ಬುಧವಾರ, ನವೆಂಬರ್ 13, 2019
18 °C

ದೆಹಲಿಯಲ್ಲಿ ಠಿಕಾಣಿ

Published:
Updated:

ಬೆಂಗಳೂರು: ವೀರಣ್ಣ ಮತ್ತಿಕಟ್ಟಿ, ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಮಿತಿಯಲ್ಲಿ 56 ಸದಸ್ಯರಿದ್ದಾರೆ. ಆದರೆ, ಬುಧವಾರ ನಡೆದ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಮೊದಲ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರೇ ಭಾಗವಹಿಸಿರಲಿಲ್ಲ. ಬಹುತೇಕ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ದೊರಕಿಸಿಕೊಳ್ಳಲು ದೆಹಲಿಯಲ್ಲಿ ಠಿಕಾಣಿ ಹೂಡಿರುವುದು ಇದಕ್ಕೆ ಕಾರಣ.ಕೇಂದ್ರದ ಮಾಜಿ ಸಚಿವರಾದ ಎಸ್.ಎಂ.ಕೃಷ್ಣ, ಸಿ.ಕೆ.ಜಾಫರ್ ಷರೀಫ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಕೆ.ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಪ್ರಚಾರ ಸಮಿತಿ ಸದಸ್ಯರಾಗಿರುವ ಪ್ರಮುಖ ನಾಯಕರು ಸಭೆಯಿಂದ ದೂರ ಉಳಿದಿದ್ದರು. ಕೆಪಿಸಿಸಿ ಮೂಲಗಳ ಪ್ರಕಾರ, ಇವರಲ್ಲಿ ಬಹುತೇಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.ಮಾರ್ಚ್ 30ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ಮುಖಂಡರಲ್ಲಿ ಇತ್ತು. ಈ ಕಾರಣಕ್ಕಾಗಿಯೇ ಬುಧವಾರ ಪ್ರಚಾರ ಸಮಿತಿಯ ಸಭೆ ನಿಗದಿ ಮಾಡಲಾಗಿತ್ತು. ಆದರೆ, ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಅಂತಿಮಗೊಳಿಸದೇ ಇರುವುದರಿಂದ ಬಹುತೇಕ ನಾಯಕರು ದೆಹಲಿಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)