ದುಶ್ಚಟ ವಿರುದ್ಧ ಸಮರ..!

7

ದುಶ್ಚಟ ವಿರುದ್ಧ ಸಮರ..!

Published:
Updated:

`ಸಾರಾಯಿ ಮತ್ತು ಸೇಂದಿ ಕುಡಿಯದಿರಿ~ ಎಂದು ತಿಳಿ ಹೇಳುವುದು ಸಾಹಸದ ಮಾತು! ಆದರೆ ಸೇಡಂ ತಾಲ್ಲೂಕಿನ 17 ಗ್ರಾಮ ಮತ್ತು 15 ತಾಂಡಾಗಳಲ್ಲಿ ಅಬಕಾರಿ ಸಿಪಿಐ ಪ್ರಭುಗೌಡ ಪಾಟೀಲ ಅವರು ಗ್ರಾಮಸ್ಥರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಹಿಂದುಳಿದ ಗ್ರಾಮ ಮತ್ತು ತಾಂಡಾಗಳ ನಿವಾಸಿಗಳಿಗೆ ತಿಳಿವಳಿಕೆ ನೀಡಲು ಕಳೆದ ತಿಂಗಳು ತೆಲಕೂರ, ಮೇದಕ್, ಮೋತಕಪಲ್ಲಿ, ಊಡಗಿ, ಮದಕಲ್, ಹಂಗನಹಳ್ಳಿ, ಮುಧೋಳ, ನೀಲಹಳ್ಳಿ, ಕೋಡ್ಲಾ, ಕೋಲಕುಂದಾ, ಮದನಾ, ಇಟಕಾಲ್, ಕಾನಾಗಡ್ಡಾ ಮತ್ತು ತುಂಬಲಕುಂಟಾ, ಇಟಕಾಲ್ ಮತ್ತು ಕೋಲಕುಂದಾ ತಾಂಡಾಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಗ್ರಾಮಸ್ಥರ ಮನ ಪರಿವರ್ತಿಸಿದ್ದಾರೆ. ಇವರ ನಿರಂತರ ಪ್ರಯತ್ನದಿಂದ `ಕಳ್ಳಭಟ್ಟಿ ಸರಾಯಿ ಮುಕ್ತ ಗ್ರಾಮ~ ಎಂಬ ಹೆಗ್ಗಳಿಕೆಯ ಪ್ರಮಾಣ ಪತ್ರ ಸಿಕ್ಕಿದೆ. ಈವರೆಗೆ ಜರುಗಿದ ಎಲ್ಲ ಗ್ರಾಮಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಸೇರಿಸಿ ಅವರ ಮೂಲಕ `ಲಿಖಿತ ಭರವಸೆ~ ಪಡೆದಿದ್ದಾರೆ.ಮಾರ್ಚ್ 2010ರಲ್ಲಿ ತಾಲ್ಲೂಕಿನ ರಂಜೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ಬೀದಿ ನಾಟಕ, ಅಣಕು ಪ್ರದರ್ಶನಗಳ ಮೂಲಕ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಆಗಬಹುದಾದ ಅನಾಹುತ, ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಅಲ್ಲದೇ ಕುಟುಂಬ ಸದಸ್ಯರ ಬೀದಿಪಾಲು ಸ್ಥಿತಿಯನ್ನು ಮನಮುಟ್ಟುವಂತೆ ತಲುಪಿಸಿದ್ದಾರೆ.ಕೆಲವು ಗ್ರಾಮಗಳ ಜನಪ್ರತಿನಿಧಿಗಳು, ಮುಖಂಡರು ಸ್ವಯಂ ಪ್ರೇರಣೆಯಿಂದ ತಮ್ಮ ಗ್ರಾಮಕ್ಕೆ ಆಹ್ವಾನಿಸಿ ಸಭೆ ನಡೆಸಿ ಎಂಬ ಅಹವಾಲು ನೀಡುತ್ತಿರುವುದು ಇವರ ಪ್ರಯತ್ನಕ್ಕೆ ಸಿಕ್ಕ ಫಲಿತಾಂಶ. ಈ ಎಲ್ಲ ಉತ್ಸಾಹದ ಮಧ್ಯೆ, ಸಾರಾಯಿ ಅನಧಿಕೃತ ಮಾರಾಟ, ಸಾಗಾಣಿಕೆ ಕುರಿತು 80 ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಅನೈತಿಕ ಚಟುವಟಿಕೆಯಿಂದ ದೂರವಿರಲು ಅಪೇಕ್ಷಿಸಿ ಬಂದವರಿಗೆ ಹೈನುಗಾರಿಕೆ, ವಾಹನ, ಹೊಲಿಗೆ ಯಂತ್ರಗಳನ್ನು ನೀಡಲು ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯಕ್ಕೆ ಶಿಫಾರಸು ಮಾಡಲಾಗಿದೆ. `ಇದರಿಂದ ನಮಗೆ ಮಾನಸಿಕ ನೆಮ್ಮದಿ ಸಿಕ್ಕಿದೆ~ ಎನ್ನುತ್ತಾರೆ, ತುಮ್ಮಲಕುಂಟ ತಾಂಡಾದ ಮಾಣಿಕ್ಯಬಾಯಿ, ಪಾಂಡು ರಾಠೋಡ ಇತರರು.ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರ ಮತ್ತು ಇಲಾಖೆಯ ಯೋಜನೆಗಳು ಜನಸಾಮಾನ್ಯರ ಮನೆ ಮತ್ತು ಮನ ಮುಟ್ಟುವಲ್ಲಿ ಸಾಧ್ಯ ಎಂಬುದಕ್ಕೆ ಸೇಡಂ ತಾಲ್ಲೂಕಿನ ಈ ಗ್ರಾಮಗಳು ಉದಾಹರಣೆಯಾಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry