ಮಂಗಳವಾರ, ನವೆಂಬರ್ 19, 2019
29 °C

ದುರ್ಗದ ಸ್ಪೈಡರ್‌ಮ್ಯಾನ್

Published:
Updated:

ತಮಿಳುನಾಡಿನ ತೇಣಿ ಜಿಲ್ಲೆಯ ಆಂಡಿಪಟ್ಟಿ ತಾಲ್ಲೂಕಿನ ಕಾಮರಾಜಪುರಂ ಗ್ರಾಮದ ಹತ್ತು ವರ್ಷದ ಬಾಲಕ ಭಾರವಾದ ಹೃದಯದೊಂದಿಗೆ ಕರ್ನಾಟಕದತ್ತ ಹೆಜ್ಜೆ ಹಾಕಿದಾಗ ಅಗೋಚರ ಶಕ್ತಿ ಆತನನ್ನು ಕೈಬೀಸಿ ಕರೆಯುತ್ತಿತ್ತು.ಭರವಸೆಯ ಕಿರಣದೊಂದಿಗೆ ನೂರಾರು ಕಿಲೋ ಮೀಟರ್ ದೂರ ಸಾಗಿ, ಎಲ್ಲೆಲ್ಲೋ ಆಶ್ರಯ ಪಡೆದು, ಕಲ್ಲು ಬಂಡೆಗಳ ನಡುವೆ ಕಸರತ್ತುಗಳನ್ನು ಕೈಗೊಂಡ ಆ ಬಾಲಕ ಮುಂದೆ ಜಗತ್ತೇ ನಿಬ್ಬೆರಗಾಗುವಂತೆ ಸಾಹಸಗೈದ. ಈ ಹುಡುಗನೇ ಚಿತ್ರದುರ್ಗದ ಜ್ಯೋತಿರಾಜ್. ಯಾವುದೇ ಸುರಕ್ಷಿತ ಸಾಧನೆಗಳಿಲ್ಲದೇ ಕಲ್ಲು-ಬಂಡೆಗಳನ್ನು ಏರುವುದರಲ್ಲಿ ನೈಪುಣ್ಯ ಪಡೆದಿರುವ ಪ್ರಪಂಚದ ಶ್ರೇಷ್ಠ ಹತ್ತು ಜನರಲ್ಲಿ ಜ್ಯೋತಿರಾಜ್ ಸಹ ಒಬ್ಬರು. ಮನೋಬಲವೇ ಈತನ ಸುರಕ್ಷತೆ.`ಕೋತಿರಾಜ್' ಎಂದೇ ಪ್ರಸಿದ್ಧರಾದ ಜ್ಯೋತಿರಾಜ್ ಚಿತ್ರದುರ್ಗದ `ಸ್ಪೈಡರ್‌ಮ್ಯಾನ್'. ತಲೆಗೊಂದು ಬಟ್ಟೆ ಸುತ್ತಿ, ಕಾಲಿಗೆ ಬೂಟು ಧರಿಸಿ, ರೆಪ್ಪೆ ಮುಚ್ಚಿ ತೆಗೆಯುವ ಮುನ್ನ ಚಿತ್ರದುರ್ಗದ ಕೋಟೆಯಲ್ಲಿನ ಕಲ್ಲು-ಬಂಡೆ, ಗೋಡೆಗಳನ್ನು ಸರಸರನೆ ಏರಿ ಚಾಕಚಕ್ಯತೆಯಿಂದ ಅಲ್ಲಿಯೇ ಹಲವು ಕಸರತ್ತುಗಳನ್ನು ಮಾಡುವ ಈ ವೀರ ಸಾಹಸಿ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚು. 1988ರ ಆಗಸ್ಟ್ 15ರಂದು ಜನಿಸಿರುವ ಈತ ಕೋಟೆ ನಾಡಿನಲ್ಲಿ ಸ್ವತಂತ್ರ ಹಕ್ಕಿ. ಕೋಟೆಗೆ ಬಂದವರು ಈತನ ಸಾಹಸ ನೋಡದಿದ್ದರೆ ಪ್ರವಾಸ ಅಪೂರ್ಣ.`ಸಾವಿನ ಭಯ ಇಲ್ಲ. ನೋವು, ಬಡತನವೇ ನನ್ನ ಸಾಧನೆಗೆ ಪ್ರೇರಣೆ. ಬಡತನವೇ ನನಗೆ ಸ್ಫೂರ್ತಿ. ನೋವು ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಸಾಧನೆಯೇ ನನ್ನ ಗುರಿ' ಎನ್ನುತ್ತಾರೆ ಅವರು. `ಉಪವಾಸ ಇದ್ದಾಗ ಅನ್ನ ನೀಡಿದ್ದು ಕರ್ನಾಟಕ. ನಾನೊಬ್ಬ ಕನ್ನಡಿಗ. ಹಲವು ವಿದೇಶಿ ಕಂಪೆನಿಗಳು ಆಹ್ವಾನ ನೀಡಿದ್ದರೂ ಹೋಗಿಲ್ಲ. ಇಲ್ಲಿಯೇ ಇದ್ದು ಸಾಹಸ ಮಾಡಬೇಕು ಎನ್ನುವುದು ನನ್ನ ಛಲ. ನಮ್ಮಲ್ಲೂ ಪ್ರತಿಭೆ ಇದೆ ಎನ್ನುವುದನ್ನು ಜಗತ್ತಿಗೆ ತೋರಿಸಬೇಕು' ಎನ್ನುವುದು ಅವರ ಪ್ರತಿಪಾದನೆ. ಅಂದಹಾಗೆ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ಸೇರಿದಂತೆ ದೇಶ-ವಿದೇಶಗಳ ಹತ್ತು ಹಲವು ಸ್ದ್ದುದಿ ಮಾಧ್ಯಮಗಳು ಅವರ ಸಾಹಸವನ್ನು ಕೊಂಡಾಡಿವೆ.ರೈತ ಕುಟುಂಬದ ತಂದೆ ಈಶ್ವರನ್ ಹಾಗೂ ತಾಯಿ ಕುಂಜರಮ್ಮ ಕಡುಬಡವರು. ಇವರಿಗೆ ಏಳು ಮಕ್ಕಳು. ಐವರು ಗಂಡು, ಎರಡು ಹೆಣ್ಣು. ಜ್ಯೋತಿರಾಜ್ ಐದನೆಯವರು. ಹತ್ತನೇ ವಯಸ್ಸಿನವರೆಗೆ ಜ್ಯೋತಿರಾಜ್‌ಗೆ ಜಾನುವಾರು ಕಾಯುವ ಕೆಲಸ. ಹತ್ತು ವರ್ಷದ ಬಾಲಕನಾಗಿದ್ದಾಗ ಹುಟ್ಟೂರು ಕಾಮರಾಜಪುರಂನಿಂದ ಮನೆ ಬಿಟ್ಟು ಕರ್ನಾಟಕಕ್ಕೆ ಬಂದಾಗ ಜ್ಯೋತಿರಾಜ್‌ಗೆ ಆಶ್ರಯ ನೀಡಿದ್ದು ಬಾಗಲಕೋಟೆಯ ಸಿಹಿ ತಿಂಡಿಗಳ ತಯಾರಕ ಯೋಗರಾಜ್.ಬಾಗಲಕೋಟೆಯಲ್ಲಿ ಎರಡು ವರ್ಷ ಕಳೆದ ಜ್ಯೋತಿರಾಜ್‌ನ ಮನಸ್ಸು ಚಿತ್ರದುರ್ಗದತ್ತ ಎಳೆಯಿತು. ಅಲ್ಲಿಂದ ಕಾಲ್ನಡಿಗೆಯಲ್ಲೇ ಹೆಜ್ಜೆ ಹಾಕಿದ. ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗೊಲ್ಲರಹಟ್ಟಿಯಲ್ಲಿ ಮಹಾದೇವಪ್ಪ ಎನ್ನುವವರು ಆಶ್ರಯ ನೀಡಿದರು. ಬಳಿಕ ಚಿತ್ರದುರ್ಗಕ್ಕೆ ಬಂದು ಎಂಜಿನಿಯರ್ ದಿವಾಕರ್‌ರ ಬಳಿ ಗಾರೆ ಕೆಲಸ ಆರಂಭಿಸಿದ. ಅಲ್ಲಿ ರಾತ್ರಿ ಕಾವಲುಗಾರನಾಗಿಯೂ ಕೆಲಸ.ಆಗೆಲ್ಲಾ ಸಾಕಷ್ಟು ತರಲೆ, ಸಾಹಸ ಕೆಲಸ ಮಾಡುತ್ತಿದ್ದ ಜ್ಯೋತಿರಾಜ್‌ಗೆ ಪ್ರೋತ್ಸಾಹ ನೀಡಿದವರು ಅದೇ ದಿವಾಕರ್. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮೊದಲ ಬಾರಿ ಹಣ ನೀಡಿ ಕಳುಹಿಸಿಕೊಟ್ಟಿದ್ದನ್ನು ಜ್ಯೋತಿರಾಜ್ ಇಂದಿಗೂ ಸ್ಮರಿಸುತ್ತಾರೆ. ಆದರೆ, ಅವರಿಗೆ ಭವಿಷ್ಯದ ಸ್ಪಷ್ಟ ಕಲ್ಪನೆಯೇ ಇರಲಿಲ್ಲ. ಗಾರೆ ಕೆಲಸ, ಕಾವಲು ಕೆಲಸದಲ್ಲಿ ಬದುಕು ಸಾಗಿ ಹೋಗುತ್ತದೆ ಎನ್ನುವುದಷ್ಟೇ ಇತ್ತು. ಆದರೆ, ಪರಿಸ್ಥಿತಿ, ಪರಿಶ್ರಮ, ಅದೃಷ್ಟ ಭವಿಷ್ಯವನ್ನೇ ಬದಲಾಯಿಸಿತು.`ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕೋಟೆಗೆ ಹೋದಾಗ ಕೋತಿಗಳು ನನ್ನ ಬದುಕಿನ ದಿಕ್ಕನ್ನೇ ಬದಲಿಸಿದವು. ಕೋತಿಗಳಿಂದ ಸ್ಫೂರ್ತಿ ಪಡೆದು ಬಂಡೆ ಏರಲು ಅಂದು ಆರಂಭಿಸ್ದ್ದಿದು ಇಂದಿಗೂ ನಿಂತಿಲ್ಲ. ಆತ್ಮಹತ್ಯೆ ಮನಸ್ಸಿನಲ್ಲಿ ಮತ್ತೆ ಸುಳಿಯಲೇ ಇಲ್ಲ. ಇದು ಸ್ವಕಲಿಕೆಯ ವಿದ್ಯೆ. ಯಾರೂ ಮಾರ್ಗದರ್ಶನ ನೀಡಿಲ್ಲ.ಪ್ರಥಮ ಬಾರಿ ಕೋಟೆಯಲ್ಲಿನ ಅಕ್ಕ-ತಂಗಿ ಹೊಂಡದ ಬಳಿಯ `ಹಂಸಗೀತೆ' ಬಂಡೆ ಏರಿದೆ' ಎಂದು ಜ್ಯೋತಿರಾಜ್ ತಮ್ಮ ಮೊದಲ ಹೆಜ್ಜೆಗಳನ್ನು ನೆನೆಯುತ್ತಾರೆ. 2006ರ ಮೇ ತಿಂಗಳಲ್ಲಿ ಅವರು ಮೊದಲ ಬಾರಿ ಕೋಟೆಯ ಗೋಡೆ, ಕಲ್ಲು-ಬಂಡೆಗಳನ್ನು ಯಾವುದೇ ಸುರಕ್ಷಿತ ಸಾಧನೆಗಳಿಲ್ಲದೇ ಏರಿದ್ದರು.ಇವರ ಸಾಹಸದ ಯಶೋಗಾಥೆ ಯಾಣ, ಹಂಪಿ, ಬಾದಾಮಿ, ಬೇಲಾಪುರ, ಮಧ್ಯಪ್ರದೇಶದ ಪಂಚಮಣಿ, ರಾಮನಗರದ ಬಂಡೆಗಳು, ಹುಟ್ಟೂರು ಕಾಮರಾಜಪುರಂನಲ್ಲಿನ 350 ಅಡಿ ಎತ್ತರದ ಬಂಡೆ, ಬೆಂಗಳೂರು ಮತ್ತು ಮೈಸೂರಿನಲ್ಲಿನ ಬೃಹತ್ ಕಟ್ಟಡಗಳು, ಜೋಗಜಲಪಾತದವರೆಗೂ ಸಾಗಿದೆ.ಕಳೆದ ವರ್ಷ ಏಪ್ರಿಲ್ 24ರಂದು ಕೋಟೆಯಲ್ಲಿ ಶಿಷ್ಯ ಪಡೆಗೆ ಗೋಡೆ ಹತ್ತುವ ತರಬೇತಿ ನೀಡುತ್ತಿದ್ದಾಗ ಕೈಜಾರಿ ಕೆಳಗೆ ಬಿದ್ದು ಎಡಗಾಲು ಮುರಿದುಕೊಂಡಿದ್ದರು. ಆಗ ಸಾರ್ವಜನಿಕರು ಚಿಕಿತ್ಸೆಗೆ ರೂ. 3 ಲಕ್ಷ ನೀಡಿದರು. ಮೊದಲ ಬಾರಿ ಇಷ್ಟೊಂದು ಹಣ ನೋಡಿದ್ದ ಜ್ಯೋತಿರಾಜ್, ಈ ಮೊತ್ತದಲ್ಲೇ ತನ್ನ 15 ಜನ ಶಿಷ್ಯರಿಗೆ ಹಗ್ಗ, ಬೆಲ್ಟ್, ಕ್ಲಿಪ್ಸ್, ಬೂಟು ಮುಂತಾದ ಸಾಮಗ್ರಿಗಳನ್ನು ಖರೀದಿಸಿದರು.ಈ ಘಟನೆಯಿಂದ ಇನ್ನು ಕೋತಿರಾಜ್ ಸಾಹಸ ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದವು. ಈ ಮಾತುಗಳನ್ನೇ ಸವಾಲಾಗಿ ಸ್ವೀಕರಿಸಿದ ಅವರು ಜೋಗ ಜಲಪಾತವನ್ನು ತಮ್ಮ ಸಾಮರ್ಥ್ಯದ ಸಾಬೀತಿಗೆ ಆಯ್ಕೆ ಮಾಡಿಕೊಂಡರು. ಅತ್ಯಂತ ಕಡಿದಾದ ಮತ್ತು ಅಪಾಯಕಾರಿಯಾದ ರಾಕೆಟ್ ಫಾಲ್ಸ್‌ನಲ್ಲಿ ಸಾಹಸಗೈಯಲು ನಿರ್ಧರಿಸಿದರು. ಕಳೆದ ಏಪ್ರಿಲ್ 6ರಂದು ಜಲಪಾತದ ಅಡಿಯಿಂದ ಮುಡಿಗೇರುವ ಸಾಹಸ ಕಾರ್ಯ ಆರಂಭಿಸಿದರು. ಸುಮಾರು 962 ಅಡಿ ಎತ್ತರದ ಜಲಪಾತವನ್ನು ಯಾವುದೇ ಸುರಕ್ಷತಾ ಸಾಧನೆಗಳಿಲ್ಲದೇ ಕೇವಲ 3 ಗಂಟೆ 15 ನಿಮಿಷಗಳಲ್ಲಿ ಏರುವ ಮೂಲಕ ದಾಖಲೆ ನಿರ್ಮಿಸಿದರು.`ಕಲ್ಲು-ಬಂಡೆಗಳಿಗೆ ಪಾಚಿ ಕಟ್ಟಿತ್ತು. 650 ಅಡಿ ಏರಿದಾಗ ದೊಡ್ಡಕಲ್ಲು ಕಿತ್ತು ಬಂತು. ತಲೆ ಮೇಲೆ ಕಲ್ಲು ಬಿತ್ತು. ಸುಮಾರು 20 ಅಡಿ ಜಾರಿದೆ. ಅಲ್ಲಿಯೇ ಕಲ್ಲೊಂದನ್ನು ಹಿಡಿದುಕೊಂಡು ಜೋತಾಡಿದೆ. ಈ ಸಾಹಸ ನೋಡುತ್ತ್ದ್ದಿದವರು ನಾನು ಸತ್ತ್ದ್ದಿದ್ದೇನೆ ಎಂದೇ ಭಾವಿಸಿದರು. ಅರ್ಧ ಗಂಟೆ ಜೋತಾಡುತ್ತಲೇ ವಿಶ್ರಾಂತಿ ಪಡೆದು ಪೂರ್ಣ ಏರಿದೆ. ಅಲ್ಲಿ ಚಿಕಿತ್ಸೆ ಪಡೆದು ಮರುದಿನವೇ ಕೋಟೆಗೆ ಬಂದೆ' ಎಂದು ಜ್ಯೋತಿರಾಜ್ ಜೋಗ ಜಲಪಾತದ ಸಾಹಸವನ್ನು ಬಣ್ಣಿಸುತ್ತಾರೆ.ಬೆಂಗಳೂರಿನಲ್ಲಿರುವ ಬೃಹತ್ ಕಟ್ಟಡ ಏರುವುದು ತಮ್ಮ ಮುಂದಿನ ಗುರಿ ಎನ್ನುವ 25 ವರ್ಷದ ಜ್ಯೋತಿರಾಜ್, ಆಸ್ಟ್ರೇಲಿಯಾದ ರೆಡ್‌ಬುಲ್ ಕಂಪೆನಿ ಮತ್ತು ಜಪಾನ್‌ನ ಬೋಟ್ ಕಂಪೆನಿಯೊಂದು ಸೇರಿದಂತೆ ಬೇರೆ ಬೇರೆ ದೇಶಗಳ ಹಲವು ಕಂಪೆನಿಗಳು ಆಹ್ವಾನ ನೀಡಿದ್ದರೂ ತಿರಸ್ಕರಿಸಿದ್ದಾರೆ.`ನನಗೆ ಸಂಬಳ ಮುಖ್ಯವಲ್ಲ. ಸಾಧನೆ ಮುಖ್ಯ. ಅದೂ ಸಹ ಕರ್ನಾಟಕದಲ್ಲೇ ನಡೆಯಬೇಕು. ಇದು ದೇವರು ನೀಡಿರುವ ಕಾಣಿಕೆ. ಪ್ರತಿ ಶನಿವಾರ ಆಂಜನೇಯನಿಗೋಸ್ಕರ ಉಪವಾಸ ಮಾಡುತ್ತೇನೆ. 18 ಗಂಟೆ ನೀರು ಸಹಾ ಕುಡಿಯುವುದಿಲ್ಲ' ಎಂದು ಹೇಳುತ್ತಾರೆ.ಜ್ಯೋತಿರಾಜ್ ಶಿಷ್ಯರು ದೆಹಲಿ, ಹೈದರಾಬಾದ್, ಮುಂಬೈ, ಕೊಲ್ಕತ್ತಾ, ಪಂಚಮುಖಿಯಲ್ಲಿ ನಡೆದ ಕೃತಕ ಗೋಡೆ ಹತ್ತುವ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕೃತಕ ಗೋಡೆ ಹತ್ತುವ ಸ್ಪರ್ಧೆಯಲ್ಲಿ ಅವರ ಶಿಷ್ಯ ಮೊಹಮ್ಮದ್ ರಫಿ 3ನೇ ಸ್ಥಾನ ಪಡೆದಿದ್ದಾರೆ.ಜ್ಯೋತಿರಾಜ್ ನಿರಂತರವಾಗಿ ಎತ್ತರಗಳನ್ನು ಏರುತ್ತ್ದ್ದಿದಾರೆ. ಸರ್ಕಾರ ತನ್ನ ಸಾಹಸ ಕಾರ್ಯಗಳನ್ನು ಮೆಚ್ಚಿ ಸೂಕ್ತ ಪ್ರೋತ್ಸಾಹ ಮತ್ತು ಶಾಶ್ವತವಾದ ಆಸರೆ ನೀಡುತ್ತಿಲ್ಲ ಎನ್ನುವ ಕೊರಗು ಅವರಲ್ಲಿದೆ.

 

ಪ್ರತಿಕ್ರಿಯಿಸಿ (+)