ದೂರು ನೀಡಲು ಕಾನೂನು ಸಹಾಯಕರ ನೆರವು

6
ಲೋಕಾಯುಕ್ತರಿಂದ ಮುಖ್ಯ ನ್ಯಾಯಮೂರ್ತಿಗೆ ಮನವಿ

ದೂರು ನೀಡಲು ಕಾನೂನು ಸಹಾಯಕರ ನೆರವು

Published:
Updated:

ಬೆಂಗಳೂರು: ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ದೂರು ನೀಡುವುದಕ್ಕೆ ಕಾನೂನು ಸೇವಾ ಕ್ಲಿನಿಕ್‌ಗಳು, ಕಾನೂನು ಸೇವಾ ಕಾರ್ಯಕರ್ತರ ಮೂಲಕ ನೆರವು ನೀಡುವ ವ್ಯವಸ್ಥೆ ಜಾರಿಗೊಳಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರಿಗೆ ಮನವಿ ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ ರಾವ್‌ ತಿಳಿಸಿದರು.ಲೋಕಾಯುಕ್ತ ಕಚೇರಿಯಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಬರುವವರಲ್ಲಿ ಅನಕ್ಷರಸ್ಥರು ಮತ್ತು ಹೆಚ್ಚು ತಿಳಿವಳಿಕೆ ಇಲ್ಲದವರೂ ಇರುತ್ತಾರೆ. ಅಂತಹವರು ನಿಗದಿತ ನಮೂನೆಗಳನ್ನು ಭರ್ತಿ ಮಾಡಲು ಕಾನೂನು ಸೇವಾ ಕ್ಲಿನಿಕ್‌ಗಳಿಂದ ನೆರವು ಒದಗಿಸುವಂತೆ ಕೋರಲಾಗಿದೆ. ಗ್ರಾಮಗಳ ಮಟ್ಟ­ದಲ್ಲಿ ಕಾನೂನು ಸೇವಾ ಕಾರ್ಯಕರ್ತರ ನೇಮ­ಕಕ್ಕೂ ಮನವಿ ಮಾಡಲಾಗಿದೆ. ಮುಖ್ಯ ನ್ಯಾಯ­ಮೂರ್ತಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.‘ನಾನು ಉಪ ಲೋಕಾಯುಕ್ತನಾಗಿ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಆಡಳಿತ ವ್ಯವಸ್ಥೆ ತೀರಾ ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ ಆಸ್ಪತ್ರೆಗಳ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ. ರೋಗಿಗಳನ್ನು ಪರೀಕ್ಷಿಸಲು ವೈದ್ಯರೂ ಇಲ್ಲದ ಸ್ಥಿತಿ ಇದೆ’ ಎಂದು ನ್ಯಾ.ಸುಭಾಷ್‌ ಬಿ.ಅಡಿ ಅಸಮಾಧಾನ ವ್ಯಕ್ತಪಡಿಸಿದರು.ತಪ್ಪಿತಸ್ಥರನ್ನು ವಜಾಗೊಳಿಸಿ: ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್‌ ಮಾತನಾಡಿ, ‘ಭ್ರಷ್ಟಾಚಾರ ಹತ್ತಿಕ್ಕಲು ಇದು ಸುಸಮಯ. ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಮಧ್ಯಂತರ ಮೌಲ್ಯಮಾಪನ ನಡೆಸಬೇಕಾಗುತ್ತದೆ. ಭ್ರಷ್ಟರು ಮತ್ತು ಅಸಮರ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವ ವ್ಯವಸ್ಥೆ ತರಬೇಕು. ಇದರಿಂದ ಸಂಪೂರ್ಣವಾಗಿ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ ಎಂದು ನಾನು ಹೇಳಲಾರೆ. ಆದರೆ, ನಿಯಂತ್ರಣದ ದೃಷ್ಟಿಯಿಂದ ಹೆಚ್ಚು ಪರಿಣಾಮ ಬೀರಬಲ್ಲದು’ ಎಂದರು.‘ನಿತ್ಯವೂ ನನ್ನ ಬಳಿ 50ರಿಂದ 60 ದೂರುಗಳು ಬರುತ್ತೇವೆ. ನಿಯಮದ ಪ್ರಕಾರ ಸೇವೆ ದೊರೆಯುತ್ತಿಲ್ಲ ಎಂಬ ಅಂಶವೇ ಹೆಚ್ಚು ದೂರುಗಳಲ್ಲಿ ಇರುತ್ತದೆ. ಭ್ರಷ್ಟಾಚಾರ ಮುಕ್ತ, ಒಳ್ಳೆಯ ಆಡಳಿತ ನೀಡುವ ದಿಸೆಯಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದ್ಕರ್‌ ಹೇಳಿದರು.ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್‌.ಬಿ.ಮಜಗೆ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry