ಸೋಮವಾರ, ಜೂನ್ 21, 2021
29 °C

ದೂರವಾಣಿ ಕದ್ದಾಲಿಕೆ: ಅಧಿಕಾರಿಗಳೇ ಎಚ್ಚರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನೀತಿ ಸಂಹಿತೆ ಜಾರಿ­ಯಲ್ಲಿರುವು­ದರಿಂದ ಅಧಿಕಾರಿಗಳು ರಾಜಕಾರಣಿಗಳೊಂದಿಗೆ ಅಂತರ ಕಾಯ್ದು­ಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್‌.­ಸತ್ಯಮೂರ್ತಿ ಸೂಚಿಸಿದರು.ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಚುನಾವಣಾಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಚುನಾವಣೆ ಹಿನ್ನೆಲೆಯಲ್ಲಿ ಫೋನ್‌ ಟ್ಯಾಪ್‌ (ದೂರ­ವಾಣಿ ಕದ್ದಾಲಿಕೆ) ಮಾಡಲಾಗುತ್ತಿದೆ. ಅಧಿ­ಕಾರಿಗಳು ಶಾಸಕರು, ಮಂತ್ರಿಗಳೊಂದಿಗೆ ಮಾತನಾಡು­ವಾಗ ಎಚ್ಚರಿಕೆ ಇರಲಿ. ಚೆನ್ನಪಟ್ಟಣದಲ್ಲಿ ನಡೆದಂತೆ ಜಿಲ್ಲೆಯಲ್ಲೂ ನಡೆಯುವುದು ಬೇಡ’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಖಾಸಗಿ, ಸಾರ್ವಜನಿಕ ಸ್ಥಳಗಳಲ್ಲಿರುವ ರಾಜಕೀಯ ಪಕ್ಷಗಳ ಬಂಟಿಗ್ಸ್‌, ಬ್ಯಾನರ್‌ ತೆರವುಗೊಳಿಸುವಾಗ ಕಡ್ಡಾಯವಾಗಿ ವಿಡಿಯೊಗ್ರಾಫರ್‌ಗಳನ್ನು ಕರೆದು­ಕೊಂಡು ಹೋಗಬೇಕು ಎಂದು ಸೂಚಿಸಿದರು.ಸ್ಥಳೀಯ ಸಂಸ್ಥೆಗಳು ರಾಜಕೀಯ ಪಕ್ಷಗಳ ಸಮಾ­ವೇಶಗಳಿಗೆ ಅನುಮತಿ ನೀಡುವಾಗ ಎಲ್ಲ­ರಿಗೂ ಅವ­ಕಾಶ ನೀಡಬೇಕು. ಮೊದಲು ಯಾರು ಅರ್ಜಿ ನೀಡು­ತ್ತಾರೋ ಅವ­ರಿಗೆ ಅನುಮತಿ ನೀಡಬೇಕು. ಆಡಳಿತ ಪಕ್ಷ, ರಾಜಕಾರಣಿಗಳ ಪ್ರಭಾವಕ್ಕೆ ಒಳ­ಗಾಗದೆ ಇತರ ಪಕ್ಷದವರು ಹಾಗೂ ಪಕ್ಷೇತರ ಅಭ್ಯರ್ಥಿ ಸಮಾ­ವೇಶ ನಡೆಸಲು ಅನುವು ಮಾಡಿ­ಕೊಡಬೇಕು ಎಂದರು.ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿರುವವರಿಗೆ ಮತ­ಗಟ್ಟೆ ಅಧಿಕಾರಿ, ಕಂದಾಯ ಅಧಿಕಾರಿಗಳೇ ಚುನಾ­ವಣಾ ಗುರುತಿನ ಪತ್ರ ವಿತರಿಸಬೇಕು, ಯಾವುದೇ ಕಾರಣಕ್ಕೂ ಬೇರೆಯವರ ಮೂಲಕ ಗುರುತಿನ ಪತ್ರ ನೀಡ­ಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜಿಲ್ಲೆಯ ವಿವಿಧ ಇಲಾಖೆಗಳಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ಗೋವಿಂದರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ ಗುಪ್ತ, ನಗರಪಾಲಿಕೆ ಆಯುಕ್ತ ಅಶಾದ್‌ ಷರೀಫ್‌ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.