ಗುರುವಾರ , ಆಗಸ್ಟ್ 13, 2020
26 °C
ಮೊಬೈಲ್ ಮಾತು

ದೂರವಾಣಿ ಗ್ರಾಹಕ ಸಂಖ್ಯೆ 10 ಲಕ್ಷ ಇಳಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರವಾಣಿ ಗ್ರಾಹಕ ಸಂಖ್ಯೆ 10 ಲಕ್ಷ ಇಳಿಕೆ!

ಮೊಬೈಲ್ ಫೋನ್ ಎಂಬುದು ಜನಜೀವನದ ಅವಿಭಾಜ್ಯ ಅಂಗವೇ ಆಗಿ ವರ್ಷಗಳೇ ಕಳೆದಿವೆ. ರಾತ್ರಿ ಮಲಗುವ ಮುನ್ನ ಕಡೆಯದಾಗಿ ಮೊಬೈಲ್ ಪರೀಕ್ಷಿಸಿಯೇ ನಿದ್ರೆಗೆ ಜಾರುವ, ಬೆಳಿಗ್ಗೆ ಏಳುತ್ತಿದ್ದಂತೆಯೇ ಕಣ್ಣು ಬಿಡುವುದಕ್ಕೂ ಮುನ್ನ ತಲೆದಿಂಬಿನ ಮಗ್ಗುಲಲ್ಲಿ ಕೈಯಳತೆಯಲ್ಲೇ ಇರುವ ಮೊಬೈಲ್ ಫೋನ್ ಮುಟ್ಟಿದರೇನೇ ಬೆಳಗಾಯಿತು ಎಂಬಂತಹ ಭಾವ.ಮನೆಯೊಳಗೆ, ದಾರಿಯಲ್ಲಿ, ಕಾರು, ಬೈಕ್ ಚಾಲನೆ ವೇಳೆ, ಕಚೇರಿಯಲ್ಲಿ, ಷಾಪಿಂಗ್ ಮಾಲ್, ಸಿನಿಮಾ ಮಂದಿರ, ಉದ್ಯಾನ, ಕಾಲೇಜು, ಎಲ್ಲೆಲ್ಲೂ ಮೊಬೈಲ್ ಫೋನ್ ಕಿವಿಗೆ ಹಚ್ಚಿದವರು, ಇಲ್ಲವೆ ಸ್ಮಾರ್ಟ್‌ಫೋನ್‌ನಲ್ಲಿ ಗೋಗಲ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಮುಳುಗಿದವರು ಕಣ್ಣಿಗೆ ಬೀಳುತ್ತಲೇ ಇರುತ್ತಾರೆ.ಇಡೀ ಜಗತ್ತನ್ನೇ ಮೊಬೈಲ್ ಫೋನ್ ಆವರಿಸಿಕೊಂಡಿದೆ,ಸ್ಮಾರ್ಟ್‌ಫೋನ್ ಎಂಬ ಪುಟ್ಟ ಯಂತ್ರ ಇಡೀ ವಿಶ್ವವನ್ನೇ ಆಳುತ್ತಿದೆಯೇನೋ ಎಂಬ ಭ್ರಮೆ ಹುಟ್ಟಿಸುವ ಸನ್ನಿವೇಶ. ಹೀಗಿರುವಾಗ, ಭಾರತದಲ್ಲಿ ಮಾತ್ರ ಏಪ್ರಿಲ್‌ನಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 2 ಲಕ್ಷದಷ್ಟು ಕಡಿಮೆ ಆಗಿದೆ. ಒಟ್ಟಾರೆ ದೂರವಾಣಿ ಗ್ರಾಹಕರ ಸಂಖ್ಯೆಯಂತೂ 10 ಲಕ್ಷದಷ್ಟು ಇಳಿಮುಖವಾಗಿದೆ!ಮಾರ್ಚ್ 31ರಂದು 86.78 ಕೋಟಿಯಷ್ಟಿದ್ದ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಏಪ್ರಿಲ್ 30ರ ವೇಳೆಗೆ 86.70 ಕೋಟಿಗೆ ಇಳಿಕೆಯಾಗಿದೆ!ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಎಸ್‌ಎನ್‌ಎಲ್ 22.36 ಲಕ್ಷ, ಎಂಟಿಎಸ್ ಇಂಡಿಯಾ (ಸಿಸ್ಟೆಮಾ ಶ್ಯಾಮ್) 18.96 ಲಕ್ಷ ಮತ್ತು ಟಾಟಾ  ಟೆಲಿಸರ್ವಿಸಸ್ 7.84 ಲಕ್ಷ, ಎಂಟಿಎಂಎಲ್ 1 ಲಕ್ಷ, ಲೂಪ್ ಮೊಬೈಲ್ 83,263 ಗ್ರಾಹಕರನ್ನು ಕಳೆದುಕೊಂಡಿವೆ.ವೊಡಾಫೋನ್ 14.22 ಲಕ್ಷ, ಐಡಿಯಾ ಸೆಲ್ಯುಲರ್ 12.84 ಲಕ್ಷ, ರಿಲಯನ್ಸ್ ಕಮ್ಯುನಿಕೇಷನ್ಸ್ 7.25 ಲಕ್ಷ, ಭಾರ್ತಿ ಏರ್‌ಟೆಲ್ 6 ಲಕ್ಷ, ಯೂನಿನಾರ್ 1.6 ಲಕ್ಷ, ವಿಡಿಯೊಕಾನ್ 1.3 ಲಕ್ಷ, ಏರ್‌ಸೆಲ್ 8,249 ಹೊಸ ಚಂದಾದಾರರನ್ನು ಪಡೆದುಕೊಂಡಿವೆ.ಇದೇ ವೇಳೆ, 20 ಲಕ್ಷಕ್ಕೂ ಅಧಿಕ ಮಂದಿ ಮೊಬೈಲ್ ಫೋನ್ ಬಳಕೆದಾರರು `ಮೊಬೈಲ್ ನಂಬರ್ ಪೋರ್ಟಬಲಿಟಿ'(ಎಂಎನ್‌ಪಿ) ಮೂಲಕ ತಮ್ಮ ದೂರವಾಣಿ ಸೇವಾ ಸಂಸ್ಥೆಗಳನ್ನು ಬದಲಿಸಿಕೊಂಡಿದ್ದಾರೆ.ಮೊಬೈಲ್ ಮತ್ತು ಸ್ಥಿರ ದೂರವಾಣಿ ಸೇರಿದಂತೆ ಮಾರ್ಚ್ ಮಾಸಾಂತ್ಯದಲ್ಲಿ 89.80 ಕೋಟಿಯಷ್ಟಿದ್ದ ಗ್ರಾಹಕರ ಒಟ್ಟಾರೆ ಸಂಖ್ಯೆ ಏಪ್ರಿಲ್ 30ರ ವೇಳೆಗೆಲ್ಲಾ 89.70 ಕೋಟಿಗೆ ಇಳಿದುಬಿಟ್ಟಿದೆ.ಫೆಬ್ರುವರಿಗೆ ಹೋಲಿಸಿದಲ್ಲಿ ಮಾರ್ಚ್‌ನಲ್ಲಿ 60 ಲಕ್ಷ ಹೊಸ ಗ್ರಾಹಕರು ದೂರವಾಣಿ ಕ್ಷೇತ್ರಕ್ಕೆ ಲಭ್ಯವಾಗಿದ್ದರು. ಆದರೆ, ಏಪ್ರಿಲ್‌ನಲ್ಲಿ ದಿಢೀರ್ ಕುಸಿತವಾಗಿದೆ. ಇದು ಮಾಸಿಕ ಚಂದಾದಾರರ ಸಂಖ್ಯೆ ಪ್ರಗತಿಯ ಲೆಕ್ಕವನ್ನು ನಕಾರಾತ್ಮಕ (ಮೈನಸ್ 0.11) ಮಟ್ಟಕ್ಕೆ ದೂಡಿದೆ.ಗ್ರಾಮೀಣ ಭಾಗ ಏರಿಕೆ

ಏಪ್ರಿಲ್‌ನಲ್ಲಿ ನಗರಗಳಲ್ಲಿನ ದೂರವಾಣಿ ಚಂದಾದಾರರ ಸಂಖ್ಯೆ ಶೇ 61.11ರಿಂದ ಶೇ 60.71ಕ್ಕೆ ಕುಸಿದಿದೆ. ಅಚ್ಚರಿ ಎಂದರೆ ಗ್ರಾಮೀಣ ಭಾಗದ ಗ್ರಾಹಕರ ಪ್ರಮಾಣ ಶೇ 38.89ರಿಂದ ಶೇ 39.29ಕ್ಕೇರಿದೆ. ದೇಶದ ಒಟ್ಟಾರೆ ದೂರವಾಣಿ ಸಾಂದ್ರತೆ ಶೇ 73.32ರಿಂದ ಶೇ 73.16ಕ್ಕೆ ಅಲ್ಪ ಪ್ರಮಾಣದ ಇಳಿಕೆ ಕಂಡಿದೆ.ಬ್ರಾಡ್‌ಬ್ಯಾಂಡ್

ಇಂಟರ್ನೆಟ್ ಸೌಲಭ್ಯಕ್ಕಾಗಿ ಬ್ರಾಡ್‌ಬ್ಯಾಂಡ್ ಸೇವೆ ಪಡೆದುಕೊಳ್ಳುವವರ ಸಂಖ್ಯೆ ಏಪ್ರಿಲ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರ್ಚ್‌ನಲ್ಲಿ 150.5 ಲಕ್ಷ ಬ್ರಾಡ್‌ಬ್ಯಾಂಡ್ ಬಳಕೆದಾರರ ಪ್ರಮಾಣ ಏಪ್ರಿಲ್‌ನಲ್ಲಿ 150.9 ಲಕ್ಷಕ್ಕೇರಿದೆ. ವಾರ್ಷಿಕ ಶೇ 8.21ರಷ್ಟು ಹೆಚ್ಚಳ ಕಂಡುಬಂದಿದೆ  ಎಂದಿದೆ `ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ'(ಟಿಆರ್‌ಎಐ-ಟ್ರಾಯ್).          

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.