ದುರ್ಗಮ ದಾರಿ!

7

ದುರ್ಗಮ ದಾರಿ!

Published:
Updated:
ದುರ್ಗಮ ದಾರಿ!

ಬೆಂಗಳೂರಿನ ವಾಹನ ದಟ್ಟಣೆ ಆತಂಕಪಡುವ ಪ್ರಮಾಣದಲ್ಲಿ ಬೆಳೆಯುತ್ತಲೇ ಇದೆ. ಈ ದಟ್ಟಣೆಯನ್ನು  ನಿಭಾಯಿಸಲು ಸಮರ್ಥ ಹಾಗೂ ಸಮಂಜಸವಾದ ಕ್ರಮಗಳನ್ನು ಜಾರಿಗೊಳಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಈ ಟ್ರಾಫಿಕ್ ಸಮುದ್ರದಲ್ಲಿ ಈಜಿ ಈಚೆ ಬರುವುದು ದುಃಸ್ವಪ್ನದಂತಾಗಿದೆ.ನಗರದ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಸಾಹಸವೇ ಸರಿ. ಇಷ್ಟಕ್ಕೂ ನಮ್ಮಲ್ಲಿ ಫುಟ್‌ಪಾತ್‌ಗಳನ್ನು ಪಾದಚಾರಿಗಳಿಗಾಗಿ ಉಳಿಸಿದ್ದೇವೆಯೇ? ನಾವು ಕಾಣುವುದು ಇಕ್ಕಟ್ಟಾದ, ಕಸದ ತೊಟ್ಟಿಯಂತಾದ ಇಲ್ಲವೇ ಇಟ್ಟಿಗೆಗಳೆಲ್ಲ ತುಂಡುತುಂಡಾದ ಪಾದಚಾರಿ ಮಾರ್ಗಗಳನ್ನೇ. ಒಂದಿಷ್ಟು ಪಾದಚಾರಿಸ್ನೇಹಿ ಫುಟ್‌ಪಾತ್‌ಗಳಿದ್ದರೂ ಅವುಗಳನ್ನು ಸಣ್ಣಪುಟ್ಟ ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುತ್ತಾರಲ್ಲ? ಫುಟ್‌ಪಾತ್‌ಗಳೇ ಇಲ್ಲದಿರುವ ಪ್ರಮೇಯವೇ ಅತ್ಯಧಿಕ.ಅಪಾರ ಪ್ರಮಾಣದಲ್ಲಿ ಬೆಳೆಯುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಬಿಡಿಎ ಮತ್ತಿತರ ಸ್ಥಳೀಯಾಡಳಿತ ಸಂಸ್ಥೆಗಳು ರಸ್ತೆ ಅಗಲೀಕರಣ, ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿವೆ.

 ಇವು, ವಾಹನ ಸವಾರರ ಅನುಕೂಲ ಮತ್ತು ವಾಹನ ಸಾಂದ್ರತೆಗೆ ಕಡಿವಾಣ ಹಾಕುವುದನ್ನಷ್ಟೇ ಪರಿಗಣಿಸಿ ಕಾರ್ಯರೂಪಕ್ಕೆ ತಂದ ಯೋಜನೆಗಳು. ಹೀಗಾಗಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಇಲ್ಲಿ ಎರಡನೇ ಆದ್ಯತೆ!ಪಾಲಿಕೆ ಮತ್ತಿತರ ಸ್ಥಳೀಯಾಡಳಿತ ಸಂಸ್ಥೆಗಳು ಪಾದಚಾರಿಗಳ ಅನುಕೂಲಕ್ಕಾಗಿಯೂ ಸ್ಕೈವಾಕ್ (ಪಾದಚಾರಿಗಳ ಮೇಲ್ಸೇತುವೆ) ಹಾಗೂ ಅಂಡರ್‌ಪಾಸ್ ನಿರ್ಮಿಸುವ ಪ್ರಯತ್ನ ಮಾಡಿಲ್ಲವೆಂದಲ್ಲ. ಆದರೆ ದುಬಾರಿ ವೆಚ್ಚದಲ್ಲಿ ಕಾರ್ಯಗತಗೊಂಡಿರುವ ಈ ಯೋಜನೆಗಳು ಅಸಮರ್ಪಕವಾದ ಆಲೋಚನೆ, ದೂರದೃಷ್ಟಿಯ ಕೊರತೆ, ಅವೈಜ್ಞಾನಿಕ ವಿನ್ಯಾಸಗಳಿಂದ ಬಳಕೆದಾರರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿವೆ.

ಪಾದಚಾರಿ ಮೇಲ್ಸೇತುವೆ* ಅಂಗವಿಕಲರು ಮತ್ತು ಗಾಲಿಕುರ್ಚಿ ಬಳಸುವ ಅಸಹಾಯಕರು ಈ ಮೇಲ್ಸೇತುವೆಗಳನ್ನು ಹೇಗೆ ಬಳಸಬೇಕು ಎಂಬುದು ಯಕ್ಷಪ್ರಶ್ನೆ. ಇವು ಕಾನೂನಿಗೆ ವಿರುದ್ಧವೂ ಹೌದು. (ಅಂಗವಿಕಲ ವ್ಯಕ್ತಿಗಳು/ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣಪ್ರಮಾಣದ ಪಾಲ್ಗೊಳ್ಳುವಿಕೆ/ ಕಾಯ್ದೆ 1995ರ ಸೆಕ್ಷನ್ 44 ಮತ್ತು 45, ಎಂಟನೇ ಅಧ್ಯಾಯ, ತಾರತಮ್ಯ ಇಲ್ಲದಿರುವಿಕೆ ಅನ್ವಯ).* ಪಾದಚಾರಿ ಮೇಲ್ಸೇತುವೆಗಳು ಹಾಗೂ ಅಂಡರ್‌ಪಾಸ್‌ಗಳ ಯೋಜನೆ ಸಿದ್ಧಪಡಿಸುವಾಗ ಹಿರಿಯ ನಾಗರಿಕರಿಗೂ ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡಿಲ್ಲ ಎಂಬುದು ಅತ್ಯಂತ ಸ್ಪಷ್ಟ. ಅಂದರೆ ಸ್ಥಳೀಯಾಡಳಿತ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎ ಮಾತ್ರವಲ್ಲದೆ ಬಿಎಂಟಿಸಿ ಕೂಡಾ ಈ ಬಳಕೆದಾರ ವರ್ಗವನ್ನು ನಿರ್ಲಕ್ಷಿಸಿ ಯೋಜನೆಯನ್ನು ಸಿದ್ಧಪಡಿಸಿವೆ.ಮೆಟ್ಟಿಲುಗಳ ಏರುದಾರಿ

ಆರೋಗ್ಯವಂತರು ಮತ್ತು ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲದವರಷ್ಟೇ ಈ ಸ್ಕೈವಾಕ್‌ಗಳನ್ನು ಹತ್ತಿ ರಸ್ತೆ ದಾಟಬಹುದು. ಈ ಏರುದಾರಿಯ ತುಂಬ ಮೆಟ್ಟಿಲುಗಳೇ ಮೆಟ್ಟಿಲುಗಳು! ವಯಸ್ಸಾದವರು, ಅಂಗವಿಕಲರಷ್ಟೇ ಅಲ್ಲ, ಮಕ್ಕಳಿಗೆ ಹಾಗೂ ಮಹಿಳೆಯರೂ ಈ ಯೋಜನೆ ಸಿದ್ಧಪಡಿಸಿದವರ ದೃಷ್ಟಿಗೆ ಗೋಚರಿಸಿಲ್ಲ. ಅವರಿಗೂ ಇದು ದುರ್ಗಮ ಹಾದಿಯೇ.ಹಾಗಿದ್ದರೆ ಈಗ ಹೇಳಿ, ಬಳಕೆದಾರರ ವರ್ಗವನ್ನೇ ನಿರ್ಲಕ್ಷಿಸಿ ಸಿದ್ಧಪಡಿಸಿರುವ ಈ ಸ್ಕೈವಾಕ್‌ಗಳು ಯಾರಿಗಾಗಿ? ಈ ಎಲ್ಲಾ ಕಾರಣಗಳನ್ನು ಗಮನಿಸಿದರೆ, ಒಬ್ಬ ಸಾಮಾನ್ಯ ಬಳಕೆದಾರನಿಗೂ ಈ ಯೋಜನೆ ಅನುಕೂಲಕರವಾಗಿಲ್ಲ.

 

ಅರಮನೆ ರಸ್ತೆಯಲ್ಲಿರುವ ಸೋಫಿಯಾ ಶಾಲೆಯ ಬಳಿಯಿರುವ ಸ್ಕೈವಾಕ್ ಹಾಗೂ ಮಹಾರಾಣಿ ಕಾಲೇಜು ವೃತ್ತದಲ್ಲಿರುವ ಸ್ಕೈವಾಕ್‌ಗಳು ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ಉತ್ತಮ ನಿದರ್ಶನಗಳು.`ಲಿಫ್ಟ್~ ಬೇಕೆ?

ಇಲ್ಲೊಂದು ತಮಾಷೆಯಿದೆ... ಮೆಜೆಸ್ಟಿಕ್ ವೃತ್ತದಲ್ಲಿ (ಮೆಜೆಸ್ಟಿಕ್ ಚಿತ್ರಮಂದಿರದ ಎದುರು) ಲಿಫ್ಟ್ ಅಥವಾ ಎಸ್ಕಲೇಟರ್‌ಗಳನ್ನು ಅಳವಡಿಸುವ ಯೋಜನೆ ಪಾಲಿಕೆ ಮುಂದಿದೆಯಂತೆ! ಅಸಮರ್ಪಕವಾದ ಯೋಜನೆಯಿಂದಾಗಿರುವ ಅನನುಕೂಲವನ್ನು ಸರಿಪಡಿಸಲು ಇರುವ ಜನಾಕರ್ಷಕವಾದ ಮತ್ತೊಂದು ಕಾಮಗಾರಿ.ಅರ್ಥಾತ್, ಇದು ಮತ್ತೊಂದು ಅವೈಜ್ಞಾನಿಕ ಕಾರ್ಯಯೋಜನೆಯಲ್ಲದೆ ಮತ್ತೇನು?

ಅತ್ಯಂತ ಜನನಿಬಿಡವಾಗಿರುವ ಮೆಜೆಸ್ಟಿಕ್ ವೃತ್ತದಲ್ಲಿ ಲಿಫ್ಟ್ ಅಳವಡಿಸಿದರೆಂದಿಟ್ಟುಕೊಳ್ಳಿ. ಒಂದು ಬಾರಿಗೆ ಕನಿಷ್ಠ 50 ಮಂದಿಯನ್ನಾದರೂ ಒಯ್ಯುವಷ್ಟು ಸಾಮರ್ಥ್ಯದ ಲಿಫ್ಟ್‌ಗಳನ್ನು ಅಳವಡಿಸಿದರೆ ಪರವಾಗಿಲ್ಲ.

ಎಸ್ಕಲೇಟರ್‌ಗಳದೂ ಇದೇ ಸಮಸ್ಯೆ.

 

ಗಾಲಿಕುರ್ಚಿಯಲ್ಲಿ ಓಡಾಡುವ ಅಂಗವಿಕಲರು ಇವುಗಳನ್ನು ಬಳಸುವ ಬಗೆ ಎಂತು? ಎಲ್ಲಕ್ಕಿಂತ ಮುಖ್ಯವಾಗಿ, ಪದೇಪದೇ ವಿದ್ಯುತ್ ಕಡಿತವನ್ನು ಅನುಭವಿಸುತ್ತಿರುವ ಈ ದಿನಗಳಲ್ಲಿ ಅತ್ಯಧಿಕ ಜನದಟ್ಟಣೆಯ ಸಾರ್ವಜನಿಕ ಸ್ಥಳಗಲ್ಲಿ ಲಿಫ್ಟ್/ಎಸ್ಕಲೇಟರ್‌ಗಳನ್ನು ಅಳವಡಿಸುವುದು ಎಷ್ಟು ಸಮಂಜಸ? ಲಿಫ್ಟ್/ಎಸ್ಕಲೇಟರ್ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ ವಿದ್ಯುತ್ ಕಡಿತವಾಯಿತು ಎಂದಿಟ್ಟುಕೊಳ್ಳಿ... ಒಳಗಿರುವ ಅಮಾಯಕರ ಪರಿಸ್ಥಿತಿಯನ್ನು ಊಹಿಸಿ.ಪ್ರಸ್ತುತ ಇರುವ ಸ್ಕೈವಾಕ್/ಅಂಡರ್‌ಪಾಸ್‌ಗಳ ಪರಿಸ್ಥಿತಿ ಹೀಗಿರುವಾಗಲೇ ಇನ್ನೂ 100 ಸ್ಕೈವಾಕ್‌ಗಳನ್ನು ನಿರ್ಮಿಸುವ ಮಾತಾಡುತ್ತಿದೆ. ತಲಾ 1.5 ಕೋಟಿ ರೂಪಾಯಿ ಯೋಜನಾ ವೆಚ್ಚದಂತೆ ಒಟ್ಟು ವ್ಯಯವಾಗುವುದು ಕೇವಲ 150 ಕೋಟಿ ರೂಪಾಯಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry