ದುರವಸ್ಥೆಯ ಸುರಂಗ ಮಾರ್ಗ

7

ದುರವಸ್ಥೆಯ ಸುರಂಗ ಮಾರ್ಗ

Published:
Updated:

ಬೃಹತ್‌ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯ ಕಾರಣ ವಿವಿಧ ರಸ್ತೆಗಳನ್ನು ದಾಟಲು ಕೆಲವೆಡೆ ‘ಪಾದಚಾರಿ ಮೇಲುಸೇತುವೆ’ಗಳನ್ನು ಮಹಾನಗರ ಪಾಲಿಕೆ ನಿರ್ಮಿಸಿತ್ತು. ಆದರೆ ಮೆಟ್ಟಲುಗಳನ್ನು ಹತ್ತಿ ರಸ್ತೆ ದಾಟಿ ಇಳಿಯಲು ವಯೋವೃದ್ಧರು, ಗರ್ಭಿಣಿಯರು, ಅಂಗವಿಕಲರಿಗೆ ತೀವ್ರ ತೊಂದರೆಯಾಗುತ್ತದೆ.

ಇದನ್ನು ಗಮನಿಸಿ ಮಹಾನಗರದ ಜನಪರ ಕಾಳಜಿಯ ಸಮಾಜ ಸೇವಕರು ರಸ್ತೆ ದಾಟಲು ರಸ್ತೆಗಳ ಕೆಳಭಾಗದಲ್ಲಿ ‘ಸುರಂಗ ಮಾರ್ಗ’ ನಿರ್ಮಿಸಿ, ಪಾದಚಾರಿಗಳು ಸುರಕ್ಷಿತ ಹಾಗೂ ಸರಳವಾಗಿ ರಸ್ತೆ ದಾಟಲು ಅನುಕೂಲ ಮಾಡಿಕೊಟ್ಟಿದ್ದಾರೆ.ಕಾಲಾನಂತರದಲ್ಲಿ ಪಾದಚಾರಿ ಸುರಂಗ ಮಾರ್ಗಗಳ ಉಸ್ತುವಾರಿ ಹಾಗೂ ಸ್ವಚ್ಛತೆಯತ್ತ ಮಹಾನಗರ ಪಾಲಿಕೆಯ ಸಿಬ್ಬಂದಿ ನಿಗಾ ವಹಿಸದಿರುವುದರಿಂದ ಅವುಗಳಲ್ಲಿ ಕೊಳೆ, ಕೊಳಚೆ ಹಾಗೂ ಹಲವರಿಗೆ ಮೂತ್ರ ವಿಸರ್ಜನಾ ತಾಣವಾಗಿ ಅವುಗಳಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗತೊಡಗಿತು.ಪಾದಚಾರಿ ಸುರಂಗ ಮಾರ್ಗದಲ್ಲಿ ಆರೋಗ್ಯಕರ ವಾತಾವರಣ ಹಾಗೂ ಸುರಕ್ಷತೆ ಬಗ್ಗೆ ಕ್ರಮ ಜರುಗಿಸಬೇಕಾಗಿದೆ.  ಸುರಂಗ ಮಾರ್ಗಗಳಲ್ಲಿಯ ಕೊಳಚೆ, ದುರ್ನಾತದಿಂದಾಗಿ ಪಾದಚಾರಿಗಳು ವಾಹನಗಳ ಮಧ್ಯದಿಂದಲೇ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾರೆ. ಇದು ಅಪಾಯಕಾರಿ.ಪಾದಚಾರಿ ಸುರಂಗಮಾರ್ಗದ ಸಮರ್ಪಕ ನಿರ್ವಹಣೆಯ ಕುರಿತು ಸರ್ಕಾರ ಹಾಗೂ ಮಹಾನಗರಪಾಲಿಕೆಯ ಗಮನ ಸೆಳೆಯಲು ಪ್ರಾಯೋಗಿಕವಾಗಿ ನಗರದ ಮಹಾರಾಣಿ ಕಾಲೇಜು ವೃತ್ತದಿಂದ ಕೆ.ಆರ್‌. ವೃತ್ತದ ಮಧ್ಯೆ ಬರುವ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಬಳಿ ಇರುವ ಸುರಂಗಮಾರ್ಗವನ್ನು ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವರು, ಮೇಯರ್, ಉಪ ಮೇಯರ್, ಪಾಲಿಕೆ ಆಯುಕ್ತರು, ಪುರಪಿತೃಗಳು ಹಾಗೂ ಅಭಿಯಂತರರು, ಕಸ ತುಳಿಯದೇ, ಮೂಗು ಮುಚ್ಚಿಕೊಳ್ಳದೇ ದಾಟಲಿ. ನಂತರವಾದರೂ ಸಮಸ್ಯೆ ಬಗೆಹರಿದೀತು. ಅನಾರೋಗ್ಯಕರ ವಾತಾವರಣದಿಂದ ನಿತ್ಯ ಸಂಚರಿಸುವ ಪಾದಚಾರಿಗಳಿಗೆ ಸುರಂಗಮಾರ್ಗದಲ್ಲಿ ಆರೋಗ್ಯಕರ ಸುರಕ್ಷಿತ ವಾತಾವರಣ ನಿರ್ಮಿಸುವಂತಾಗಲಿ ಎಂದು ಹಾರೈಸುವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry