ದೂರವಾದ ಯುದ್ಧಭೀತಿ

7

ದೂರವಾದ ಯುದ್ಧಭೀತಿ

Published:
Updated:

ಸಿರಿಯಾದ ಮೇಲೆ ಅಮೆರಿಕ ಮಿಲಿಟರಿ ದಾಳಿ ನಡೆಸುವ ಸಾಧ್ಯತೆ ಸದ್ಯಕ್ಕೆ ದೂರವಾಗಿದೆ. ರಷ್ಯಾ ಜತೆ ಮಾತುಕತೆ ನಡೆಸಿದ ಸಿರಿಯಾದ ವಿದೇಶಾಂಗ ಸಚಿವ ವಾಲಿದ್ ಮುಅಲ್ಲಮ್, ತಮ್ಮ ದೇಶದ ರಾಸಾಯನಿಕ ಅಸ್ತ್ರಗಳ ನಿಯಂತ್ರಣವನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಒಪ್ಪಿಸಲು ಸಮ್ಮತಿ ಸೂಚಿಸಿರುವುದು ಒಳ್ಳೆಯ ಬೆಳವಣಿಗೆ.

ಸಿರಿಯಾ ಹೊಂದಿರುವ ರಾಸಾಯನಿಕ ಅಸ್ತ್ರಗಳ ಪಟ್ಟಿಯನ್ನು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಇಡುವಂತೆ, ಬಳಿಕ ಅವುಗಳನ್ನು ನಾಶಗೊಳಿಸುವಂತೆ ರಷ್ಯಾ ಮುಂದಿಟ್ಟ ಸಲಹೆಯನ್ನು ಸಿರಿಯಾ ಒಪ್ಪಿರುವುದು ಸಮಚಿತ್ತದ ನಡೆಯಾಗಿದೆ. ‘ರಾಸಾಯನಿಕ ಅಸ್ತ್ರಗಳನ್ನು ಅಂತರರಾಷ್ಟ್ರೀಯ ಸಮುದಾಯದ ನಿಯಂತ್ರಣಕ್ಕೆ ಒಪ್ಪಿಸಿ ಎಂದು ನಾವು  ಎರಡು ವರ್ಷಗಳಿಂದಲೂ ಸಿರಿಯಾಕ್ಕೆ ಹೇಳುತ್ತಿದ್ದೇವೆ. ಈಗಿನ ಸುದ್ದಿ ನಿಜವೇ ಆಗಿದ್ದರೆ ನಾವು ಯುದ್ಧಕ್ಕೆ ಇಳಿಯುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿಕೆ ನೀಡಿದ್ದಾರೆ.

‘ಸಿರಿಯಾದ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಸದ್ಯಕ್ಕೆ ಯುದ್ಧ ಮುಂದೂಡುವ ತಂತ್ರವಾಗಿ ಈ ಸಮ್ಮತಿ ಸೂಚಿಸಿರಲಿಕ್ಕಿಲ್ಲ’ ಎನ್ನುವ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.  ಯುದ್ಧ ಅನ್ನುವುದು ಈಗ ಕೇವಲ ಎರಡು ದೇಶಗಳ ನಡುವಣ ಸಂಗತಿಯಾಗಿ ಉಳಿದಿಲ್ಲ. ಅಮೆರಿಕದಂತಹ ದೈತ್ಯ ರಾಷ್ಟ್ರ ಯಾವುದೇ ದೇಶದ ಮೇಲೆ ಯುದ್ಧ ಸಾರಿದರೂ ಅದರ ದುಷ್ಪರಿಣಾಮ ಜಗತ್ತಿನ ಎಲ್ಲ ದೇಶಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಅರಬ್ ದೇಶಗಳ ತೈಲ ಶ್ರಿಮಂತಿಕೆ ಮತ್ತು ತೈಲ ವ್ಯಾಪಾರ ಒಪ್ಪಂದಗಳ ಹಿನ್ನೆಲೆಯಲ್ಲಿ ಅಲ್ಲಿ ಯುದ್ಧವಾದರೆ, ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆಯೇ ಮೊದಲು ಭಾರೀ ಹೊಡೆತ ಬೀಳುತ್ತದೆ. ಕಳೆದ ವಾರ ಭಾರತದ ಷೇರುಪೇಟೆ ಮತ್ತು ವಿನಿಮಯ ಪೇಟೆಯಲ್ಲಿ ಇದರ ಮುನ್ಸೂಚನೆಯೂ ಕಂಡುಬಂದಿದೆ. ಭಾರತ ಸಹಿತ ಹಲವು ದೇಶಗಳ ಕರೆನ್ಸಿ ಮೌಲ್ಯ ಕುಸಿತವಾದದ್ದೂ ಅಲ್ಲದೇ, ತೈಲದ ಬೆಲೆ ಏರಿಕೆಯೂ ಉಂಟಾಗಿತ್ತು.

ಸದ್ಯಕ್ಕೆ ಯುದ್ಧ ಭೀತಿ ದೂರವಾಗಿರುವುದರಿಂದ ಭಾರತದ ಷೇರುಪೇಟೆ ಚೇತರಿಕೆ ಕಂಡಿದ್ದು, ರೂಪಾಯಿಯೂ ಶಕ್ತಿ ತುಂಬಿಕೊಂಡಿದೆ. ದೇಶಗಳ ನಡುವಣ ವೈಷಮ್ಯ ಎಷ್ಟೇ ಗಂಭೀರವಾದರೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಅದನ್ನು ಬಗೆಹರಿಸಬಹುದು ಎನ್ನುವ ಆಶಾಭಾವನೆಯನ್ನು ಸಿರಿಯಾದ ಈಗಿನ ವಿದ್ಯಮಾನ ಸೂಚಿಸಿದೆ.ರಷ್ಯಾ ದೇಶವು ಸಿರಿಯಾದ ಮಿತ್ರರಾಷ್ಟ್ರವೇ ಆಗಿರುವುದರಿಂದ ರಾಜತಾಂತ್ರಿಕ ಮಾತುಕತೆಯ ಮೂಲಕ ಯುದ್ಧಭೀತಿಯನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮುತ್ಸದ್ದಿತನ ತೋರಿದೆ. ಏಷ್ಯಾ ಮತ್ತು ಯೂರೋಪಿನ ದೇಶಗಳ ಮೇಲೆ ಆರ್ಥಿಕ ಹಿಂಜರಿಕೆಯ ಕಾರ್ಮೋಡ ದಟ್ಟವಾಗಿ ಕವಿದಿರುವ ಈಗಿನ ಪರಿಸ್ಥಿತಿಯಲ್ಲಿ ಯುದ್ಧ ಯಾರಿಗೂ ಬೇಡವಾಗಿದೆ.

ಹಾಗೆಂದೇ ಅಮೆರಿಕ ಕಳೆದ ಒಂದು ವಾರದಿಂದ ಯುದ್ಧದ ಮಾತುಗಳನ್ನು ಆಡುತ್ತಿದ್ದರೂ, ಅವಸರ ಮಾಡಿರಲಿಲ್ಲ. ಸಿರಿಯಾ ಮತ್ತು ಅಮೆರಿಕ ನಡುವಣ ವೈಷಮ್ಯವನು್ನ  ತಿಳಿಗೊಳಿಸಲು ರಷ್ಯಾ ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಕ್ರಮಗಳನ್ನೂ ಕೈಗೊಳ್ಳಲಿ. ಇದೇ ಸಂದರ್ಭದಲ್ಲಿ ಯಾವುದೇ ದೇಶ ರಾಸಾಯನಿಕ ಅಸ್ತ್ರಗಳನ್ನು ಮನಬಂದಂತೆ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಒಪ್ಪಂದಗಳು ಬಲಗೊಳ್ಳುವಂತಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry