ಬುಧವಾರ, ಅಕ್ಟೋಬರ್ 16, 2019
27 °C

ದುಷ್ಕರ್ಮಿಗಳ ವಿರುದ್ಧ ಕ್ರಮ: ಡಿ.ಸಿ

Published:
Updated:

ಸಿಂದಗಿ: `ಮಿನಿ ವಿಧಾನ ಸೌಧದ ಎದುರು ಪಾಕ್ ಧ್ವಜ ಹಾರಿಸಿದ ಘಟನೆ ಖಂಡಿಸಿ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರೇ ಮುಂದಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವುದು ಸರಿಯಲ್ಲ~ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಕೆಲ ದುಷ್ಕರ್ಮಿಗಳು ಪಾಕ್ ಧ್ವಜ ಹಾರಿಸಿದ ಘಟನೆಯ ಹಿನ್ನೆಲೆಯಲ್ಲಿ  ಜಿಲ್ಲಾ ಆಡಳಿತ ಭಾನುವಾರ ಇಲ್ಲಿ ನಡೆಸಿದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯೆ ಎಂದು ಸಭೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಶಾಸಕರು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, `ಈ ಘಟನೆ ನನಗೂ ನೋವು ತರಿಸಿದೆ. ಇದು ರಾಷ್ಟ್ರಕ್ಕಾದ ಅವಮಾನ. ನಡೆದ ಘಟನೆಗಿಂತಲೂ ನಂತರದ ಘಟನೆಗೆ ಹೆಚ್ಚಿನ ಪ್ರಚಾರ ಬೇಡ~ ಎಂದು ಸಲಹೆ ನೀಡಿದರು.ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ, `ವಿಧ್ವಂಸಕಾರಿ ಶಕ್ತಿಗಳು ಪಾಕ್ ಧ್ವಜ ಹಾರಿಸಿರುವುದನ್ನು ಜಿಲ್ಲಾ ಆಡಳಿತ ಖಂಡಿಸುತ್ತದೆ. ಈ ಹೇಯ ಕೃತ್ಯ ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ. ದೇಶಾಭಿಮಾನದ ಭಾವನೆಗಳಿಗೆ ದುಷ್ಕರ್ಮಿಗಳು ಧಕ್ಕೆ ತಂದಿದ್ದಾರೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು~ ಎಂದರು.`ಈ ದೇಶದ್ರೋಹ ಕೃತ್ಯದ ವಿರುದ್ಧ ರಾಷ್ಟ್ರಾಭಿಮಾನವುಳ್ಳವರು ಪ್ರತಿಭಟನೆ ಮಾಡುವುದು ಸಹಜವೇ. ಆದರೆ, ಭಾವೋದ್ವೇಗದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವ ಕಾರ್ಯಕ್ಕೆ ಮುಂದಾಗದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಜೊತೆಗೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡದಂತೆ ನೋಡಿಕೊಳ್ಳಬೇಕು~ ಎಂದು ವಿನಂತಿಸಿದರು.`ಈ ಪಟ್ಟಣದಲ್ಲಿ ಇಂಥ ಘಟನೆ ಮರುಕಳಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಶಾಂತಿಪ್ರಿಯ ಸಿಂದಗಿಯಲ್ಲಿ ಇಂಥ ಘಟನೆಗಳು ನಡೆಯಬಾರದಿತ್ತು~ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ, `ಸಿಂದಗಿಯಲ್ಲಿ ಒಂದು ತಿಂಗಳಲ್ಲಿ ನಡೆದ ಮೂರನೇ ಘಟನೆ ಇದು.  ಸ್ಥಳೀಯ ದೇವಸ್ಥಾನ ಒಂದರ ಮೇಲೆ ಪೇಂಟಿನಿಂದ ಬರೆಯಲಾಗಿತ್ತು. ಸ್ಥಳೀಯ ವಿವೇಕಾನಂದ ವೃತ್ತದಲ್ಲಿನ ವಿವೇಕಾನಂದ ಪುತ್ಥಳಿ ಕಣ್ಣಿಗೆ ಹಸಿರು ಬಟ್ಟೆಯನ್ನು ಕಟ್ಟಲಾಗಿತ್ತು~ ಎಂದು ಹೇಳಿದರು.`ಘಟನೆಯ ಬಗ್ಗೆ ಪೊಲೀಸರ ಬದಲು ನೇರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನೋಡಿದರೆ ಇದು ಕಿಡಿಗೇಡಿಗಳ ವ್ಯವಸ್ಥಿತ ಕೃತ್ಯ ಎಂಬುದು ಗೊತ್ತಾಗುತ್ತದೆ. ಯಾವುದೇ ಧರ್ಮೀಯರ ಭಾವನೆಗಳಿಗೆ ಧಕ್ಕೆ ಬಂದಾಗ ಪೊಲೀಸರಿಗೆ ದೂರು ನೀಡಬೇಕೇ ವಿನಾ ಮಾಧ್ಯಮಕ್ಕೆ ತಿಳಿಸುವುದು, ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ಮಾಡಕೂಡದು. ಅದಕ್ಕೆ ಎಳ್ಳಷ್ಟೂ ಅವಕಾಶ ಕೊಡುವುದಿಲ್ಲ~ ಎಂದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಪೂಜಾರಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಎಸ್. ಮಠ, ಚಂದ್ರಶೇಖರ ನಾಗೂರ, ಚನ್ನಪ್ಪಗೌಡ ಬಿರಾದಾರ, ಸಿದ್ದು ಪಾಟೀಲ ಜಾಲವಾದ, ಸಿದ್ದು ಬುಳ್ಳಾ, ಮಲ್ಲು ಪೂಜಾರಿ ಇತರರು ಸಭೆಯಲ್ಲಿದ್ದರು.

Post Comments (+)