ಭಾನುವಾರ, ಜನವರಿ 19, 2020
28 °C

ದುರುದ್ದೇಶಕ್ಕೆ ಒತ್ತಾಸೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಸಮಾಜ ಹಲವು ಧರ್ಮ, ನಂಬಿಕೆ, ಆಚರಣೆಗಳ ಸಮಷ್ಟಿಯ ರೂಪ. ಎಲ್ಲ ಬಗೆಯ ಧಾರ್ಮಿಕ ಆಚರಣೆಗಳಿಗೂ ಮುಕ್ತ ಅವಕಾಶ ಸಂವಿಧಾನದಲ್ಲಿಯೇ ಅಡಕವಾಗಿದೆ. ದೇಶವನ್ನು ಜಾತ್ಯತೀತವೆಂದು ಘೋಷಿಸಿರುವುದರಲ್ಲಿ ಎಲ್ಲ ಮತ ಧರ್ಮಗಳನ್ನೂ ಸಮಾನವಾಗಿ ಪರಿಗಣಿಸಿದ ಆಶಯವಿದೆ.ಅಂದರೆ ಇಲ್ಲಿ ಯಾವ ಧರ್ಮವೂ ಮೇಲಲ್ಲ, ಯಾವ ಧರ್ಮವೂ ಕೀಳಲ್ಲ. ಯಾವುದೇ ಧಾರ್ಮಿಕ ಆಚರಣೆಗೆ ಸಮಾನ ಅವಕಾಶ. ಬಹುಸಂಖ್ಯಾತರು ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ಪರಸ್ಪರ ಗೌರವ ಭಾವದಲ್ಲಿ ಸಾಮರಸ್ಯದಿಂದ ಜೀವನ ನಡೆಸುತ್ತಿರುವುದು ಭಾರತೀಯ ಜೀವನ ಪದ್ಧತಿ.

 

ಇದನ್ನೇ ಭಾರತೀಯ ವಿಭೂತಿ ಪುರುಷರು ಕಾಲಕಾಲಕ್ಕೆ ಪ್ರತಿಪಾದಿಸಿ ಸರ್ವ ಸಮುದಾಯಗಳಿಂದಲೂ ಪೂಜ್ಯರಾಗಿದ್ದಾರೆ. ಇತರ ಧರ್ಮಗಳಿಂದ ಉತ್ತಮ ಅಂಶಗಳನ್ನು ಅಂಗೀಕರಿಸಿ ಅಳವಡಿಸಿಕೊಳ್ಳುವ ಹೊಂದಾಣಿಕೆ ಭಾವನೆಯನ್ನು ಭಾರತೀಯರು ಹಿಂದಿನಿಂದಲೂ ಪ್ರದರ್ಶಿಸಿದ್ದಾರೆ.ಆದ್ದರಿಂದಲೇ ಭಾರತೀಯ ಹಿಂದೂ ಸಮಾಜ, ಸಾವಿರಾರು ಜಾತಿ ಪಂಗಡಗಳಿಂದ ಕೂಡಿದ್ದರೂ ಮೊತ್ತದಲ್ಲಿ `ಮನುಕುಲವೆಲ್ಲ ಒಂದು; ಜಗತ್ತೆಲ್ಲ ಒಂದೇ ಕುಟುಂಬ~ ಎನ್ನುವ ಉದಾತ್ತ ಧ್ಯೇಯವನ್ನು ಜೀವನಮೌಲ್ಯವನ್ನಾಗಿ ಅಂಗೀಕರಿಸಿದೆ.

 

ಪರಕೀಯರ ದಾಳಿ, ಅತಿಕ್ರಮಣಗಳಿಂದ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಒದಗಿದಾಗ ಸಂಘಟಿತರಾಗಿ ಪ್ರತಿರೋಧ ಒಡ್ಡಿದ ನಿದರ್ಶನಗಳೂ ಇತಿಹಾಸದಲ್ಲಿ ದಾಖಲಾಗಿವೆ. ಜೊತೆಗೆ ಭಾರತೀಯ ಸಮಾಜದಲ್ಲಿದ್ದ ಸತಿ ಸಹಗಮನ, ಬಾಲ್ಯವಿವಾಹದಂಥ ಅಮಾನವೀಯ ಅನಾಗರಿಕ ಆಚರಣೆಗಳಿಗೆ ತಡೆಯಾಗಿದೆ.ಕೆಲವು ಪಂಗಡಗಳಲ್ಲಿ ಉಳಿದುಕೊಂಡು ಬಂದಿರುವ ಅಮಾನವೀಯ ಆಚರಣೆಗಳು ಮತ್ತು ಅನಿಷ್ಟ ಸಂಪ್ರದಾಯಗಳನ್ನು ನಿಲ್ಲಿಸುವ ಮೂಲಕ ಹಿಂದೂ ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನಗಳು ಇನ್ನೂ ನಡೆಯಬೇಕಿದೆ.ಈ ನಿಟ್ಟಿನಲ್ಲಿ ಈಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವಗಳು ಗಮನಾರ್ಹ ವೇದಿಕೆಗಳು. ಹಿಂದೂ ಸಮಾಜಕ್ಕೆ ಅಭಿಶಾಪದಂತೆ ತಟ್ಟಿರುವ ಅಸ್ಪೃಶ್ಯತೆ, ಕಾನೂನು ಪ್ರಕಾರ ನಿಷೇಧಕ್ಕೆ ಒಳಗಾಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಉಳಿದುಕೊಂಡಿರುವುದು ಈ ಸಂಬಂಧ ದಾಖಲಾಗುತ್ತಿರುವ ಪ್ರಕರಣಗಳಿಂದ ಸ್ಪಷ್ಟವಾಗುತ್ತದೆ. ಇದರ ವಿರುದ್ಧ ಸಾಮಾಜಿಕ ಜಾಗೃತಿಯನ್ನು ಮೂಡಿಸುವಲ್ಲಿ ಇಂಥ ವೇದಿಕೆಗಳು ಮಹತ್ವದ ಪಾತ್ರ ವಹಿಸಬೇಕು.

 

ಅಸ್ಪೃಶ್ಯತೆ ಮಾತ್ರವಲ್ಲದೆ ಶ್ರೇಣೀಕೃತ ಸಮಾಜ ವ್ಯವಸ್ಥೆ ಆಚರಣೆಗಳ ನೆಲೆಯಲ್ಲಿ ಉಳಿದುಕೊಂಡಿರುವುದು ಸರ್ವ ಸಮಾನತೆಯ ಸಂವಿಧಾನದ ಆಶಯವನ್ನು ನಿಷ್ಕ್ರಿಯಗೊಳಿಸುವ ಅಂಶ. ಗಂಡು ಮಗುವಿನಿಂದಲೇ ಮೋಕ್ಷ ಎಂಬ ಮೂಢನಂಬಿಕೆಯ ಪರಿಣಾಮ ಅವ್ಯಾಹತವಾಗಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ.ಈ ಲಿಂಗತಾರತಮ್ಯ ಭಾವ ನಿವಾರಣೆಯಾಗದೆ ಭಾರತೀಯ ಸಮಾಜ ಸುಧಾರಣೆ ಆಗದು. ಜನತೆಯ ನಿತ್ಯದ ಬದುಕಿನಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ ಅನುಷ್ಠಾನವಾಗುವ ಜಾಗೃತಿಗೆ ಈ ವೇದಿಕೆಗಳು ಪ್ರೇರಣೆ ನೀಡಬೇಕು.ಇದಕ್ಕೆ ವಿರುದ್ಧವಾಗಿ ಪರಧರ್ಮೀಯರ ವಿರುದ್ಧ ದ್ವೇಷ ಮೂಡಿಸುವುದಕ್ಕೆ ಇವು ಕಾರಣವಾದರೆ ಸಾಮಾಜಿಕ ಸಂಘರ್ಷಕ್ಕೆ ಆಸ್ಪದವಾಗುತ್ತದೆ. ಭಾರತೀಯ ಸಮಾಜದಲ್ಲಿ ಕೋಮುದಳ್ಳುರಿಯನ್ನು ಹಬ್ಬಿಸುವ ವಿದೇಶಿ ಭಯೋತ್ಪಾದಕ ಧಾರ್ಮಿಕ ಮೂಲಭೂತವಾದದ ದುರುದ್ದೇಶಕ್ಕೆ ಒತ್ತಾಸೆ ನೀಡಿದಂತಾಗುತ್ತದೆ.

 

ಅನಕ್ಷರತೆ, ಅಸ್ಪೃಶ್ಯತೆ, ಮೌಢ್ಯಾಚರಣೆಗಳಿಂದ ಮುಕ್ತವಾದ  ಹಿಂದೂ ಸಮಾಜ ಹೊರಗಿನ ಯಾವುದೇ ಬಗೆಯ ದಾಳಿಯನ್ನು ಎದುರಿಸಲು ಸಮರ್ಥ ಎಂಬುದನ್ನು  ಮರೆಯಬಾರದು.

ಪ್ರತಿಕ್ರಿಯಿಸಿ (+)