ದೂಳುಮುಕ್ತ ನಗರ ನಿರ್ಮಾಣ ಉದ್ದೇಶ

7

ದೂಳುಮುಕ್ತ ನಗರ ನಿರ್ಮಾಣ ಉದ್ದೇಶ

Published:
Updated:

ಚಿಕ್ಕಬಳ್ಳಾಪುರ: ನಸುಕಿನ 4.30ರ ಸಮಯ. ಆಗಷ್ಟೇ ಹಕ್ಕಿಗಳ ಕಲರವ, ರಸ್ತೆಯ ಮೇಲೆ ಒಂದೊಂದಾಗಿ ವಾಹನಗಳು ಕಾಣಿಸತೊಡಗಿದವು. ಜನರ ಸಂಚಾರ ಸಹಜವಾಗತೊಡಗಿತು.ಟ್ರ್ಯಾಕ್ಟರ್‌ನಲ್ಲಿ ಬಂದ ಕೆಲ ಯುವಕರು ನಗರದ ಟಿ.ಚನ್ನಯ್ಯ ಉದ್ಯಾನ ಸಮೀಪ ಬಿ.ಬಿ.ರಸ್ತೆಯಲ್ಲಿ ಇಳಿದರು.ಅವರೊಂದಿಗೆ ಕಬ್ಬಿಣದ ಸಲಾಕೆ, ಬುಟ್ಟಿ ಮತ್ತು ಪೊರಕೆಗಳು ಕೂಡ ಇದ್ದವು. ಕೆಲ ಕ್ಷಣಗಳು ಕಳೆದಿದ್ದವು. ಅಷ್ಟರಲ್ಲಿ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊರಕೆ, ಸಲಾಕೆಗಳ ನೆರವಿನಿಂದ ರಸ್ತೆಯಲ್ಲಿನ ಮಣ್ಣು ತೆಗೆಯತೊಡಗಿದರು.ಬೆಳಿಗ್ಗೆಬೆಳಿಗ್ಗೇನೆ ಇದೇನು ಕಾರ್ಯಾಚರಣೆ ಎಂದು ವಿಚಾರಿಸಿದರೆ, ಆ ಯುವಕರು ಹೇಳಿದ್ದು: ಸ್ವಚ್ಛತಾ ಅಭಿಯಾನ. ದೂಳುಮುಕ್ತ ನಗರ ನಿರ್ಮಾಣ.ಗ್ರಾಮೀಣ ಪ್ರದೇಶದ ಚಟುವಟಿಕೆಗಳಿಗೆ ಮತ್ತು ಸ್ವಚ್ಛತಾ ಕಾರ್ಯಗಳಿಗೆ ಸೀಮಿತವಾಗಿದ್ದ ಯಲುವಹಳ್ಳಿಯ ಕುಮಧೇಂದು ಮಹರ್ಷಿ ಕನ್ನಡ ಯುವಕರ ಸಂಘದ ಸದಸ್ಯರು ಶುಕ್ರವಾರ ಬೆಳಿಗ್ಗೆ ನಗರಪ್ರದೇಶದಲ್ಲೂ ಸಹ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.ಶುಕ್ರವಾರ ನಸುಕಿನಲ್ಲಿ ರಸ್ತೆಯಲ್ಲಿನ ಮಣ್ಣು ತೆಗೆಯುವ ಮೂಲಕ ಆ ಪ್ರದೇಶವನ್ನು ದೂಳುಮುಕ್ತಗೊಳಿಸುವತ್ತ ಪ್ರಥಮ ಹೆಜ್ಜೆಯಿಟ್ಟರು.   ಬೆಳಿಗ್ಗೆ 4.30 ರಿಂದ 8 ಗಂಟೆಯವರೆಗೆ ಸಂಘದ ಯುವಕರು ಬಿ.ಬಿ.ರಸ್ತೆ ಮತ್ತು ಶಿಡ್ಲಘಟ್ಟ ವೃತ್ತದ ಸುತ್ತಮುತ್ತ ಮಣ್ಣು ತೆಗೆದು, ಸ್ವಚ್ಛಗೊಳಿಸಿ ನೀರು ಹಾಕಿದರು. ಪೊಲೀಸ್ ಚೌಕಿ, ಚನ್ನಯ್ಯ ಉದ್ಯಾನ ಬಳಿಯಿರುವ ಪಾದಚಾರಿ ಮಾರ್ಗವನ್ನು ಶುಚಿಗೊಳಿಸಿದರು.ನಗರವನ್ನು ಸ್ವಚ್ಛಗೊಳಿಸುವಂತೆ ಮತ್ತು ದೂಳುಮುಕ್ತವಾಗಿಸುವಂತೆ ಕೆಲ ದಿನಗಳ ಹಿಂದೆ ಯುವಕರು ಉಪವಿಭಾಗಾಧಿಕಾರಿ ಕಚೇರಿ ಪಿ.ವಸಂತ್‌ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.

 

ಸ್ವಚ್ಛತೆ ಬಗ್ಗೆ ಭರವಸೆ ನೀಡಿದ್ದ ವಸಂತ್‌ಕುಮಾರ ರಸ್ತೆಯಲ್ಲಿ ಮಣ್ಣು ತೆಗೆಯುವ ಮತ್ತು ನೀರು ಸುರಿಯುವ ಮೂಲಕ ದೂಳು ನಿವಾರಿಸಲು ಕ್ರಮ ಕೈಗೊಂಡಿದ್ದರು.ಆದರೆ ಆರಂಭಶೂರತ್ವದ ಎನ್ನುವಂತೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳುವ ಯುವಕರು ಸ್ವಯಂ-ಪ್ರೇರಣೆಯಿಂದ ಸ್ವಚ್ಛತಾ ಕಾರ್ಯಕ್ಕೆ ಇಳಿದರು.ಟ್ರಾಕ್ಟರ್ ಭರ್ತಿಯಾಗುವಷ್ಟು ಮಣ್ಣು ತೆಗೆದ ಯುವಕರು ಬಳಿಕ ಎರಡು ನೀರಿನ ಟ್ಯಾಂಕರ್‌ಗಳಲ್ಲಿ ನೀರು ಹಾಕಿದರು.‘ಜಿಲ್ಲಾಡಳಿತ ಮತ್ತು ನಗರಸಭೆಗೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ.ಸ್ವಚ್ಛತೆ ಕುರಿತು ಸಂಬಂಧಪಟ್ಟವರು ಗಮನಹರಿಸಲಿಲ್ಲ. ಆದ್ದರಿಂದ ನಾವೇ ಸ್ವಚ್ಛತಾ ಕಾರ್ಯ ಆರಂಭಿಸಿದೆವು.ಇದಾದ ನಂತರವೂ ನಗರಸಭೆಯು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇದೇ ರೀತಿಯ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಯುವಕರು ತಿಳಿಸಿದರು. ಕುಮಧೇಂದು ಮಹರ್ಷಿ ಕನ್ನಡ ಯುವಕರ ಸಂಘದ ಸದಸ್ಯರಾದ ಎಂ.ಜಗದೀಶ್, ಯಲುವಹಳ್ಳಿ ಸೊಣ್ಣೇಗೌಡ, ಡಿ.ವೆಂಕಟರಾಜು, ಕೆ.ಆನಂದ್, ರವಿಕುಮಾರ್, ಮುನೇಗೌಡ, ವಿ.ಮುನಿರಾಜು, ಕೆ.ಮುನಿರಾಜು, ಎಂ.ಮುನಿರಾಜು, ಅನಿಲ್, ಕಿಶೋರ್,  ಮಂಜುನಾಥ್,  ಇತರರು ಸ್ವಚ್ಛತಾಕಾರ್ಯದಲ್ಲಿ  ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry