ಮಂಗಳವಾರ, ಮೇ 18, 2021
30 °C

ದೂರದೃಷ್ಟಿಯ ಮೇಯರ್ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ನೂತನ ಮೇಯರ್ ಆಯ್ಕೆಗೆ ದಿನಗಣನೆ ಆರಂಭವಾಗಿದೆ. ಈ ತಿಂಗಳ 23ಕ್ಕೆ ಹಾಲಿ ಮೇಯರ್ ಪಿ. ಶಾರದಮ್ಮ ಅಧಿಕಾರಾವಧಿ ಕೊನೆಗೊಳ್ಳಲಿದ್ದು, 26ರಂದು ನೂತನ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಮೂರನೇ ಅವಧಿಯ ಮೇಯರ್ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಮೊದಲ ಅವಧಿಗೆ ಎಸ್.ಕೆ. ನಟರಾಜ್ ಹಾಗೂ ಎರಡನೇ ಅವಧಿಗೆ ಪಿ. ಶಾರದಮ್ಮ ಮೇಯರ್ ಆಗಿದ್ದಾರೆ. ಇದೀಗ ಮೂರನೇ ಅವಧಿಯ ಮೇಯರ್ ಆಯ್ಕೆಗೆ ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆದಿವೆ. ಹೊಸ ಮೇಯರ್ ಯಾರಾಗಬಹುದು ಎಂಬ ಕುತೂಹಲ ನಗರದ ನಾಗರಿಕರಲ್ಲಿ ಮೂಡಿದೆ. ಹಾಗೆಯೇ, ಹೊಸ ಮೇಯರ್ ಬಗ್ಗೆ ಜನರಲ್ಲಿ ಬಹಳಷ್ಟು ನಿರೀಕ್ಷೆಗಳಿವೆ.

ಆದರೆ, ಹೊಸದಾಗಿ ಆಯ್ಕೆಯಾಗಲಿರುವ ಮೇಯರ್ ಹೇಗಿರಬೇಕೆಂಬ ಕುರಿತು ನಗರದ ಬೆಳವಣಿಗೆ ಬಗ್ಗೆ ಕಾಳಜಿ ಇರುವ ಮುಖಂಡರು ಹಾಗೂ ತಜ್ಞರು ವ್ಯಕ್ತಪಡಿಸಿರುವ ಅನಿಸಿಕೆಗಳ ಸಾರ ಇಲ್ಲಿದೆ.ಹೊಸ ಮೇಯರ್ ಅಧಿಕಾರ ಅವಧಿ ಕೇವಲ ಒಂದು ವರ್ಷವಾಗಿದ್ದರೂ ನಗರದ ಸಮಗ್ರ ಅಭಿವೃದ್ಧಿ ಬಗ್ಗೆ ಅವರಿಗೆ ಮುಂದಿನ 15ರಿಂದ 25 ವರ್ಷಗಳ ದೂರದೃಷ್ಟಿ ಇರಬೇಕು. ಏಕೆಂದರೆ, ಬೆಂಗಳೂರು ಐಐಎಸ್‌ಸಿ, ಐಐಎಂ, ನ್ಯಾಷನಲ್ ಲಾ ಸ್ಕೂಲ್ ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿ. ನಗರವು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವಾಗಿಯೂ ಬೆಳೆದಿದೆ. ಸಾಕಷ್ಟು ಡಿಆರ್‌ಡಿಒ ಪ್ರಯೋಗಾಲಯಗಳು, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು, ಉನ್ನತ ತಂತ್ರಜ್ಞಾನ ಕೈಗಾರಿಕೆಗಳು ಕೂಡ ಬೆಂಗಳೂರಿನಲ್ಲಿವೆ.ಜಾಗತಿಕ ಮಟ್ಟದಲ್ಲಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿಯೂ ಗಮನಸೆಳೆದಿರುವ ನಗರದಲ್ಲಿ ಸಾಕಷ್ಟು ಐಟಿ ಕಂಪೆನಿಗಳಿವೆ. ಬೆಂಗಳೂರಿನ ಬೆಳವಣಿಗೆಗೆ ಈ ಕೇಂದ್ರಗಳಿಂದ ಜ್ಞಾನ, ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನ ಲಭ್ಯವಾಗಲಿದೆ. ಭವಿಷ್ಯದ ಬೆಂಗಳೂರಿನ ಅಭಿವೃದ್ಧಿಗೆ ಹೊಸ ಮೇಯರ್ ಈ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ.ನಗರದ ಸುಸ್ಥಿರ ಬೆಳವಣಿಗೆಯನ್ನು ಹೊಸ ಮೇಯರ್ ಸವಾಲಾಗಿ ಸ್ವೀಕರಿಸುವ ಮೂಲಕ ಯೋಜನಾಬದ್ಧ ಕಾರ್ಯಕ್ರಮಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿರಬೇಕು. ಅಲ್ಲದೆ, ಅಕ್ರಮ ಕಟ್ಟಡ, ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಗೂ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಪ್ರಮುಖವಾಗಿ ನಗರದ ಜನರಿಗೆ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ನಡೆಸಬೇಕು. ಕಸ ವಿಲೇವಾರಿಗೂ ಆದ್ಯತೆ ನೀಡಬೇಕು. ಕಸದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಕೂಡ ಸಫಲವಾಗಿಲ್ಲ. ಈ ಬಗ್ಗೆ ಮೇಯರ್ ಆದ್ಯತೆ ನೀಡುವ ಮೂಲಕ ಸಮರ್ಪಕ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.ನಗರದ ಎಲ್ಲ ಕಡೆಗಳಲ್ಲಿ ತಾರತಮ್ಯ ಮಾಡದೆ ಒಳ್ಳೆಯ ರಸ್ತೆ, ವಿದ್ಯುದ್ದೀಪ, ಸಾರ್ವಜನಿಕರು ನೆಮ್ಮದಿಯಿಂದ ವಾಸಿಸುವ ವಾತಾವರಣ ಹಾಗೂ ಹಸಿರು ಉಳಿಸುವುದಕ್ಕೆ ಗಮನಹರಿಸಬೇಕಾಗಿದೆ. ಶಿಕ್ಷಣ ಹಾಗೂ ಉದ್ಯೋಗಾವಕಾಶ ಒದಗಿಸುವುದಕ್ಕೆ ಹೊಸ ಮೇಯರ್ ವಿಶೇಷ ಆಸಕ್ತಿ ವಹಿಸಬೇಕು.ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಶಿಕ್ಷಣ ಒದಗಿಸುವುದರ ಜತೆಗೆ ಅದರ ಗುಣಮಟ್ಟಕ್ಕೂ ಆದ್ಯತೆ ನೀಡಬೇಕು. ಆಡಳಿತಕ್ಕೆ ಒತ್ತು ನೀಡುವುದರ ಜತೆಗೆ, ಬೆಂಗಳೂರಿನ ಸಂಸ್ಕೃತಿ, ಸಂಪ್ರದಾಯಗಳನ್ನು ಸಂರಕ್ಷಿಸಲು ಹೊಸ ಮೇಯರ್ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಅಭಿವೃದ್ಧಿ ಕಾಳಜಿ ಹೊಂದಿರುವ ಕೆಲ ಮುಖಂಡರು ಹೇಳುತ್ತಾರೆ.ವಾಯು/ ಶಬ್ದಮಾಲಿನ್ಯ, ಬೀದಿ ನಾಯಿಗಳ ಹಾವಳಿ, ಆರ್ಥಿಕ ಅವ್ಯವಹಾರ, ಭೂ ಮಾಫಿಯಾ ಕೃತ್ಯಗಳಿಗೂ ಕಡಿವಾಣ ಹಾಕಬೇಕು. ಒಟ್ಟಾರೆ ಹೊಸ ಮೇಯರ್ ತಮ್ಮ ಆಡಳಿತದ ಅವಧಿಯಲ್ಲಿ ಆಡಳಿತ ಸುಧಾರಣೆ ಹಾಗೂ ನಗರದ ಬೆಳವಣಿಗೆ ದೃಷ್ಟಿಯಿಂದ ತಂಡದ ಸ್ಫೂರ್ತಿಯನ್ನಿಟ್ಟುಕೊಂಡು ಕೆಲಸ ಮಾಡಬೇಕು.ಇತ್ತೀಚಿನ ವರ್ಷಗಳಲ್ಲಿ ಪಾಲಿಕೆ ಹಗರಣಗಳಿಗೂ ಹೆಸರುವಾಸಿಯಾಗಿದೆ. ಕೆದಕಿದಷ್ಟೂ ಹಗರಣಗಳು ಬೆಳಕಿಗೆ ಬರುತ್ತಿವೆ. ಇಡೀ ಪಾಲಿಕೆಯ ಹಣಕಾಸು ವ್ಯವಸ್ಥೆ, ಲೆಕ್ಕಪತ್ರ ವ್ಯವಹಾರಗಳ ಮೇಲೆ ಸರಿಯಾಗಿ ನಿಗಾ ವಹಿಸಲು ಇನ್ನೂ ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರಲು ಹೊಸ ಮೇಯರ್ ಕಟಿ ಬದ್ಧರಾಗಬೇಕಾಗಿದೆ ಎಂಬುದು ಈ ಮುಖಂಡರ ಅಭಿಮತ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.