ಮಂಗಳವಾರ, ಮೇ 11, 2021
27 °C

ದುರ್ಗದ ವನಸಿರಿ

ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

ಕಣ್ಣು ಹಾಯಿಸಿದ ಕಡೆಯೆಲ್ಲ ಬರೀ ಕಪ್ಪುಭೂಮಿ, ಕೊಳವೆಬಾವಿ ನೀರಲ್ಲಿ ಅಪಾಯಕಾರಿ ಫ್ಲೋರೈಡ್, ಕುಡಿವ ನೀರಿಗೆ ಸದಾ ಹಾಹಾಕಾರ, ಉದ್ಯೋಗ ಅರಸಿ ವರ್ಷವಿಡೀ ಗುಳೆ ಹೋಗುವ ಜನ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕನ್ನು ವರ್ಣಿಸಲು ಇಷ್ಟು ಸಾಕು.

 ಆದರೆ ಇಂಥ ಬೆಂಗಾಡಲ್ಲೂ ಸ್ವಾಭಾವಿಕ ಕಾಡಿದೆ, ಹಸಿರಿದೆ. ಇದುವೇ ರಮಣೀಯ ನಿಸರ್ಗಧಾಮ `ರಂಗಯ್ಯನದುರ್ಗ~.ಬಯಲು ಸೀಮೆಯ ಹಸಿರು ತಿಲಕ ಎನ್ನಬಹುದಾದ ಇದು ಕೊಟ್ಟೂರು- ಉಜ್ಜಿನಿ ಮಾರ್ಗದಲ್ಲಿ ಜಗಳೂರಿನಿಂದ 10 ಕಿ ಮೀ ದೂರದ ಕೆಳಗೋಟೆ ಗ್ರಾಮದ ಸಮೀಪವೇ ಇದೆ. ಮೈಸೂರು ಮಹಾರಾಜರ ಕಾಲದಲ್ಲಿಯೇ ಇದಕ್ಕೆ ಮೀಸಲು ಅರಣ್ಯ ಪಟ್ಟ ಸಿಕ್ಕಿತ್ತು. ಆದರೆ ಕಳೆದೆರಡು ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾವಲುಗಾರರಿಲ್ಲದೆ ವಿನಾಶದ ಹಾದಿ ಹಿಡಿದಿದೆ.ಥಟ್ಟನೆ ನೋಡಿದರೆ ಸಹ್ಯಾದ್ರಿ ಶ್ರೇಣಿಯನ್ನು ನೆನಪಿಸುವ ರಕ್ಕಸಘಟ್ಟ, ಹೊನ್ನಜ್ಜಿ ಕುಂಟೆ, ಕುರ್ಚಿ ಕಲ್ಲು, ಕ್ವಾರಮಟ್ಟಿ, ಜಾನೆ ಕಣಿವೆ, ವಾಲ್‌ಗುಂಡು, ಕೊಡಗುಂಡಿನ ಕಲ್ಲು, ಬಿಕಲು ಬೆಟ್ಟ ಪ್ರದೇಶಗಳು ಹಸಿರು ಹೊದ್ದು ಮನಸೂರೆಗೊಳ್ಳುತ್ತವೆ. ಸಮುದ್ರ ಮಟ್ಟದಿಂದ 3 ಸಾವಿರ ಅಡಿ ಎತ್ತರದ ಈ ಬೆಟ್ಟ, ಕಾಡಲ್ಲಿ 170ಕ್ಕೂ ಹೆಚ್ಚು ಪ್ರಭೇದದ ಗಿಡಮೂಲಿಕೆಗಳು ಹಾಗೂ 30ಕ್ಕೂ ಹೆಚ್ಚು ಜಾತಿಯ ಮರಗಿಡಗಳಿವೆ.ಕೇರಳದ ಪಶ್ಚಿಮಘಟ್ಟಗಳಲ್ಲಿ ವ್ಯಾಪಕವಾದ ಆಹ್ಲಾದಕರ ಸುವಾಸನೆಯ `ಲೆಮನ್ ಗ್ರಾಸ್~, ಮರಬೆಂಡೆ, ಕಾಡು ಕಳ್ಳಿ, ಕಾಡು ಕೊತ್ತಂಬರಿ, ಕಾಡು ಈರುಳ್ಳಿ ಬೆಟ್ಟ ಹತ್ತುವವರ ಕಾಲಿಗೆ ತೊಡರುವಷ್ಟು ದಟ್ಟವಾಗಿ ಬೆಳೆದಿವೆ. ಬೆಟ್ಟದ ನೆಲ್ಲಿ, ಮಧುನಾಶಿನಿ, ತೊಟ್ಲುಕಾಯಿ, ಅಳಿಲು ಕಾಯಿ ಇತ್ಯಾದಿಗಳಿವೆ.

 

ಅತ್ಯಮೂಲ್ಯ ಶ್ರೀಗಂಧ, ಹೊಳೆಮತ್ತಿ, ಬೀಟೆ, ಕಮರಾ, ದಿಂಡಿಗ, ಕಾಚು, ಮರಾಲೆ, ಪಚಾಲಿ, ಜಾನೆ, ಹೊನ್ನೆ, ನಗರಿ ಮರಗಳನ್ನು ಸಹ ಇಲ್ಲಿ ನೋಡಬಹುದು. ಬೆಟ್ಟದೆಡೆಗೆ ಸಾಗುವಾಗ ಎದುರುಗೊಳ್ಳುವ ಹಳ್ಳಗಳ ದಡದಲ್ಲಿ ಚಿರತೆ ಹೆಜ್ಜೆ, ಕೊಂಡುಕುರಿಯ ಹಿಕ್ಕೆ, ಕರಡಿ ಕೂದಲು, ನವಿಲು ಗರಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತವೆ.ಮತ್ತೆರಡು ಹೆಜ್ಜೆಗಳನ್ನಿಡುವಷ್ಟಲ್ಲಿ ಎದುರಾಗುವ, ಜಂಘಾಬಲವನ್ನೆ ಅಡಗಿಸಿಬಿಡುವ ದೈತ್ಯ ಗುಹೆಯೇ ರಂಗಯ್ಯನದುರ್ಗದ ನೈಸರ್ಗಿಕ ಕಲ್ಲಿನ ಗುಹೆ. ಚಿರತೆ, ತೋಳ, ಕರಡಿಯಂತಹ ಪ್ರಾಣಿಗಳಿಗೆ ಇದು ಆಶ್ರಯ ತಾಣ.`ಬೃಹತ್ ಏಕಶಿಲೆಯಲ್ಲಿ ಎರಡು ಗುಹೆಗಳು ನಿರ್ಮಾಣಗೊಂಡಿವೆ. ಮೃಗಗಳ ಭಯ ಹಾಗೂ ಅಭೇದ್ಯ ಕಾಡಿನಿಂದಾಗಿ ಇತ್ತ ಜನರ ದೃಷ್ಟಿ ಹರಿದಿಲ್ಲ. ಚಿರತೆಗಳು ಬೇಟೆಯನ್ನು ಇಲ್ಲಿಗೆ ಬಂದು ನಿರುಮ್ಮಳವಾಗಿ ತಿನ್ನುತ್ತವೆ~ ಎಂದು ಇಲ್ಲಿನ ಕಾವಲುಗಾರ ಬಸವರಾಜು ಹೇಳುತ್ತಾರೆ.

ಆ ಗುಹೆಯ ಬಂಡೆಯನ್ನು ಹರಸಾಹಸ ಪಟ್ಟು ಹತ್ತಿದರೆ ಸುಮಾರು 80 ಚ ಕಿ ಮೀ ಸುತ್ತಳತೆಯಲ್ಲಿ ಮೈಚೆಲ್ಲಿ ಮಲಗಿರುವ ವನದೇವಿಯ ದರ್ಶನವಾಗುತ್ತದೆ. ಕೃಷ್ಣಮೃಗ, ಚಿರತೆ, ಕರಡಿ, ನವಿಲುಗಳ ಚಲನವಲನ ಗೋಚರಿಸುತ್ತದೆ. ಅಲ್ಲದೇ ನಕ್ಷತ್ರ ಆಮೆ, ಕಾಡುಪಾಪ, ಚಿಪ್ಪುಹಂದಿ, ಉಡಗಳು ಸಹ ಇಲ್ಲಿ ವಾಸವಾಗಿವೆ ಎಂಬುದಕ್ಕೆ ಕಾವಲುಗಾರ ಬಸವರಾಜುವಿನ ಮೊಬೈಲ್ ಚಿತ್ರಗಳು ಪುರಾವೆ ಒದಗಿಸುತ್ತವೆ.ವಿಶ್ವದಲ್ಲಿ ಬೆರಳೆಣಿಕೆಯಷ್ಟು ಕಂಡುಬರುವ `ದರವಾಯನ~ ಎಂಬ ಪಕ್ಷಿ ಇಲ್ಲಿದೆ ಎಂಬುದಾಗಿ ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸದಸ್ಯ ಸಂಜಯ್ ಗುಬ್ಬಿ ದಾಖಲಿಸಿದ್ದಾರೆ.ಕಾಡಿನ ಕಾವಲುಗಾರ

ಅರಣ್ಯ ಕಾವಲುಗಾರ ಬಸವರಾಜು ಕಾಡಿನಷ್ಟೇ ಕೌತುಕದ ಮನುಷ್ಯ. ತಾತ-ಮುತ್ತಾತನ ಕಾಲದಿಂದಲೂ ಇವರ ಕುಟುಂಬ ಅರಣ್ಯ ಕಾವಲಿನಲ್ಲೇ ಜೀವನ ಸವೆಸಿದೆ. ಬಸವರಾಜು ಅನಕ್ಷರಸ್ಥರಾದರೂ ತಾತನಿಂದ ಸಂಪಾದಿಸಿರುವ ಅರಣ್ಯ ಪಾಠ ಎಂಥವರನ್ನೂ ಬೆಕ್ಕಸಬೆರಗಾಗಿಸುತ್ತದೆ.ಕಾಡಿನ ಸಸ್ಯಗಳ ಬಗ್ಗೆ ಪಟಪಟನೆ ಮಾಹಿತಿ ನೀಡುವ ಅವರು ಉದ್ದನೆಯ ಮಚ್ಚು ಹಿಡಿದು ಅರಣ್ಯದೊಳಕ್ಕೆ ಕಾಲಿಟ್ಟರೆ ಕಾಡುಗಳ್ಳರಿಗೆ ನಡುಕ ಹುಟ್ಟುತ್ತದೆ ಎನ್ನುತ್ತಾರೆ ಗ್ರಾಮಸ್ಥರು.ಕಳೆದ 25 ವರ್ಷಗಳಿಂದ ನಿಷ್ಠೆಯಿಂದ ರಂಗಯ್ಯನದುರ್ಗದ ಕಾವಲು ಕಾಯುತ್ತಾ ಬಂದಿರುವ ಬಸವರಾಜುಗೆ ಅರಣ್ಯ ಇಲಾಖೆ ಎರಡು ವರ್ಷಗಳಿಂದ ಗೌರವಧನವನ್ನೇ ನೀಡಿಲ್ಲ. ಅಲ್ಲದೇ ಸದ್ಯ ಕೂಡ್ಲಿಗಿ ಸಮೀಪದ ಕುರುಚಲು ಕಾಡು ಕಾಯುವುದಕ್ಕೆ ಕಳಿಸಿದೆ. ಆದರೂ ಅವರು ಉತ್ಸಾಹ ಕಳೆದುಕೊಂಡಿಲ್ಲ, ಕಾಡು ಕಾಯುವುದನ್ನು ನಿಲ್ಲಿಸಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.