ಬುಧವಾರ, ನವೆಂಬರ್ 13, 2019
23 °C

ದೂರು ನೀಡಿದವಳನ್ನೇ ಕೂಡಿ ಹಾಕಿದ ಪೊಲೀಸರು

Published:
Updated:

ಲಖನೌ (ಐಎಎನ್‌ಎಸ್):  ಅತ್ಯಾಚಾರ ದೂರು ನೀಡಲು ಠಾಣೆಗೆ ಹೋದ 10 ವರ್ಷದ ಬಾಲಕಿಯನ್ನೇ ಕೂಡಿ ಹಾಕಿದ ಅಮಾನವೀಯ ಘಟನೆ ಸೋಮವಾರ ಉತ್ತರ ಪ್ರದೇಶದಲ್ಲಿ ಜರುಗಿದ್ದು ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದೆ.ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ 24 ವರ್ಷದ ಯುವಕನ ವಿರುದ್ಧ ದೂರು ನೀಡಲು ಬುಲಂದ್‌ಶಹರ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆಯನ್ನು ನಿಂದಿಸಿ ಹೊರದಬ್ಬಿದ್ದ ಮಹಿಳಾ ಪೊಲೀಸರು ನಂತರ ಬಾಲಕಿಯನ್ನು ಠಾಣೆಯಲ್ಲಿಯೇ ಕೂಡಿ ಹಾಕಿದ್ದರು.ರಾತ್ರಿಯಿಡಿ ಬಾಲಕಿಯನ್ನು ಠಾಣೆಯಲ್ಲಿ ಕೂಡಿಹಾಕಿದ್ದ ಪೊಲೀಸರು ಅವಳನ್ನು ನೆಲದ ಮಲಗಿಸಿದ್ದರು. ಸೋಮವಾರ ನಡೆದ ಈ ಅಮಾನವೀಯ ಘಟನೆಯನ್ನು ಸೆರೆಹಿಡಿದಿದ ಸ್ಥಳೀಯ ಸುದ್ದಿವಾಹಿನಿ ಪೊಲೀಸ್ ಇಲಾಖೆಯ ಈ ಕರಾಳ ಮುಖವನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗಿತ್ತು.ಈ ವಿಡಿಯೋ ದೃಶ್ಯಗಳನ್ನು ವೀಕ್ಷಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ತಕ್ಷಣ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)