ಸೋಮವಾರ, ಮೇ 17, 2021
21 °C

ದುಷ್ಟನಾಗುವ ಇಷ್ಟ ಕಷ್ಟ!

ಡಿ.ಕೆ.ಆರ್ Updated:

ಅಕ್ಷರ ಗಾತ್ರ : | |

ಕೆಂಡದಂಥ ಕಣ್ಣುಗಳು, ಉರುಟುರುಟಾದ ಮುಖ, ಪೊದೆಯಂಥ ಗಡ್ಡ, ಜಡೆಮುನಿಯನು ಹೋಲುವ ಕೇಶರಾಶಿ, `ಖಳನಾಯಕ್ ಹೂ ಮೆ~ ಎನ್ನುವ ಗಡಸು ದನಿ... ಅದು ಚಸ್ವಾ. `ಸಿದ್ಲಿಂಗು~ ಚಿತ್ರದ ಜಮಾಲ್, `ಕೂರ್ಮಾವತಾರ~ದ ಜಯು, `ನಿರಂತರ~ದ ನಾಯಕಿಯ ಅಣ್ಣ- ಹೀಗೆ ನೆಗೆಟೀವ್ ಪಾತ್ರಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡವರು ಅವರು. ಸಿನಿಮಾರಂಗದ ಈ ಚಿಗುರಿಗೆ ರಂಗಭೂಮಿ ತಾಯಿ ಬೇರು.ಅಪ್ಪ ಡಾ.ಹಂಪಯ್ಯ ಸ್ವಾಮಿ ಅವರಂತೆ ವೈದ್ಯನಾಗಬೇಕೆಂಬ ತಾಯಿ ಸರ್ವಮಂಗಳಾ ಅವರ ಒತ್ತಾಸೆಗೆ ಚಸ್ವಾ ಯಾಕೋ ಮಣಿಯಲಿಲ್ಲ. ಕಲಾಲೋಕಕ್ಕೆ ಕಾಲಿಡಲು ಅಜ್ಜ ಪಂಡಿತ ಬಸವರಾಜ ಶಾಸ್ತ್ರಿ ಅವರ ಕೆಲಸಗಳೇ ಪ್ರೇರಣೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ಪದವಿ ಅಧ್ಯಯನ ಮಾಡುತ್ತಿರುವಾಗಲೇ `ಭಾರತ್ ಯಾತ್ರಾ ಕೇಂದ್ರ~ದ ಸಂಪರ್ಕ ಪಡೆದರು.ಕಾಲೇಜಿನಲ್ಲಿ ನಡೆದ ನಾಟಕ ಸ್ಪರ್ಧೆ ಅವರ ಕಲಾಸಕ್ತಿಗೆ ಮತ್ತಷ್ಟು ನೀರೆರೆಯಿತು. `ಸಮುದಾಯ~ ತಂಡದೊಂದಿಗೂ ಗುರುತಿಸಿಕೊಂಡರು. ನಂತರ ನೇರ ಜಿಗಿದದ್ದು ಹೆಗ್ಗೋಡಿನ ನೀನಾಸಂಗೆ. ಎರಡು ವರ್ಷ ರಂಗದ ಹೊರಗು ಒಳಗನ್ನು ಅರಿತರು. ನೀನಾಸಂನ ಪಾಠ, ಅಲ್ಲಿನ ಗ್ರಂಥಾಲಯ ಅವರನ್ನು ರಂಗಭೂಮಿಗೆ ಶ್ರುತಿಗೊಳಿಸಿದವು.

`ಎಲ್ಲಾ ಸರಿ ಚಸ್ವಾ ಏನಿದು ವಿಶಿಷ್ಟ ಹೆಸರು?~ಎನ್ನುವ ಪ್ರಶ್ನೆಗೆ ನಗುವೊಂದೇ ಅವರ ಉತ್ತರ. ತಮ್ಮ ಮೂಲ ಹೆಸರಿನ ಎರಡು ಅಕ್ಷರಗಳನ್ನೇ ಪಡೆದು ಹುಟ್ಟಿದ್ದು ಈ ಹೆಸರು. ನೀನಾಸಂನ ಬ್ಯಾಚ್‌ಮೆಟ್‌ಗಳು ಕರೆದ ಹೆಸರೇ ಬಳುವಳಿಯಾಗಿ ಉಳಿಯಿತು. ಆ ಹೆಸರು ಒಂದು ರೀತಿಯಲ್ಲಿ ಟ್ರಂಪ್‌ಕಾರ್ಡ್ ಎನ್ನುವ ಚಸ್ವಾ, ಕವಿ ಚಂದ್ರಶೇಖರ ಕಂಬಾರರು ತಮ್ಮ `ರಂಗನಾಮ~ದ ಬಗ್ಗೆ ಆಕರ್ಷಿತರಾದದ್ದನ್ನು ಸ್ಮರಿಸುತ್ತಾರೆ. ಆದರೆ `ಪೂರ್ವಾಶ್ರಮ~ದ ಹೆಸರನ್ನು ಬಯಲುಗೊಳಿಸಲು ಅವರಿಗೆ ಸುತರಾಂ ಇಷ್ಟವಿಲ್ಲ!ನೀನಾಸಂನಿಂದ ಹೊರಬಂದ ನಂತರ ಮುಂದೇನು ಮಾಡುವುದು ಎಂಬ ಪ್ರಶ್ನೆ. ರಂಗಭೂಮಿ ನೆರಳಿನಂತೆ ಹಿಂಬಾಲಿಸುತ್ತಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಆರಂಭ. ಮೊದಲೇ ನಾಟಕದ ಹುಚ್ಚಿದ್ದ ಅವರಿಗೆ ಇಲ್ಲಿ ಹಾಲು ತುಪ್ಪವೇ ಸಿಕ್ಕಂತಾಯಿತು.ಅಧ್ಯಯನದ ನೆಪವಾಗಿ `ಪಂಥ~ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು. ಮೂರು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಗಳಿಸಿದರು. ಎನ್‌ಎಸ್‌ಡಿಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ತಾವೇ ಹೊಸ ಹೊಸ ಕಾರ್ಯಾಗಾರಗಳನ್ನು ಆಯೋಜಿಸಿದರು. ನಾಟಕಗಳನ್ನೂ ಆಡಿಸಿದರು.ಇವರ `ಪ್ಲೇಬಾಯ್ ಆಫ್ ವೆಸ್ಟರ್ನ್ ವರ್ಲ್ಡ್~ ನಾಟಕ ನೋಡಿದ್ದ ನಿರ್ದೇಶಕ ಬಿ.ಸುರೇಶ ಅವರಿಂದ `ತಕಧಿಮಿತಾ~ ಧಾರಾವಾಹಿಯಲ್ಲಿ ಅಭಿನಯಿಸುವಂತೆ ಆಹ್ವಾನ. ಆದರೆ ರಂಗಭೂಮಿಯೇ ಬೇರೆ ಕಿರುತೆರೆಯೇ ಬೇರೆ. ಅಲ್ಲಿ ಆಂಗಿಕ ಅಭಿನಯಕ್ಕೆ, ನಿರಂತರ ಭಾವನೆಗಳ ಪ್ರೋಕ್ಷಣೆಗೆ ಮಹತ್ವ. ಪುಟ್ಟ ತೆರೆಯಲ್ಲಿ ಮುಖದ ಹಾವಭಾವವೇ, ಕಣ್ಣಿನ ಸೂಕ್ಷ್ಮತೆಯೇ ಮುಖ್ಯ. ಎರಡೂ ಭಿನ್ನ ನೆಲೆಗಳು.ಕಿರುತೆರೆಯನ್ನು ಸವಾಲಾಗಿ ಸ್ವೀಕರಿಸಿದರು ಚಸ್ವಾ. ನಂತರ ರವಿ ಗರಣಿ ಅವರ ಕಸ್ತೂರಿ ಧಾರಾವಾಹಿಯಲ್ಲಿ ಅಭಿನಯ. ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ಮಾತ್ರ ವೈಶಾಲಿ ಕಾಸರವಳ್ಳಿ ಅವರ `ಮುತ್ತಿನ ತೋರಣ~. ಧೀರಜ್ ಪಾತ್ರಧಾರಿಯಾಗಿದ್ದ ಅವರನ್ನು ಜನ ಈಗಲೂ ಜುಟ್ಟುಬಾಯ್ ಎಂದೇ ಗುರುತಿಸುತ್ತಾರೆ.ಇವರ ಪ್ರತಿಭೆಯನ್ನು ಗುರುತಿಸಿದ ಎಸ್.ಎಲ್.ಎನ್.ಸ್ವಾಮಿ `ನಿರಂತರ~ ಚಿತ್ರದಲ್ಲಿ ನಟಿಸಲು ಕರೆಯಿತ್ತರು. ಅದು ಒಂದು ತುಣುಕು ಸಂಭಾಷಣೆಯೂ ಇರದ ಚಿತ್ರ. ಅಭಿನಯಿಸಬೇಕಾದದ್ದು ನಾಯಕಿಯ ಅಣ್ಣನ ಪಾತ್ರ. ಹೆಚ್ಚು ಖುಷಿ ಕೊಟ್ಟ ಪಾತ್ರವದು. ಆ ನಂತರ ಓದಿನ ಕಾರಣಕ್ಕೆ ತಮಗೆ ಬಂದ ಸಿನಿಮಾ ಅವಕಾಶಗಳನ್ನು ನಿರಾಕರಿಸಿದರು. ಎಂ.ಎ ಮುಗಿಸಿದ ನಂತರ `ಸಿದ್ಲಿಂಗು~ ಚಿತ್ರದಲ್ಲಿ ಅಭಿನಯ.

 

ತುಂಬಾ ಒಳ್ಳೆಯ ಸ್ವಭಾವದ ಅಪ್ಪನಿಗೆ ಅಷ್ಟೇ ಕೆಟ್ಟ ಮಗ ಹುಟ್ಟಿರುತ್ತಾನೆ. ಮಗ ಜಮಾಲ್‌ನಾಗಿ ಅಭಿನಯ ಚಾತುರ್ಯವನ್ನು ಅವರು ಪ್ರದರ್ಶಿಸಿದರು. ಚಿತ್ರರಂಗದ ಮೆಚ್ಚುಗೆಗೂ ಅವರ ನಟನೆ ಪಾತ್ರವಾಯಿತು. `ಸಿದ್ಲಿಂಗು~ ಬಿಡುಗಡೆಯಾದ ದಿನವೇ ಕೂರ್ಮಾವತಾರ ಚಿತ್ರ ಕೂಡ ರೆಕ್ಕೆಪುಕ್ಕ ಕಟ್ಟಿಕೊಂಡು ನಿಂತಿತ್ತು. ಇಲ್ಲಿ ಗಾಂಧಿವೇಷಧಾರಿಯ ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ.  ಅಪ್ಪನನ್ನು ಲಂಚ ಪಡೆಯುವಂತೆ ಪ್ರೇರೇಪಿಸುವ, ತನ್ನ ಓದಿಗೆ ನೀರೆರೆಯಲಿಲ್ಲ ಎಂದು ಹಪಹಪಿಸುವ ಪಾತ್ರವದು.ಎರಡೂ ನೇತ್ಯಾತ್ಮಕ ಪಾತ್ರಗಳು ಅವರಿಗೆ ಖುಷಿ ತಂದಿವೆ. ಸಿದ್ಲಿಂಗುವಿಗಿಂತ ಕೂರ್ಮಾವತಾರ ಭಿನ್ನವಾಗಿ ಕಾಡಿದೆ. ಅದರಲ್ಲಿಯೂ ಗಿರೀಶ ಕಾಸರವಳ್ಳಿ ಅವರ ಜತೆ ಕೆಲಸ ಮಾಡುವ ಸಂತೋಷ ಇನ್ನಷ್ಟು ಬಲ ತಂದಿದೆ. `ದುಷ್ಟ ಪಾತ್ರಗಳು ಇರಲಿ. ಆದರೆ ಏಕತಾನತೆ ಒಲ್ಲೆ. ನಾಯಕ ಖಳನಾಯಕ ಎನ್ನುವ ವಿಂಗಡಣೆಯೇ ನನ್ನೊಳಗಿಲ್ಲ. ಎಲ್ಲ ಪಾತ್ರಗಳೂ ಮುಖ್ಯ. ಒಳಿತು ಕೆಡಕುಗಳ ಸಂಘರ್ಷವೇ ಎಲ್ಲಾ ಮಹಾಕಾವ್ಯಗಳ ಸಾರ. ಹೀಗಿರುವಾಗ ದುಷ್ಟನಾಗಿ ಕಾಣಿಸಿಕೊಳ್ಳುವುದು ಕೂಡ ಮುಖ್ಯವೇ~ ಎಂಬುದು ಚಸ್ವಾ ಅವರ ಧೋರಣೆ.ಸಿನಿಮಾ ಪ್ರವೇಶದ ನಂತರವೂ ರಂಗಭೂಮಿಯೊಂದಿಗೆ ಅವರದು ಗಾಢ ಸಂಬಂಧ. ದೆಹಲಿ, ಆಂಧ್ರಪ್ರದೇಶ, ಒಡಿಶಾ ಹೀಗೆ ನಾಟಕಗಳನ್ನು ಹೊತ್ತ ಅವರದು ನಿರಂತರ `ತಿರುಗಾಟ~. `ಹನ್ನೆರಡು ವರ್ಷಗಳಿಂದ ರಂಗಭೂಮಿಯಿಂದ ಏನೇನೋ ಕಲಿತಿದ್ದೇನೆ. ಕಲಿಯುವುದು ಇನ್ನೂ ಬಹಳಷ್ಟಿದೆ. ಗುರುಗಳನ್ನು ಅರಸುವುದು, ಅವರಿಂದ ಅರಿಯುತ್ತ ಹೋಗುವುದು ನನ್ನ ಗುರಿ~ ಎಂಬುದು ಅವರು ಕಂಡುಕೊಂಡ ಸತ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.