ದೂಳು ತಿನ್ನುತ್ತಿರುವ ಪಾಟೀಲ ವರದಿ!

7

ದೂಳು ತಿನ್ನುತ್ತಿರುವ ಪಾಟೀಲ ವರದಿ!

Published:
Updated:

ಮೈಸೂರು: ಪ್ರತಿ ವರ್ಷ ರೈತ ಮುಖಂಡರು ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆ ಕರೆದು ಇಳುವರಿ ಹಾಗೂ ಖರ್ಚಿನ ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡಬೇಕು (State Advisory Price) ಎಂದು ಡಾ.ಎಸ್.ಎ.ಪಾಟೀಲ ನೇತೃತ್ವದ ಅಧ್ಯಯನ ತಂಡ ಸರ್ಕಾರಕ್ಕೆ ಸಲ್ಲಿಸಿದ ವರದಿ ದೂಳು ತಿನ್ನುತ್ತಿದೆ!

ಹೌದು. ಕರ್ನಾಟಕ ಕೃಷಿ ಮಿಷನ್‌ನ ಅಧ್ಯಕ್ಷ ಡಾ.ಎಸ್.ಎ.ಪಾಟೀಲ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 2011ರ ಸೆಪ್ಟೆಂಬರ್ 13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಸಭೆಯಲ್ಲಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕ ಕೆ.ಎಸ್.ಸತ್ಯಮೂರ್ತಿ, ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ, ಕೃಷಿ ಇಲಾಖೆ, ಸಕ್ಕರೆ ತಾಂತ್ರಿಕ ತಜ್ಞರು, ರೈತ ಮುಖಂಡರು ಸೇರಿದಂತೆ ಅನೇಕರು ಬೆಲೆ ನಿಗದಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು. ಅಂತಿಮವಾಗಿ ಎಸ್‌ಎಪಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅಧ್ಯಕ್ಷರು 2011ರ ಸೆಪ್ಟೆಂಬರ್ 29ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ವರದಿ ಸಲ್ಲಿಸಿದ್ದರು. ಆದಾಗ್ಯೂ, ಏಳು ತಿಂಗಳು ಕಳೆದರೂ ವರದಿ ಜಾರಿ ಆಗದಿರುವುದು ರೈತರು ಮತ್ತೆ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.

ಈ ನಡುವೆ ದೇಶದ ಇತರ ರಾಜ್ಯಗಳಲ್ಲಿ ಕಬ್ಬಿನ ಬೆಲೆ ನಿಗದಿ ಪಡಿಸಿರುವ ಬಗ್ಗೆ ಅಧ್ಯಯನ ನಡೆಸಲು ಮೂರು ಸಮಿತಿಗಳನ್ನು ರಚಿಸಲಾಯಿತು. ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಎಂ.ಪ್ರಭು, ಎಚ್.ಎಂ.ವೀರಭದ್ರಸ್ವಾಮಿ, ರೈತ ಮುಖಂಡ ಆರ್.ಬಿ.ಪಾಟೀಲ ನೇತೃತ್ವದ ತಂಡ ಮಹಾರಾಷ್ಟ್ರ ರಾಜ್ಯಕ್ಕೆ, ಬೆಂಗಳೂರಿನ ಕೆ.ಎ.ವೆಂಕಟೇಶ್, ಕರ್ನಾಟಕ ರಾಜ್ಯ ರೈತ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ, ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಬಿ.ಕೆ.ಧರ್ಮರಾಜನ್, ಇಐಡಿ ಪ್ಯಾರಿ ಕಂಪೆನಿಯ ಉಪಾಧ್ಯಕ್ಷ ಡಾ.ಗೋಪಿನಾಥ್, ಸಕ್ಕರೆ ತಾಂತ್ರಿಕ ತಜ್ಞ ಡಾ.ಪಿ.ತಂಗಮುತ್ತು ಅವರನ್ನೊಳಗೊಂಡ ತಂಡ ತಮಿಳುನಾಡು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಅಧ್ಯಯನ ಮಾಡಿತು.

ಅದೇ ರೀತಿ, ಕಬ್ಬು ಬೇಸಾಯ ತಜ್ಞ ಡಾ.ಆರ್.ಬಿ. ಖಾಂಡಗಾವೆ, ವಿ.ಗೋವಿಂದರೆಡ್ಡಿ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಂಡ ಉತ್ತರ ಪ್ರದೇಶ, ಪಂಜಾಬ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅಧ್ಯಯನ ನಡೆಸಿತು. ಈ ಮೂರು ತಂಡಗಳ ವರದಿಯನ್ನು ಕ್ರೋಡೀಕರಿಸಿ ಡಾ.ಎಸ್.ಎ. ಪಾಟೀಲ ಅವರು ಎಸ್‌ಎಪಿ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಇದುವರೆಗೂ ಎಸ್‌ಎಪಿ ಜಾರಿಗೆ ಸರ್ಕಾರ ಮುಂದಾಗದಿರುವುದು ರೈತರು ಆತಂಕದಲ್ಲೇ ಕಾಲಕಳೆಯುವಂತಾಗಿದೆ.

ಉನ್ನತ ಮಟ್ಟದ ಸಮಿತಿ ನೇಮಕಕ್ಕೆ ಮನವಿ

ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ ಹಾಗೂ ಹರಿಯಾಣ ರಾಜ್ಯಗಳಲ್ಲಿ ಇಳುವರಿ ಆಧಾರದ ಮೇಲೆ ಒಂದು ಟನ್ ಕಬ್ಬಿಗೆ 1800 ರಿಂದ 2000 ರೂಪಾಯಿ ಮುಂಗಡ ಹಣವನ್ನು ರೈತರಿಗೆ ಪಾವತಿಸಲಾಗುತ್ತಿದೆ. ಅಲ್ಲದೆ ಎಲ್ಲ ರಾಜ್ಯಗಳಲ್ಲೂ ರಾಜ್ಯ ಕಬ್ಬು ಸಲಹಾ ಬೆಲೆ (ಎಸ್‌ಎಪಿ) ಜಾರಿಯಲ್ಲಿದೆ. ಆದ್ದರಿಂದ ಇತರ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ ಮುಖ್ಯ ಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ನೇಮಕ ಮಾಡಬೇಕು. ಈ ಸಮಿತಿಯಲ್ಲಿ ಸಕ್ಕರೆ, ಕೃಷಿ, ಕೈಗಾರಿಕೆ, ತೋಟಗಾರಿಕೆ, ಸಹಕಾರ ಮತ್ತು ಹಣಕಾಸು ಇಲಾಖೆ ಸಚಿವರು, ಅಧಿಕಾರಿ ಗಳು, ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು, ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಪ್ರತಿನಿಧಿಗಳು ಸದಸ್ಯರಾಗಿರಬೇಕು. ಎಲ್ಲರೂ ಸೇರಿ ಪ್ರತಿ ವರ್ಷ ಇಳುವರಿ ಹಾಗೂ ಖರ್ಚಿನ ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡಬೇಕು ಎಂದು ವರದಿಯಲ್ಲಿ ಮನವಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry