಧ್ಯವಾಗಿದೆ.ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳು ಫುಟ್ಬಾಲ್ ಸೇರಿದಂತೆ ಹಲವು ವೈವಿಧ್ಯಮಯ ಕ್ರೀಡೆಗಳನ್ನು ಆಡಿ ರಂಜಿಸುತ್ತವೆ.ಕಾಡಿನಲ್ಲಿ ಟ್ರಕ್ಕಿಂಗ್, ಹಾಡಿಯಲ್ಲಿ ನೆಲೆಸಿರುವ ಗಿರಿಜನರ ಜೀವನ ಕ್ರಮದ ಕುರಿತು ಅಧ್ಯಯನ ಮೊದಲಾದ ವ್ಯವಸ್ಥೆಯೂ ಇದೆ. ಇದೀಗ ದುಬಾರೆಯಲ್ಲಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದು, ವನ್ಯಜೀವಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry