ದುಸ್ಸಾಹಸ ಸಾಕು

ಮಂಗಳವಾರ, ಜೂಲೈ 23, 2019
20 °C

ದುಸ್ಸಾಹಸ ಸಾಕು

Published:
Updated:

ಯೌವನದ ಹೊಸ್ತಿಲಲ್ಲಿರುವ ಮತ್ತು ಜೀವನದ ಉಪಯುಕ್ತ ಸಮಯವನ್ನು, ರಸಗಳಿಗೆಗಳನ್ನು ಇನ್ನೂ ಸವಿಯಬೇಕಿರುವ ವಿದ್ಯಾರ್ಥಿಗಳು, ಯುವಜನರು ದುರಂತ ಸಾವನ್ನಪ್ಪುತ್ತಿರುವ ಪ್ರಸಂಗಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ನಿಜಕ್ಕೂ ಆತಂಕ ಪಡಬೇಕಾದ ಸಂಗತಿ. ಸಾಹಸ ಕ್ರಿಡೆ, ಈಜು, ಚಾರಣಗಳಿಗೆ ಹೋದ ಅನೇಕರು ಹೆಣವಾಗಿ ಬರುತ್ತಿದ್ದಾರೆ. ಇಡೀ ಕುಟುಂಬವನ್ನೇ ಶೋಕದ ಮಡುವಿಗೆ ನೂಕುತ್ತಿದ್ದಾರೆ.ಮಂಗಳೂರು, ಮಲ್ಪೆ, ಉಳ್ಳಾಲ, ಮುರುಡೇಶ್ವರ ಮುಂತಾದ ಕಡಲ ತೀರಗಳು, ಮೇಕೆದಾಟು, ಸಂಗಮದಂಥ `ಸುರಕ್ಷಿತ~ ಸ್ಥಳಗಳು ಕೂಡ ಯುವ ಈಜುಗಾರರ ಪಾಲಿಗೆ ಸಾವಿನ ಕೂಪಗಳಾಗುತ್ತಿವೆ.

 

ಈಜು ಬಲ್ಲವರೂ ನೀರಲ್ಲಿ ಸಿಕ್ಕಿ ಹಾಕಿಕೊಂಡು ಜಲಸಮಾಧಿಯಾಗುತ್ತಿದ್ದಾರೆ. ಕೆಲ ದಿನದ ಹಿಂದೆ ಮಣಿಪಾಲದ ಮಣ್ಣಪಳ್ಳದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾಗಿದ್ದರು. ಮೋಟಾರು ರೇಸ್‌ನಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಯುವಕನೊಬ್ಬ ದೂರದ ಕಾಶ್ಮೀರದಲ್ಲಿ ಸಾವಿಗೀಡಾಗಿದ್ದ.

 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಚಾರಣಕ್ಕೆಂದು ಹೋಗಿ ಆನೆ ಕೋಪಕ್ಕೆ ಬಲಿಯಾದ 23 ವರ್ಷದ ಯುವ ಎಂಜಿನಿಯರ್ ಸಾತ್ವಿಕ್ ಶಾಸ್ತ್ರಿ ಇಂಥ ದುರಂತಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆ.ಈ ರೀತಿಯ ಅವಘಡಗಳು ವರ್ಷವಿಡೀ ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಬಲಿಯಾಗುವವರಲ್ಲಿ ಹೆಚ್ಚಿನವರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಗಷ್ಟೇ ಕಲಿಕೆ ಮುಗಿಸಿ ಕೆಲಸಕ್ಕೆ ಸೇರಿ ಹೊಸ ಹುಮ್ಮಸ್ಸಿನಲ್ಲಿರುವ ತರುಣರು.

 

ಬಿಸಿರಕ್ತದ ಉತ್ಸಾಹದಲ್ಲಿ ಅಪಾಯವನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಳ್ಳುವ, ನಿಯಮವನ್ನು ಪಾಲನೇ ಮಾಡದೇ ಇರುವ, ಸುರಕ್ಷತೆಯನ್ನು ನಿರ್ಲಕ್ಷಿಸುವ  ಪ್ರವೃತ್ತಿಯೇ ಅವರನ್ನು ಸಾವಿನೆಡೆಗೆ ಸೆಳೆಯುತ್ತದೆ. ಹೆತ್ತು- ಹೊತ್ತು ಬೆಳೆಸಿದ ತಂದೆ ತಾಯಿ, ವಾತ್ಸಲ್ಯ ಹರಿಸುವ ಸೋದರ ಸೋದರಿಯರು, ಬಂಧು ಮಿತ್ರರಿಗೆ ಇದು ನೀಡುವ ನೋವಿಗೆ ಎಣೆಯೇ ಇಲ್ಲ.

 

ಈ ಬಗ್ಗೆ ತರುಣ ಪೀಳಿಗೆ ಸ್ವಲ್ಪ ಗಮನ ಕೊಟ್ಟರೂ ಸಾಕು. ದುರಂತ ಎಷ್ಟೋ ಕಡಿಮೆಯಾಗುತ್ತದೆ. ಹಾಗೆ ನೋಡಿದರೆ ಸಾತ್ವಿಕ್ ಸಾವು, ಕಾಡುಮೇಡುಗಳಲ್ಲಿ ಚಾರಣ ಕೈಗೊಳ್ಳುವವರಿಗೆ ಎಚ್ಚರಿಕೆಯ ಗಂಟೆ. ಕಾಡಿನೊಳಗೆ ಕಾಲಿಡುವ ಮುನ್ನ ಅಲ್ಲಿನ ಭೌಗೋಳಿಕ ಪರಿಸರ ಮತ್ತು ಕಾಡುಪ್ರಾಣಿಗಳ ಬಗ್ಗೆ ಸ್ವಲ್ಪವಾದರೂ ಗೊತ್ತಿರಬೇಕು. ಇಲ್ಲದಿದ್ದರೆ ಅನುಭವಿಗಳ, ಸುತ್ತಮುತ್ತಲಿನ ಗ್ರಾಮಸ್ಥರ ಸಹಾಯ ಪಡೆಯಬೇಕು.ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕಾಡು ಕುಗ್ಗುತ್ತಿದೆ. ಪ್ರಾಣಿಗಳ ಓಡಾಟ, ಏಕಾಂತ, ಆಹಾರ ವಿಹಾರಕ್ಕೆ ಭಂಗ ಬರುತ್ತಿದೆ. ಹೀಗಾಗಿಯೇ ಅವು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಇದೆಲ್ಲದರ ಅರಿವು ಇರಬೇಕು. ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ತಪ್ಪಲ್ಲ.

 

ಅದು ಕೊಡುವ ಖುಷಿ, ಜ್ಞಾನ, ಅನುಭವ ಸಾಟಿಯಿಲ್ಲದ್ದು. ಆದರೆ ನಿರ್ಲಕ್ಷ್ಯ ಸರಿಯಲ್ಲ. ಏಕೆಂದರೆ ಮುಂದೆ ಮತ್ತೆ ಅಂಥದೇ ಚಟುವಟಿಕೆ ಕೈಗೊಳ್ಳಲು ಬದುಕಿರಬೇಕಾದುದು ಅಷ್ಟೇ ಮುಖ್ಯ ಎನ್ನುವ ಪ್ರಜ್ಞೆ ಬೇಕು. ಅದು ಮನಸ್ಸಿನ ಒಳಗಿನಿಂದಲೇ ಮೂಡಿ ಬರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry