ಗುರುವಾರ , ಮೇ 13, 2021
18 °C

ದುರಸ್ತಿ, ಖರೀದಿಗೆ ಹಣ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸುಟ್ಟು ಹೋಗಿರುವ  ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸದೇ ಇರುವುದು ಹಾಗೂ ಅದರಿಂದ ಗ್ರಾಮೀಣ ಪ್ರದೇಶದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಪ್ರಸ್ತಾಪಿಸಿ, ಈ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಘಟನೆ ಬುಧವಾರ ನಡೆಯಿತು.ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತಂತೆ ಚರ್ಚಿಸಲು ಯಲಬುರ್ಗಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಒತ್ತಾಯಿಸಿದರು.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ ಸಮರ್ಪಕವಾಗಿಲ್ಲ, ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋದರೆ ಅದನ್ನು ಬದಲಾಯಿಸಲು ಜೆಸ್ಕಾಂ ಅಧಿಕಾರಿಗಳು 15ರಿಂದ 20 ದಿನಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಸಂಸದ ಶಿವರಾಮಗೌಡ ಹಾಗೂ ಎಲ್ಲ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಗುಡುಗು ಸಹಿತ ಮಳೆ, ಸಿಡಿಲು ಬಡಿತದಿಂದ ಸುಮಾರು 59 ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿವೆ. 139 ವಿದ್ಯುತ್ ಕಂಬಗಳು ಬಿದ್ದು ಹೋಗಿವೆ ಎಂದು ಜೆಸ್ಕಾಂ ಕಾರ್ಯ ಪಾಲಕ ಎಂಜಿನಿಯರ್ ಸಭೆಗೆ ವಿವರಿಸಿದರು.ನಂತರ ಮಾತನಾಡಿದ ಮುಖ್ಯಮಂತ್ರಿ ಸದಾನಂದಗೌಡ, ಜಿಲ್ಲೆಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಗಾಗಿ ಎರಡು ಕೇಂದ್ರಗಳಿದ್ದು, ಸುಟ್ಟುಹೋದವುಗಳನ್ನು ಈ ಕೇಂದ್ರಗಳಲ್ಲಿ ಶೀಘ್ರ ದುರಸ್ತಿ ಮಾಡಿಸಬೇಕು. ಹೊಸ ಟ್ರಾನ್ಸ್‌ಫಾರ್ಮರ್‌ಗಳನ್ನು ಖರೀದಿಸಲು ಅಗತ್ಯವಿರುವ ಅನುದಾನ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಕೆಲವೆಡೆ ಆಲಿಕಲ್ಲು ಮಳೆಯಿಂದ ಭತ್ತ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾದ ಬಗ್ಗೆ ವರದಿ ಬಂದಿವೆ. ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದು ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸೂಚನೆ ನೀಡಿದರು.ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಒತ್ತಾಯಪೂರ್ವಕವಾಗಿ ಸಾಲ ವಸೂಲು ಮಾಡುವಂತಿಲ್ಲ, ಬದಲಿಗೆ ಹೊಸ ಸಾಲ ನೀಡಲು ಅಗತ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಗಾರು ಹಂಗಾಮಿಗಾಗಿ ಅಗತ್ಯವಿರುವ ಗೊಬ್ಬರ ಮತ್ತು ಬಿತ್ತನೆ ಬೀಜವನ್ನು ಈಗಿನಿಂದಲೇ ದಾಸ್ತಾನು ಮಾಡಿಟ್ಟುಕೊಳ್ಳಬೇಕು.

 

ಜಿಲ್ಲೆಯಲ್ಲಿ ಮಳೆ ವೈಫಲ್ಯದಿಂದ ಸುಮಾರು 200 ಕೋಟಿ ರೂಪಾಯಿಗಳಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳು ತೃಪ್ತಿಕರವಾಗಿವೆ. ಅಲ್ಲದೇ, ಬರ ಪರಿಹಾರ ಕಾಮಗಾರಿಗಳ ಬಗ್ಗೆ ನಿಗಾ ವಹಿಸಲು ಹೋಬಳಿಗೊಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಿ ವಾರಕ್ಕೊಮ್ಮೆ ಪರಿಶೀಲನಾ ಸಭೆ ನಡೆಸಬೇಕು. ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಂಸದ ಶಿವರಾಮಗೌಡ, ಶಾಸಕರಾದ ಸಂಗಣ್ಣ ಕರಡಿ, ಅಮರೇಗೌಡ ಪಾಟೀಲ್ ಬಯ್ಯೊಪುರ, ಈಶಣ್ಣ ಗುಳಗಣ್ಣವರ್, ಪರಣ್ಣ ಮುನವಳ್ಳಿ, ಶಿವರಾಜ್ ಎಸ್ ತಂಗಡಗಿ, ಹಾಲಪ್ಪ ಆಚಾರ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆ ಸೀತಾ ಹಲಗೇರಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.