ದೂರದ ಬೆಟ್ಟವ ಹತ್ತಿಳಿದು...

7

ದೂರದ ಬೆಟ್ಟವ ಹತ್ತಿಳಿದು...

Published:
Updated:

ಕೋಲಾರ ಜಿಲ್ಲೆ ಎಂದೊಡನೆ ಚಿನ್ನದ ಗಣಿಯ ಹೊರತು ಕಣ್ಮುಂದೆ ಸುಳಿಯುವ ಬೇರೆ ಜನಪ್ರಿಯ ಚಿತ್ರಗಳಿಲ್ಲ. ಈ ಜಿಲ್ಲೆಯ ಪರಿಸರದೊಳಗೆ ಚಾರಣಕ್ಕೆ ಹೇಳಿ ಮಾಡಿಸಿದಂತಹ ಅನೇಕ ಸ್ಥಳಗಳಿರುವುದು ಹೆಚ್ಚು ಜನರಿಗೆ ತಿಳಿದಿಲ್ಲ.ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ಸೀತಿ ಬೆಟ್ಟ ಎಲ್ಲರಿಗೂ ಗೊತ್ತು. ಸಲೀಸು ಮೆಟ್ಟಿಲುಗಳನ್ನು ಅಳವಡಿಸಿರುವ ಈ ಬೆಟ್ಟ ಹತ್ತಿ ಭೈರವೇಶ್ವರನಿಗೆ ಕೈ ಮುಗಿಯುವುದೂ ಅಷ್ಟೇ ಸಲೀಸು. ಆದರೆ ಅದೇ ಬೆಟ್ಟದ ಎದುರು ನಿಂತ ಚೆಂಜಿಮಲೆ ಬೆಟ್ಟವನ್ನು ಏರುವುದು ಅಷ್ಟು ಸುಲಭವಲ್ಲ. ಕಿರು ಕಾಡು ಮತ್ತು ಕಡಿದಾದ ಬೆಟ್ಟದ ಲಕ್ಷಣಗಳನ್ನು ಹೊಂದಿರುವ ಚೆಂಚಿಮಲೆ ಬೆಟ್ಟವನ್ನು ಏರುವುದು ಕಷ್ಟ. ಸೀತಿ ಬೆಟ್ಟ ಭಕ್ತರಿಗೆ, ಚೆಂಜಿಮಲೆ ಬೆಟ್ಟ ಸಾಹಸಿಗಳಿಗೆ!ಕೋಲಾರ ಜಿಲ್ಲೆಯಲ್ಲಿ ಭಕ್ತರಿಗೆಂದೇ ಬೆಟ್ಟದೇವರುಗಳು ಇರುವಂತೆ, ಬೆಟ್ಟ-ಗುಡ್ಡಗಳನ್ನು ಹತ್ತುವುದರಲ್ಲಿ ಖುಷಿಪಡುವವರಿಗೂ ಬೆಟ್ಟ ದೇವರುಗಳಿವೆ.ಗುಡಿಗಳಿರುವ ಬೆಟ್ಟಗಳಿಗೆ ಮೆಟ್ಟಿಲುಗಳಿವೆ. ಗುಡಿಗಳಿಲ್ಲದ ಬೆಟ್ಟಗಳಿಗೆ ಹತ್ತುವವರೇ ಮೆಟ್ಟಿಲುಗಳನ್ನು ಮಾಡಬೇಕು. ಜಿಲ್ಲೆಯ ಹಲವು ಬೆಟ್ಟಗಳ ಒಡಲಾಳ ಹತ್ತುವ ಸಾಹಸಿ ಭಕ್ತರಿಗಾಗಿ ಕಾಯುತ್ತಿದೆ. ಹತ್ತುವವರ ಪಾದ ಸ್ಪರ್ಶಕ್ಕಾಗಿ ಬೆಟ್ಟಗಳ ಸಮಸ್ತ ಕಲ್ಲುಗಳು ಕಾಯುತ್ತಿವೆ!ಬರಗಾಲಪೀಡಿತ ಕೋಲಾರ ಶತಶೃಂಗ ಶ್ರೇಣಿಗೆ ಖ್ಯಾತಿ. ಜಿಲ್ಲಾಕೇಂದ್ರದಲ್ಲಿ ಅಂತರಗಂಗೆ ಬೆಟ್ಟಸಾಲು, ಕೋಲಾರ, ಮಾಲೂರು, ಮುಳಬಾಗಲು ತಾಲ್ಲೂಕಿನ ಹಲವೆಡೆ ಬೆಟ್ಟ ಸಾಲುಗಳು ಕಣ್ಮನ ಸೆಳೆಯುತ್ತವೆ. ಪುಟಿದೇಳುವ ಉತ್ಸಾಹ ಮತ್ತು ಶಕ್ತಿ ಇರುವವರಿಗೆ, ಬೆಟ್ಟ ಹತ್ತುವುದನ್ನು ಕ್ರೀಡೆ ಎಂಬಂತೆ ಹವ್ಯಾಸ ಮಾಡಿಕೊಂಡವರಿಗೆ ಕೋಲಾರದ ಬೆಟ್ಟ ಸಾಲು, ಬಂಡೆಗಳ ರಾಶಿ ಸಾಹಸ ಚಾರಣಕ್ಕೂ ಪ್ರಚೋದನೆ ನೀಡುತ್ತದೆ.ನಡೆದಷ್ಟೂ ದಾರಿ ದೂರ ಎಂದೇನಿಲ್ಲ. ಹತ್ತುತ್ತಾ ಏರಿದಷ್ಟೂ ತುದಿ ಹತ್ತಿರವಾಗುತ್ತದೆ. ಯಾವುದೇ ಬೆಟ್ಟದ ಮೇಲೆ ನಿಂತರೂ ದೇವಲೋಕಕ್ಕೆ ಹತ್ತಿರದಲ್ಲಿದ್ದೀರಿ ಎಂದು ಹೇಳುವಂತೆ ನೀಲಾಗಸದಲ್ಲಿ ಬಿಳಿ ಮೋಡಗಳು ತಲೆಯನ್ನು ಸವರಿಕೊಂಡೇ ಮುಂದೆ ಸಾಗುತ್ತವೆ! ತುದಿ ಮುಟ್ಟುವವರೆಗೂ ದಾರಿಯುದ್ದಕ್ಕೂ ಅಪರೂಪದ ಸಸ್ಯ-ಪ್ರಾಣಿ-ಪಕ್ಷಿ ಪ್ರಬೇಧಗಳು ನಿಮ್ಮ ಕಣ್ಣಿಗೆ ಬೀಳಬಹುದು. ಬಿದ್ದ ಕೂಡಲೇ ಮಾಯವಾಗಲೂಬಹುದು.

 

ಕೆಂದಟ್ಟಿ ಬೆಟ್ಟದಿಂದ...

ಬೆಂಗಳೂರು-ಕೋಲಾರದ ಮಾರ್ಗದಲ್ಲಿ ಸಿಗುವ ನರಸಾಪುರದ ಬಳಿ ಇರುವ ಕುರ್ಕಿಯ ಬೆಟ್ಟದಿಂದ ಶುರುಮಾಡಿ ಕೋಲಾರದ ಅಂತರಗಂಗೆವರೆಗಿನ ಎಲ್ಲ ಬೆಟ್ಟ ಸಾಲುಗಳನ್ನೂ ಹತ್ತಿ ಇಳಿಯಬಹುದು. ಕುರ್ಕಿ ಸಮೀಪದ ಕೆಂದಟ್ಟಿ ಬಳಿ ಹೋಗಿ ಬೆಳಿಗ್ಗೆ 8ಕ್ಕೆ ಚಾರಣವನ್ನು ಶುರು ಮಾಡಿದರೆ ಕಾಲ್ನಡಿಗೆಯಲ್ಲೇ ಕೋಲಾರದ ಅಂತರಗಂಗೆಯಿಂದ ಸಂಜೆ ವೇಳೆಗೆ ಇಳಿಯುತ್ತಿದ್ದೆವು. ಪ್ರತಿಯೊಬ್ಬರ ಬೆನ್ನಿಗೆ ಬುತ್ತಿ ಇರುತ್ತಿತ್ತು ಎಂದು ಸ್ಮರಿಸುತ್ತಾರೆ ವಿಮರ್ಶಕ ಮತ್ತು ಸಾಹಸ ಚಾರಣಿಗ ಚಂದ್ರಶೇಖರ ನಂಗಲಿ.

ಅದೊಂದು ಬೆಟ್ಟಗಳನ್ನು ಇಡೀ ದಿನ ನಿರಂತರ ಹತ್ತಿ ಇಳಿಯುವ ಅಪರೂಪದ ಚಾರಣ. ಕೆಂದಟ್ಟಿಯಿಂದ ಶುರುವಾಗುವ ಚಾರಣ ಯಾನ ಕೊನೆಗೊಳ್ಳುವುದು ಕೋಲಾರದ ನಗರಕ್ಕೆ ಹತ್ತಿರದಲ್ಲಿರುವ ತೇರಳ್ಳಿ ಬೆಟ್ಟ ಸಾಲಿನಲ್ಲಿರುವ ಬೆಟ್ಟ ಹೊಸಳ್ಳಿಯಲ್ಲಿ. ಅದೊಂದು ಅದ್ಭುತ ಅನುಭವ. ಅಲ್ಲಿಂದ ಮುಂದಕ್ಕೆ ಇಳಿಯುವಾಟ. ಅಂತರಗಂಗೆ ಕಡೆಗೆ ನಡೆದಾದರೂ ಇಳಿಯಬಹುದು. ತೇರಳ್ಳಿ ಮೂಲಕವೂ ಇಳಿಯಬಹುದು. ಅಲ್ಲಿಗೆ, ನರಸಾಪುರದಿಂದ ಕೋಲಾರದವರೆಗೆ ಸರಿಸುಮಾರು 16 ಕಿಮೀ ನಡಿಗೆ ಮುಕ್ತಾಯವಾದಂತೆ!ಕೋಲಾರದ ನಂಗಲಿ, ಸೋಮಶೇಖರಗೌಡ, ಲಕ್ಷ್ಮಿಪತಿ ಕೋಲಾರ ಸೇರಿದಂತೆ ಹಲವು ಗೆಳೆಯರು ಈ ‘ಬೆಟ್ಟದ ಜೀವ’ದ ಜೊತೆಗೆ ಏರ್ಪಡಿಸಿಕೊಂಡ ಚಾರಣ ಸಂವಾದದ ಫಲವಾಗಿಯೇ (ಅಂತರಗಂಗೋತ್ರಿ ಅಡ್ವೆಂಚರ್ ಅಂಡ್ ನೇಚರ್ ಅವೇರ್‌ನೆಸ್ ಗ್ರೂಪ್) ‘ಅಘನಾಗ್’ ಎಂಬ ಸಂಚಾರಿ ಸಂಸ್ಥೆಯೊಂದು ಹಲವು ವರ್ಷಗಳ ಹಿಂದೆ ರೂಪುಗೊಂಡಿದ್ದು ವಿಶೇಷ. ಅಘ ಎಂದರೆ ಬೆಟ್ಟ. ನಾಗ ಎಂದರೆ ಸರ್ಪ. ತೇರಳ್ಳಿ ಬಳಿ ಸರ್ಪವನ್ನು ಹೋಲುವ ಬಂಡೆಯೊಂದು ಇದೆ. ಅದನ್ನು ಸ್ಥಳೀಯರು ಪೆಡಗ್ಗುಂಡು ಎಂದು ಕರೆಯುತ್ತಾರೆ. ಪೆಡೆ ಎಂದರೆ ಹೆಡೆ. ಗುಂಡು ಎಂದರೆ ಕಲ್ಲು. ಹೀಗಾಗಿ ಅದನ್ನು ಹೆಡೆಕಲ್ಲು ಎನ್ನಬಹುದು.

ಗುಹೆಯ ದಾರಿ...

ಪಾಂಡವರ ಕರ್ಮಭೂಮಿಯಾಗಿತ್ತು ಎಂಬ ಐತಿಹ್ಯವುಳ್ಳ ಅಂತರಗಂಗೆಯ ಬೆಟ್ಟ ಸಾಲಿನಲ್ಲಿ ಭೀಮನ ಗುಹೆಯೂ ಇದೆ. ವನವಾಸದ ಸಂದರ್ಭದಲ್ಲಿ ಭೀಮ ಆ ಗುಹೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ಎನ್ನಲಾಗುತ್ತದೆ. ಆ ಗುಹೆಯವರೆಗೂ ಹೇಗೋ ಸಾಹಸ ಮಾಡಿ ಹೋಗಬಹುದು. ಆದರೆ ಆ ಗುಹೆಯೊಳಗೆ ಹೋಗಬೇಕೆಂದರೆ ಅದು ಸಾಹಸವಷ್ಟೇ ಅಲ್ಲ. ದುರ್ಬಲ ಹೃದಯವರಿಗೆ ಪ್ರತಿ ಹೆಜ್ಜೆಯೂ ಜೀವನ್ಮರಣದ ಪ್ರಶ್ನೆಯಾಗಿ ಕಾಣುವ ಸನ್ನಿವೇಶ ಅದು. ಹೀಗಾಗಿಯೇ ಬಹಳ ಮಂದಿ ಗುಹೆಯವರೆಗೂ ಹೋಗಿ ವಾಪಸು ಬರುವುದೇ ಹೆಚ್ಚು. ಅಷ್ಟೇ ಏಕೆ, ಅರಾಭಿಕೊತ್ತನೂರು, ಮಂಗಸಂದ್ರ, ಕೆಂದಟ್ಟಿ, ಹೊಸದುರ್ಗ ಸೇರಿದಂತೆ ಹಲವು ಬೆಟ್ಟಗಳ ಬಳಿ ಚಿರತೆಯ ಕಾವಲೂ ಇದೆ. ಬೆಟ್ಟದಿಂದ ರಾತ್ರಿ ವೇಳೆ ಇಳಿದು ಬರುವ ಚಿರತೆಗಳು ತಪ್ಪಲ ಹಳ್ಳಿಗಳ ಹಟ್ಟಿಗಳಲ್ಲಿರುವ ಜಾನುವಾರುಗಳನ್ನು ಕಚ್ಚಿ ಕದ್ದೊಯ್ದ ನಿದರ್ಶನಗಳೂ ಇವೆ. ಆದರೆ ಹಗಲಲ್ಲಿ ಚಾರಣಿಗರಿಗೆ ಅವು ಕಾಣಿಸಿಕೊಂಡ ನಿದರ್ಶನಗಳಿಲ್ಲ. 

ಇವು ಬೆಟ್ಟ ಚಾರಣದ ಕೆಲವು ನಿದರ್ಶನಗಳಷ್ಟೇ, ನಡೆಯುವವರ ಎದುರಿಗೆ ಬೆಟ್ಟಸಾಲುಗಳು ತಮಗೆ ಬೇಕಾದಂತೆ, ಅನೂಹ್ಯ ರೀತಿಯಲ್ಲಿ ತೆರೆದುಕೊಳ್ಳುತ್ತವೆ. ಒಂದೊಂದೊ ಬೆಟ್ಟ ಹತ್ತಿಳಿಯುವುದೂ ಆಟವಾಗುತ್ತದೆ. ಏರುಪೇರಿನ ಜೀವನಕ್ಕೂ ಇದು ಸಂಕೇತವಾಗುತ್ತದೆ.

ಹಸಿರು ವಿಮರ್ಶೆ

ಬೇಸರ ಕಳೆಯಲು ಕೋಲಾರದಲ್ಲಿ ಎಲ್ಲೂ ಸ್ಥಳಗಳೇ ಇಲ್ಲ ಎನ್ನುವವರಿಗೆ ಇದಕ್ಕಿಂತಲೂ ಅತ್ಯುತ್ತಮ ಸ್ಥಳಗಳು ಬೇಕೆ? ಇಂಥದೊಂದು ಪ್ರಶ್ನೆ ಈ ಬೆಟ್ಟಗಳಲ್ಲಿ ಓಡಾಡಿದ ಪ್ರಕೃತಿಪ್ರಿಯ ಸಾಹಸಿ ಚಾರಣಿಗರು ಕೇಳದೇ ಇರರು. ಇನ್ನೂ ವಿಶೇಷ ಎಂದರೆ, ಕೋಲಾರದ ಈ ಬೆಟ್ಟಗುಡ್ಡಗಳ ಗಡ್ಡ ಹಿಡಿದು ನಡೆದಾಡಿದ ಪರಿಣಾಮವಾಗಿಯೇ ಚಂದ್ರಶೇಖರ ನಂಗಲಿ ಅವರು ಕನ್ನಡದಲ್ಲಿ ‘ಹಸಿರು ವಿಮರ್ಶೆಯ’ ಹೊಸ ಮಾದರಿಯನ್ನು ರೂಪಿಸಿಕೊಟ್ಟರು.ಕನ್ನಡದ ಅಧ್ಯಾಪಕ ಕಂ ವಿಮರ್ಶಕರೊಬ್ಬರು ಕನ್ನಡ ಸಾಹಿತ್ಯ ಕೃತಿಗಳ ‘ಹಸಿರು ವಿಮರ್ಶೆ’ಯ ಜೊತೆಗೆ ಸ್ಥಳೀಯ ಪ್ರಕೃತಿ, ಅನನ್ಯತೆ, ಜೀವ ಸರಪಳಿಯನ್ನು ಕುರಿತ ಲೇಖನಗಳನ್ನೂ ಬರೆಯಲು ಅವಕಾಶವಿದೆ ಎಂದು ಕನ್ನಡಕ್ಕೆ ತೋರಿಸಿಕೊಟ್ಟವರು ನಂಗಲಿ. ಅದು ಸಾಧ್ಯವಾಗಿದ್ದು ಬೆಟ್ಟ-ಗುಡ್ಡಗಳ ಸಾಂಗತ್ಯದಿಂದ.ಸಾಹಸ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿರುವ ಕೋಲಾರದ ಭೌಗೋಳಿಕ ಪರಿಸರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾತ್ರ ಇನ್ನೂ ಆಗಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಕ್ರೀಡಾಪಟುವಿನ ಮನಃಸ್ಥಿತಿಯನ್ನು ಕಡ್ಡಾಯವಾಗಿ ಬಯಸುವ ಬೆಟ್ಟ ಚಾರಣದ ಬಗ್ಗೆ ಸ್ಥಳೀಯ ಯುವಜನರೂ ಹೆಚ್ಚು ಆಸಕ್ತಿ ವಹಿಸಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ಸದ್ದಿಲ್ಲದೆ ಕೆಲವು ವಿದೇಶಿ ಪ್ರವಾಸಿಗರು ಇದೇ ಬೆಟ್ಟಗಳಿಗೆ ಭೇಟಿ ನೀಡಿ ಹೋಗಿದ್ದಾರೆ ಎಂಬುದು ಬಹುತೇಕರಿಗೆ ಇನ್ನೂ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry