ಮಂಗಳವಾರ, ಮೇ 18, 2021
22 °C

ದುರಸ್ತಿಯಾಗದ ತಡೆಗೋಡೆ, ಕೃಷಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಯಿಲ (ಉಪ್ಪಿನಂಗಡಿ): ಕೊಯಿಲ ಗ್ರಾಮದ ಏಣಿತಡ್ಕ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ನಿರ್ಮಾಣಗೊಂಡಿದ್ದ ತಡೆಗೋಡೆಯೊಂದು ವರ್ಷದ ಹಿಂದೆ ಕುಸಿದು ಬಿದ್ದಿದೆ. ಅದರ ದುರಸ್ತಿಯಾಗದ ಪರಿಣಾಮ ಸ್ಥಳೀಯ ರೈತರೊಬ್ಬರ ಕೃಷಿ ನಿರಂತರವಾಗಿ ಹಾಳಾಗುತ್ತಿದೆ. ದುರಸ್ತಿಯಾಗದ ಸೇತುವೆ ಮತ್ತು ಅದರಿಂದ ಆಗುವ ಕೃಷಿ ಹಾನಿಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.ಕೊಯಿಲ ಗ್ರಾಮದ ಏಣಿತಡ್ಕ ಪರಿಶಿಷ್ಟ ಪಂಗಡದ (ಮರಾಠಿಗರು) ಮಂದಿ ವಾಸಿಸುತ್ತಿರುವ ಒಂದು ದೊಡ್ಡ ಕಾಲೊನಿ. ಅಡಕೆ, ತೆಂಗು ಸೇರಿದಂತೆ ಹಲವು ಬೆಳೆಗಳ ತೋಟಗಳಿವೆ. ಇಲ್ಲಿ ಕೃಷಿಯನ್ನು ಅವಲಂಬಿಸಿ ನೂರಾರು ಕುಟುಂಬಗಳು ಬದುಕು ನಡೆಸುತ್ತಿದೆ. ಕಾಲೊನಿಯ ಜನತೆಯ ಬಹುಕಾಲದ ಬೇಡಿಕೆಯಂತೆ ಏಣಿತಡ್ಕ ಕಾಲೊನಿ ಮೂಲಕ ಆಲಂಕಾರು ಪೇಟೆಗೆ ಸಂಪರ್ಕ ಕಲ್ಪಿಸುವ ಇಲ್ಲಿಯ ರಸ್ತೆಗೆ ನಾಲ್ಕು ವರ್ಷದ ಹಿಂದೆ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋದಾ ಅವರ ಮುತುವರ್ಜಿಯಲ್ಲಿ ಸೇತುವೆ ನಿರ್ಮಾಣಗೊಂಡಿತ್ತು.ಇದರಿಂದ ಈ ಭಾಗದ ಜನತೆ ಹಲವು ವರ್ಷದ ಬೇಡಿಕೆಯೊಂದು ಈಡೇರಿತು ಎಂದು ಸಂತೋಷಪಟ್ಟಿದ್ದರು. ಆದರೆ ಈ ಸೇತುವೆಗಾಗಿ ನಿರ್ಮಾಣವಾದ ತಡೆಗೋಡೆ ಒಂದೇ ವರ್ಷದಲ್ಲಿ ಕುಸಿದು ಹೋಯಿತು. ಮಳೆಗಾಲದ ನೀರಿನ ಪ್ರವಾಹಕ್ಕೆ ತಡೆಗೋಡೆ ಕೊಚ್ಚಿ ಹೋಯಿತು. ಪಕ್ಕದ ರೈತ ಯೋಗಿಂದ್ರ ನಾಯ್ಕ ಅವರಿಗೆ ಸೇರಿದ ಅಡಕೆ ತೋಟಕ್ಕೆ ಹಾನಿಯಾಗತೊಡಗಿದೆ.ತಡೆಗೋಡೆ ಕುಸಿದು ವರ್ಷಗಳು ಸಂದರೂ ಈವರೆಗೆ ಅದರ ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಯೋಗಿಂದ್ರ ನಾಯ್ಕ ಅವರ ತೋಟದ ಅಡಕೆ ಮರಗಳು ಮಳೆಗಾಲದಲ್ಲಿ ನೀರಿನ ರಭಸಕ್ಕೆ ಧರೆಗುರುಳುತ್ತಿವೆ. ಅವರ ತೋಟಕ್ಕೆ ನೀರುಣಿಸಲು ಇದ್ದ ಕೆರೆ ಈಗ ನೀರು ಪಾಲಾಗಿದೆ. ಈ ಎಲ್ಲಾ ಬೆಳವಣಿಗೆಯಿಂದ ಯೊಗೀಂದ್ರ ನಾಯ್ಕ ಅವರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ವರ್ಷದಿಂದ ವರ್ಷಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಲೇ ಇದೆ.`ಹಲವು ಗ್ರಾಮ ಸಭೆಗಳಲ್ಲಿ ಮನವಿ ಮಾಡಿದ್ದೇನೆ, ಯಾವ ಕ್ರಮವನ್ನೂ ಕೈಗೊಂಡಿಲ್ಲ. ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗದವರಾಗಲೀ ಇತ್ತ ತಿರುಗಿಯೂ ನೋಡಿಲ್ಲ. ಒಂದೆರಡು ತಿಂಗಳಲ್ಲಿ ಮತ್ತೆ ಮಳೆ ಆರಂಭ ಆಗಲಿದೆ. ಇನ್ನಷ್ಟು ಅಡಕೆ ಗಿಡಗಳು ನೀರಿನ ಪ್ರವಾಹಕ್ಕೆ ಬಲಿಯಾಗಲಿದೆ. ನನ್ನ ತೋಟ ಸಂಪೂರ್ಣ ನಾಶವಾಗುವ ಎಲ್ಲಾ ಸಾಧ್ಯತೆಗಳಿವೆ~ ಎಂದು ಯೊಗೀಂದ್ರ ನಾಯಕ್ `ಪ್ರಜಾವಾಣಿ~ ಜತೆ ಅಸಹಾಯಕತೆ  ತೋಡಿಕೊಂಡರು.ಮಳೆಗಾಲಕ್ಕೆ ಮುನ್ನ ತಡೆಗೋಡೆ ದುರಸ್ತಿ ಮಾಡದಿದ್ದಲ್ಲಿ ಮುಂದೆ ಸೇತುವೆಗೂ ಅಪಾಯ ಕಾಡಬಹುದು ಎನ್ನುವ ಗ್ರಾಮಸ್ಥರು ಸಂಬಂಧಪಟ್ಟವರು ಶೀಘ್ರ ಇದರ ದುರಸ್ಥಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.