ದೂಸರಾ ಸ್ಪೆಶಲ್- ಪಿಂ ಗಣಿ ಗೊಂಬೆಗಳು

7

ದೂಸರಾ ಸ್ಪೆಶಲ್- ಪಿಂ ಗಣಿ ಗೊಂಬೆಗಳು

Published:
Updated:

ಪರ‌್ಮೇಶಿ ಅಂಡ್ ಪಟಾಲಂ ಮಲ್ಲಿ ಸ್ಟುಡಿಯೋದಲ್ಲಿ ಪಿತೃಪಕ್ಷದ ಹಳೇ ವಡೆ, ಬೋಂಡಾ ತಿಂತಾ ನವರಾತ್ರಿ ಸೆಲೆಬ್ರೇಶನ್ಸ್  ಬಗ್ಗೆ ಸ್ಕೆಚ್ ಹಾಕ್ತಾ ಕೂತಿದ್ರು.`ಲೇಯ್! ನಾವೂ ಈ ಸಾರಿ ಬೊಂಬೆ ಇಟ್ರೆ ಹೇಗೆ?~ ಎಂದ ಪರ‌್ಮೇಶಿ `ನಿನ್ನ ತಲೆ! ಬೊಂಬೆ ಹೆಂಗಸರು ಇಡದಲೇ! ನಮಗದು ಆಗಿ ಬರಲ್ಲ. ನಾವು ಬರೀ ಬೊಂಬೆ ತರ ತೆಪ್ಪಗೆ ಕೂತ್ಕೊಳೋದಷ್ಟೇ~ ಎಂದ ದೀಕ್ಷಿತ  `ಅದೇನೋ ಸರಿ ಬಿಡು,ಸೋನಿಯಾಜಿ ಒಂದು ದೊಡ್ಡ ಯುಪಿಎ ಬೊಂಬೆ ಮ್ಯೂಸಿಯಂ ಇಟ್ಟಿಲ್ವಾ?~ ಎಂದ ಸೀನ.  ` ಹೂ! ಮನಮೋಹನ ಸಿಂಗ್‌ರು ಮೇಣದ ಬೊಂಬೆಯಾಗಿ ಕಲ್ಲಿದ್ದಲು ಶಾಖಕ್ಕೆ ಕರಗಿ ಕರ‌್ರಗಾಗಿ ಹೋಗಿದ್ದಾರೆ. ಅವರ ವಿಷಯ ಬಿಡು..ನಾವ್ಯಾಕೆ ಬೊಂಬೆ ಇಡಬೇಕು ಅದನ್ನ ಮೊದಲು ಹೇಳಿ~  `ಇನ್ಯಾಕೆ? ಕಲೆಕ್ಷನ್‌ಗೆ? ಗಣಪತಿ ದುಡುಂ ಅನಿಸಿದ ಮೇಲೆ ಕನ್ನಡ ರಾಜ್ಯೋತ್ಸವ ಮಾಡೋ ತನಕ ಕೆಲಸ ಇಲ್ಲ, ಕಾಸೂ ಇಲ್ಲ.. ಸೋ ಬೊಂಬೆ ಇಟ್ಟು ಬಿಡೋದು.. ಗಣಪತಿನಾದ್ರೆ ಒಂದೇ ಸಾರಿ ದುಡುಂ ಅಂತ ನೀರಿಗೆ ಬಿಟ್ಟು ಬಿಡ್ತೀವಿ. ಬೊಂಬೆ ಇಟ್ರೆ ಹತ್ತಾರು ಬೊಂಬೆಗಳಿರುತ್ವೆ.. ಒಂದೊಂದನ್ನೇ ನಿಧಾನಕ್ಕೆ ದೀಪಾವಳಿ ತನಕ ಬಿಡ್ತಾ ಇರಬಹುದು~  `ಬಿಜೆಪಿ ಹೈಕಮಾಂಡ್ ವಿರುದ್ಧ ನಿಂತೋರನ್ನ ಒಬ್ಬೊಬ್ಬರನ್ನೇ ಬಿಡ್ತಿರೋ ಹಾಗೆ..~

 `ಅದ್ಸರಿ. ಮಾಮೂಲಿ ಗಂಡ-ಹೆಂಡತಿ ಬೊಂಬೆ ಇಟ್ರೆ ಯಾರು ನೋಡಕ್ಕೆ ಬರ‌್ತಾರೆ?~

`ಅದೂ ನಿಜಾನೇ! ಮನೆ ಮನೇಲಿ ಗಂಡ ಅನ್ನೋ ಡಾಲ್ ತೆಪ್ಪಗೆ ಕುಕ್ಕರುಬಡಿದಿರುತ್ತೆ. ಪ್ರತಿ ಹೆಂಗಸೂ ಅಮೇರಿಕದ ಮಿಚಿಗನ್‌ನಲ್ಲಿ ಇರೋ ಹಾಗೆ ಮನೇನೇ ನನ್ ಡಾಲ್ ಮ್ಯೂಸಿಯಂ ಮಾಡ್ಕೊಂಡಿರ‌್ತಾರೆ. ಏನಾದರೂ ಡಿಫೆರೆಂಟಾಗಿರೋದು ಇಡಬೇಕು~

 `ಅದಕ್ಕೇನಂತೆ? ಎಲ್ಲಾ ವೆರೈಟಿ ಬೊಂಬೆಗಳನ್ನೂ ಇಟ್ಟು ಬಿಟ್ರೆ ಆಯ್ತು~

`ನಮ್ ಮನಮೋಹನ್ ಸಿಂಗ್ ಅವರಿಂದಲೇ ಶುರು ಮಾಡಬಹುದು. ಅವರೊಂತರಾ ಸೂತ್ರದ ಬೊಂಬೆ..ಒಂದು ಮಮತಾ ಸೂತ್ರ ಕಿತ್ಕಂಡು ವಾಲಾಡ್ತಿದೆ. ಇನ್ನೆರಡು ಮಾಯಾಸೂತ್ರ, ಜಯಾ ಸೂತ್ರ ಹಿಡ್ಕಳಕ್ಕೆ ಒದ್ದಾಡ್ತಿದಾರೆ..~   `ಜಯಾ ಅನ್ನುತ್ಲು ಜ್ಞಾಪಕಕ್ಕೆ ಬಂತು? ಅವರು ಒಂಥರಾ ಬೆರ್ಚಪ್ಪ ಅಂದ್ರೆ ಬೆದರು ಬೊಂಬೆ ಅಲ್ಲವಾ?~

  `ಹೂ! ಅವರನ್ನೇ ಕೂರಿಸಿದ್ರೆ ಗಣಪತಿಗಿಂತ ಗ್ರಾಂಡಾಗಿ ಕಾವೇರಿಲಿ ಧುಡುಂ ಅನಿಸಬಹುದು ಕಣ್ರಲೇ..~

 `ಸಾಂಪ್ರದಾಯಿಕ ದಸರಾ ಬೊಂಬೆಗಳು ಬೇಡವೇ ಬೇಡ್ವಾ?~

 `ಈಗ ದಸರಾ ಬೊಂಬೆ ಇಟ್ರೆ ಯಾರು ನೋಡಕ್ಕೆ ಬರ‌್ತಾರೆ. ಎಲ್ಲಾ ಕಡೆ ದೂಸರಾ ಸ್ಪೆಶಲ್ ಬೊಂಬೆಗಳದ್ದೇ ದರ್ಬಾರು~  `ದೂಸರಾ ಬೊಂಬೆನಾ? ಹಾಗಂದ್ರೆ?~

 `ಮನೇಲಿ ದೂಸರಾ ಮಾತಾಡದ ಗಂಡು ಬೊಂಬೆ ಇರುತ್ವೆ. ಹಾಗೆ ಪ್ರತಿ ಪಕ್ಷದಲ್ಲೂ ಕುರ್ಚಿಲಿರೋರ ಕಾಲು ಎಳೆಯೋ ದೂಸರಾ ಬೊಂಬೆ ಇರುತ್ವೆ. ಉದಾಹರಣೆಗೆ ಕಾಂಗ್ರೆಸ್ಸಲ್ಲಿ ಶಿವಶಂಕರಪ್ಪ ಬೊಂಬೆ ಪರಮೇಶ್ವರ ಬೊಂಬೆಗೆ ಟಾಂಗ್ ಕೊಡಕ್ಕೆ ರೆಡಿಯಾಗಿಲ್ಲವಾ ? ಹಾಗೆ!~  `ಈಶ್ವರ ಅನ್ನುತ್ಲು ಜ್ಞಾಪಕಕ್ಕೆ ಬಂತು..ಒಂದು ಅರ್ಧನಾರೀಶ್ವರನ ಬೊಂಬೆ ಇಟ್ರೆ ಹೇಗೆ?~

 `ಸೂಪರ್ ಐಡಿಯಾ! ನಮ್ ಈಶ್ವರಪ್ಪನೋರೇ ಇದಾರಲ್ಲ.. ಉಪಮುಖ್ಯಮಂತ್ರಿಗಿರಿ, ಅಧ್ಯಕ್ಷ ಗಿರಿ ಎರಡನ್ನೂ ಆವಾಹಿಸಿಕೊಂಡು ಒದ್ದಾಡ್ತಿದಾರೆ.. ನಾರಿನ ಗುಂಜಿನಂತೆ ಗೊಂದಲದಲ್ಲಿದ್ದಾರೆ.. ಅವರನ್ನೇ ಅರ್ಧ ನಾರೇಶ್ವರ ಅಂತ ಕೂರಿಸಿಬಿಟ್ರಾಯ್ತು.~

 `ದಸರಾ ಅಂದ ಮೇಲೆ ಒಂದೆರಡು ರಾಜರ ಬೊಂಬೆ ಬೇಡ್ವಾ?~

` ಇಟ್ರಾಯ್ತು.  ಎ.ರಾಜ, ಜಗನ್‌ಮೋಹನ, ಕನಿಮೊಳಿ, ಕಲ್ಮಾಡಿ. ಅಜಿತ್ ಪವಾರ್ ಎಲ್ಲಾ ಇದಾರಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ ಬಳ್ಳಾರಿ ದೊರೆಗಳು ಇದಾರಲ್ಲ... ಅವರ ಬೊಂಬೆನೇ ಇಟ್ರಾಯ್ತು. ಥ್ಯಾಯ್ಲೆಂಡಿನ ಕ್ಲೂನಿಂಗ್ ಬೊಂಬೆಗಳ ತರ ನಮ್ಮಲ್ಲಿ ಕನ್ನಿಂಗ್ ಬೊಂಬೆಗಳು..~  `ದಸರಾ ಪ್ರತೀಕವಾಗಿ ಒಂದು ಆನೆ ಬೊಂಬೆ ಇಟ್ರೆ?~

 `ಇದಾರಲ್ಲ ಗಡ್-ಕರಿ! ಗಡದ್ದಾಗಿ ಅವರದ್ದೇ ಇಟ್ರಾಯ್ತು~

 `ಶಂಕರ್‌ಪಿಳೈ ಅವರ ಹಂಚಿಂಗ್ ಡಾಲ್ಸ್ ಬೇಡವಾ?~

`ಅವು ಓಲ್ಡ್ ಮಾಡೆಲ್! ಈಗ ಅಧಿಕಾರಕ್ಕೆ ಕಾಯ್ತೊ ಕೂತಿರೋ ಹೊಂಚಿಂಗ್ ಡಾಲ್ಸ್ ಬೇಕಾದಷ್ಟಿವೆ. ಎಲ್ಲಾ ಪಕ್ಷದಿಂದ ಎರಡೆರೆಡು ಎತ್ಕಂಡ್ರೆ ಗ್ಯಾಲರಿನೇ ತುಂಬಿ ಹೋಗುತ್ತೆ~

  `ಯಡಿಯೂರಪ್ಪ, ಗಾಂಢೀವಿ ಧನಂಜಯ್, ಮಮತಾ ತರ ಪಂಚಿಂಗ್ ಡಾಲ್ಸ್‌ಗಳನ್ನೂ ಇಡಬೇಕು~

 `ಆಮೇಲೆ ಈ ಡ್ಯಾನ್ಸಿಂಗ್ ಡಾಲ್ ಇರುತ್ತಲ್ಲ... ಪೆಂಡುಲಮ್ ತರ ಆ ಕಡೆ ಈ ಕಡೆ ಅಲ್ಲಾಡ್ತಾ ಜರ್ಕ್‌ ಹೊಡೀತಾ ಇರುತ್ತವಲ್ಲ..~

  `ಓ ! ಈ ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು... ಕಸ್ತೂರಿ ನಿವಾಸ ಬೊಂಬೆಗಳು... ಯಡಿಯೂರಪ್ಪನವರ ತರ ಎತ್ಲಗೆ ನೂಕುದ್ರೂ ಪೀಠದ ಕಡೆನೇ ಬರುತ್ತಲ್ಲ, ಆ ತರ ಬೊಂಬೆಗಳು..~

 `ಬರೀ ಇವನ್ನೇ ಇಟ್ರೆ ವರ್ಕ್ ಔಟ್ ಆಗಲ್ಲ..ಕಾವೇರೀಲಿ ಕರಗದೆ ಉಳಿದಿರೋ ಜೇಡಿ ಮಣ್ಣಿನ ಬೊಂಬೆಗಳು, ಸದಾನಂದರಂಥ ಲಾಫಿಂಗ್ ಡಾಲ್ಸ್, ರೆಡ್ಡಿ ತರ ಪಿಂ ಗಣಿ ಗೊಂಬೆಗಳು, ಶೋಭಾಯಮಾನವಾದ ವಾಸ್ತು ಬೊಂಬೆಗಳು, ಭೂತದ ಕೋಲ ತರ ಚಾರ್ ಕೋಲ ಗೊಂಬೆಗಳು, ಚನ್ನಪಟ್ಟಣದ ತಲೆಯಾಡಿಸೋ ಸ್ಪ್ರಿಂಗ್ ಗೊಂಬೆಗಳು, (ಬರೀ) ಮಾತನಾಡುವ ಬೊಂಬೆಗಳನ್ನೂ ಇಡಬೇಕು~   `ಮಾತನಾಡುವ ಬೊಂಬೆಗಳು ಅಂದ್ರೆ ಈ ಜಾದೂಗಾರರ ಹತ್ರ ಇರುತ್ತವಲ್ಲ... ಎರಡೆರಡು ತರ ಒಬ್ಬರೇ ಮಾತಾಡೋ ಡಬಲ್ ಹೆಡ್ ಬೊಂಬೆಗಳು  ತಾನೇ?~

  `ಹೂ! ಆಪರೇಶನ್ ಕಮಲದ ತರ ಮಾಟ ಮಾಡುತ್ತವಲ್ಲ.. ಅವೇ ಜಾದೂ ಬೊಂಬೆಗಳು..~

  `ಗೊತ್ತಾಯ್ತು ಬಿಡು..ಬರೀ ಮಾಟದ ಬೊಂಬೆ ಇಟ್ರೆ ಸಾಲ್ದು.. ಮೈ ಮಾಟದ ಬೊಂಬೆನೂ ಇಡಬೇಕು..~

 `ಅಂದ್ರೆ..!~

 `ಅಂದ್ರೆ ಸ್ಟಾರ್ ವ್ಯಾಲ್ಯೂ ಇರೋ ಬೊಂಬೆಗಳು..ರೇಖಾ ಬೊಂಬೆ, ಪೂಜಾ ಬೊಂಬೆ, ರಮ್ಯೋ ಬೊಂಬೆ ಈ ತರದ್ದು   `ಅದೇನೋ ಸರಿ! ಆದರೆ ಇವುಗಳಲ್ಲಿ ಯಾವುದನ್ನು ಮೊದಲು ಬಿಡೋದು, ಯಾವುದನ್ನ ಕೊನೆಗೇ ಬಿಡೋದು. ವಿಸರ್ಜನೆ ಮಾಡ್ತೀವಿ ಅಂದ್ರೆ~ ಒಪ್ಪೋ ಬೊಂಬೆಗಳಾ?~

`ಅದೂ ನಿಜಾನೇ, ಆದರೆ ನಮಗೆ ರಿಸ್ಕಿಲ್ಲ ಬಿಡು, ಒಂದಕ್ಕೊಂದು ಅವೇ ಕೆರೆ, ಬಾವಿಗೆ ನೂಕ್ಕೋತ್ತಾವೆ~ ಎಂದು ನಕ್ಕು ಪಂಚೆ ಕೊಡವಿಕೊಂಡು ಮೇಲೆದ್ದ ಪರ‌್ಮೇಶಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry