ಶನಿವಾರ, ಮೇ 28, 2022
24 °C

ದೃಶ್ಯ ವಿಶ್ವಕೋಶ ಭಾಷಾ ಮಂದಾಕಿನಿ

ಬಿ.ಜೆ.ಧನ್ಯಪ್ರಸಾದ್ Updated:

ಅಕ್ಷರ ಗಾತ್ರ : | |

ಭಾಷೆ ಇಲ್ಲದ ಸಮಾಜವನ್ನುಊಹಿಸುವುದೂ ಅಸಾಧ್ಯ, ಏಕೆಂದರೆ ಮನುಷ್ಯ ಯೋಚಿಸುವುದು ಭಾಷೆಯಲ್ಲಿಯೇ. ಭಾಷೆಯಿಲ್ಲದ ಮನುಷ್ಯ ಇತರ ಪ್ರಾಣಿಗಳಿಗಿಂತ ಭಿನ್ನವಾಗಿಯೇನು ಇರುತ್ತಿರಲಿಲ್ಲ.  ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಮತ್ತು ‘ದೇಶ ಸುತ್ತು ಇಲ್ಲವೇ ಕೋಶ ಓದು’ ಈ ನಾಣ್ಣುಡಿಗೂ ಭಾಷೆ ಪೂರಕವಾಗಿದೆ. ಮಾತನಾಡಲು ಭಾಷೆ ತಿಳಿದಿರಬೇಕು, ಕೋಶ ಓದಲು ಭಾಷೆ ಕಲಿತಿರಬೇಕು.ಮಾನವನ ಬಹುತೇಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವ ಭಾಷೆ  ‘ಲೋಕೋಪಯೋಗಿ’ ಆಗಿದೆ. ಜ್ಞಾನದ ವಾಹಕವಾಗಿರುವ ಭಾಷೆ ಕಾರಣದಿಂದಾಗಿ ಜನರು ವಿಶ್ವಜ್ಞಾನದಿಂದ ವಂಚಿತವಾಗಬಾರದೆಂಬ ಉದ್ದೇಶದಿಂದ ಮತ್ತು ದೇಶೀಯ ಭಾಷೆಗಳ ರಕ್ಷಣೆಗಾಗಿಯೇ ಕೇಂದ್ರ ಸರ್ಕಾರ ದೇಶದ ಏಳು ಕಡೆಗಳಲ್ಲಿ ಪ್ರಾದೇಶಿಕ ಭಾಷಾ ಕೇಂದ್ರಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರವೂ (ಸಿಐಐಎಲ್) (ಭಾಷಾ ಸಂಸ್ಥಾನ) ಒಂದು. ಈ ಕೇಂದ್ರಗಳಲ್ಲಿ ಭಾಷಾ ಸಂಶೋಧನೆ, ಅಭಿವೃದ್ಧಿ, ಕಲಿಕೆ, ತರಬೇತಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.ಜಾಗತೀಕರಣದ ಈ ದಿನಗಳಲ್ಲಿ ದೇಶೀಯ ಭಾಷೆಗಳ ಬೇರುಗಳನ್ನು ಮರುಶೋಧಿಸಿ ಅವುಗಳನ್ನು ಬಲಗೊಳಿಸಲು, ಅಳಿವಿನ ಅಂಚಿನಲ್ಲಿರುವ ಭಾಷೆಗಳ ಉಳಿವಿಗೆ ಚಿಂತನೆ ಮತ್ತು ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಭಾಷಾ ಸಂಸ್ಥಾನ ಭಾಷಾ ಅಭಿವೃದ್ಧಿಗೆ ಅವಿರತವಾಗಿ ಪ್ರಯತ್ನಿಸುತ್ತಿದೆ.

 

ವಿಶ್ವದ ವಿವಿಧೆಡೆಗಳಲ್ಲಿ ಚದುರಿರುವ ಜನಾಂಗಗಳಿಗೆ ಭಾಷೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ, ಜಾನಪದ ಕಲೆಗಳ ಕಂಪನ್ನು ಹರಡುವ ಸಲುವಾಗಿ ಭಾಷಾ ಸಂಸ್ಥಾನದವರು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದೊಂದಿಗೆ (IGNOU) ಒಪ್ಪಂದ ಮಾಡಿಕೊಂಡು GYAN DARSHAN ವಾಹಿನಿಯಲ್ಲಿ ಕಂತಿನಲ್ಲಿ ಪ್ರಸಾರ ಮಾಡಲು ಯೋಜನೆ ರೂಪಿಸಿರುವ ವಿಶಿಷ್ಟ ಯೋಜನೆ ‘ಭಾರತೀಯ ಭಾಷೆಗಳ ದೃಶ್ಯ ವಿಶ್ವಕೋಶ -ಭಾಷಾ ಮಂದಾಕಿನಿ’. ಒಂದೆರಡು ತಿಂಗಳಲ್ಲಿ ಕಾರ್ಯಕ್ರಮ ಸರಣಿ ಮೂಡಿಬರಲಿದ್ದು, ಪ್ರಸಾರದ ಸಮಯ ಇನ್ನು ನಿಗದಿಯಾಗಬೇಕಿದೆ.ಸಿಐಐಎಲ್‌ನ ಈ ಕನಸಿನ ಯೋಜನೆ ಆರಂಭವಾಗಿದ್ದು 2006ರಲ್ಲಿ, ಈಗ ಅಂತಿಮ ರೂಪುರೇಷೆಯೊಂದಿಗೆ ಅರ್ಧ ಗಂಟೆ ಅವಧಿಯ 750 ಕಿರುಚಿತ್ರಗಳ ಸಿ.ಡಿ.ಗಳು ಸಿದ್ಧವಾಗಿವೆ. ದೃಶ್ಯವಾಹಿನಿ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಬೋಧಿಸುವುದು ಇದರ ಉದ್ದೇಶವಾಗಿದೆ. ಸಿನಿಮಾ, ಸಾಕ್ಷ್ಯಚಿತ್ರ, ಕಿರುತೆರೆ, ನಾಟಕ ಕ್ಷೇತ್ರಗಳಲ್ಲಿ ದುಡಿದಿರುವ ಪರಿಣತ ನಿರ್ದೇಶಕರು, ಛಾಯಾಗ್ರಾಹಕರು, ಬರಹಗಾರರು  ‘ದೃಶ್ಯ-ಶ್ರವ್ಯ’ ದಾಖಲಾತಿಯ ಸಿ.ಡಿಗಳಲ್ಲಿ ಭಾಷ್ಯ ಬರೆದಿದ್ದಾರೆ.  

ಸಿ.ಡಿಗಳಲ್ಲಿರುವ ಸಂಗತಿಗಳ ಸ್ಥೂಲ ವಿವರ:

*ಸ್ಥಳನಾಮಗಳು, ವ್ಯಕ್ತಿನಾಮಗಳು, ದಾಸಶ್ರೇಷ್ಠರು, ಸಾರಸ್ವತ ಲೋಕದ ದಿಗ್ಗಜರ ಸಮಗ್ರ ಪರಿಚಯ

* ಐತಿಹಾಸಿಕ ಸ್ಥಳಗಳು, ಭೌಗೋಳಿಕ ಅದ್ಭುತಗಳ ವಿಶ್ಲೇಷಣಾತ್ಮಕ ವಿವರ

* ವಿಜ್ಞಾನ, ಕ್ರೀಡೆ, ಶಿಕ್ಷಣ, ನ್ಯಾಯದಾನ, ಮಾಧ್ಯಮ, ರಾಜಕಾರಣ, ರಂಗಭೂಮಿ, ಸಿನಿಮಾ, ಜಾನಪದ ಕಲೆ ಮುಂತಾದ ಕ್ಷೇತ್ರಗಳ ದರ್ಶನ

*ಧರ್ಮ (ಕ್ರೈಸ್ತ,ಬೌದ್ಧ,ಇಸ್ಲಾಂ...) ಸಂಪ್ರದಾಯ, ಬುಡಕಟ್ಟು, ಸಮುದಾಯ (ಕೊಡವ...)  ವಿವರ

* ಗುಲ್ಬರ್ಗ ಕನ್ನಡ, ಧಾರವಾಡ ಕನ್ನಡ ವೈಶಿಷ್ಟ್ಯ

* ವ್ಯವಸಾಯ, ವೈದ್ಯೋಪಚಾರ, ಸಂಗೀತ ಪರಿಕರಗಳ ಪರಿಚಯ

*  ಹಬ್ಬಗಳು, ಸಾಂಪ್ರಾದಾಯಿಕ ಆಚರಣೆಗಳು ಚಳವಳಿಗಳು (ದಸರಾ, ಸಂಕ್ರಾಂತಿ, ಕರಹುಣ್ಣಿಮೆ, ಬಂಗಾಳಿ ಮದುವೆ, ದುರ್ಗಾ ಪೂಜೆ, ಅಗೋಮಿನಿ, ದಶಾವತಾರ, ಬಂಗಾಳಿ ಪುಸ್ತಕ ಜಾತ್ರೆ ಚಳವಳಿ...)  

* ಭಾಷೆ ಉಗಮ, ಲಿಪಿ, ವ್ಯಾಕರಣ, ವಚನಸಾಹಿತ್ಯ, ನುಡಿಗಟ್ಟು-ಗಾದೆಗಳು 

*ಕರಕುಶಲ ಕಲೆಗಳು, ಗುಡಿ ಕೈಗಾರಿಕೆಗಳ ಚಿತ್ರಣ

*ಬಂಗಾಳಿ: ಆರ್ಯ ಭಾಷೆ

* ಕನ್ನಡ: ದ್ರಾವಿಡ ಭಾಷೆ12 ಮಕ್ಕಳ ಹಾಡುಗಳು, ನೃತ್ಯ (ಭರತನಾಟ್ಯ...) 

ಶಿಕ್ಷಕರು, ಸಂಶೋಧಕರು. ವಿದ್ಯಾರ್ಥಿಗಳು, ಎಲ್ಲರಿಗೂ ಈ ಅಧ್ಯಯನ ಸಾಮಗ್ರಿ ಉಪಯುಕ್ತವಾಗಿವೆ. ಪರಿಣಾಮಕಾರಿ ಬೋಧನೆಗೆ ಈ ಕಿರುಚಿತ್ರಗಳು ಉತ್ತಮ ವೇದಿಕೆ ಒದಗಿಸಲಿವೆ.  ಸಿ.ಡಿಗಳನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು ಹೆಸರಾಂತ ಪುಸ್ತಕ ಮಳಿಗೆಗಳು, ಸಿಡಿ ಅಂಗಡಿಗಳಲ್ಲಿ ದೊರೆಯುತ್ತಿವೆ. ಬೆಲೆಯು ದುಬಾರಿಯಾಗಿಲ್ಲ. ಶಿಕ್ಷಣ ಸಂಸ್ಥೆಗಳು ಈ ಕಿರುಚಿತ್ರಗಳನ್ನು ಪರ್ಯಾಯ ಬೋಧನಾ ಅಸ್ತ್ರಗಳಾಗಿ ಬಳಸಿಕೊಳ್ಳಬಹುದಾಗಿದೆ. ಒತ್ತಡದ ಜೀವನದಲ್ಲಿ ಮನೆಯಲ್ಲಿ ಮಕ್ಕಳ ಓದಿನ ಕಡೆಗೆ ಗಮನಹರಿಸಲಾಗುತ್ತಿಲ್ಲ ಎಂದು ಗೊಣಗುವ ಪೋಷಕರು ಕಿರುಚಿತ್ರಗಳ ಸಹಾಯದಿಂದ ಮಕ್ಕಳಿಗೆ ಸಿಕ್ಕ ಸಮಯದಲ್ಲೇ ಕಲಿಸಬಹುದು. ಇಂದಿನ ಇ-ಲರ್ನಿಂಗ್ ಯುಗದಲ್ಲಿ ಆನ್‌ಲೈನ್ ಬೋಧನೆಗೆ ಈ ಸಿ.ಡಿಗಳು ಸೂಪರ್ ಸಾಥ್ ನೀಡಲಿವೆ.   

 ಮಾಹಿತಿಗೆ : 0821-2512128/2345159 ಮೊ: 9448504664 ಅಥವಾ ವೆಬ್‌ಸೈಟ್http://www.ciil.org 

        

ಭಾಷೆಯಿಂದ ಪ್ರಪಂಚ ಪರ್ಯಟನೆ

‘ಪ್ರತಿಯೊಬ್ಬ ಭಾಷಿಕರಿಗೆ ತನ್ನದೇ ಭಾಷಾ ಲೋಕ ಇರುತ್ತದೆ. ಭಾಷಿಗರು ತಮ್ಮ ಭಾಷೆಯಲ್ಲಿ ಪ್ರಪಂಚ ಪರ್ಯಟನೆ ಮಾಡಲು ಸಾಧ್ಯವಾಗುವಂತೆ ‘ಭಾಷಾ ಮಂದಾಕಿನಿ’ ಯೋಜನೆ ರೂಪಿಸಲಾಗಿದೆ. ಇಗ್ನೊದ ‘ಗ್ಯಾನ್ ದರ್ಶನ್’ ವಾಹಿನಿಯಲ್ಲಿ ಕಂತುಗಳಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮ ಸರಣಿಯಲ್ಲಿ ನಾಲ್ಕು ಭಾಷೆಗಳ ನಾಡು, ನುಡಿ, ಸಂಪ್ರದಾಯ, ಬುಡಕಟ್ಟು, ಸಾರಸ್ವತಲೋಕದ ಬಾನಂಗಳವನ್ನು ಅನಕ್ಷರಸ್ಥರೂ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ವಿಶ್ಲೇಷಣಾತ್ಮಕ ವಿವರಣೆಯೊಂದಿಗೆ ಕಿರುಚಿತ್ರಗಳನ್ನು ರೂಪಿಸಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ 750 ಸಿ.ಡಿಗಳು ಸಿದ್ಧವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.