ಸೋಮವಾರ, ಜುಲೈ 26, 2021
21 °C

ದೆಹಲಿಯಲ್ಲಿ ಬೆಲೆ ದುಪ್ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ಈರುಳ್ಳಿ ಬೆಲೆ ಇಳಿಮುಖವಾಗುತ್ತಿರುವುದನ್ನು ಕಂಡು ಸರ್ಕಾರ ಮತ್ತು ಬಳಕೆದಾರರು ಕೊಂಚ ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ಇದೀಗ ಟೊಮೆಟೊ ಬೆಲೆ ಗಗನಕ್ಕೆ ಏರಲಾರಂಭಿಸಿದೆ.ಖಾದ್ಯಪ್ರಿಯರ ಅಚ್ಚುವೆುಚ್ಚಿನ ಟೊವೆುಟೊ ಬೆಲೆ ದುಪ್ಪಟ್ಟು ಆಗಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಜತೆಗೆ ಮಸಾಲೆಯುಕ್ತ ಆಹಾರದ ‘ರಾಜ’ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಬೆಳ್ಳುಳ್ಳಿ ಬೆಲೆ ಕೂಡ ಏರಿತ್ತಾದರೂ ಈಗ ಇಳಿಯಲು ಆರಂಭಿಸಿದೆ. ‘ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರ ಟೊಮೆಟೊ ರಫ್ತನ್ನೂ ನಿಷೇಧಿಸುವ ಸಾಧ್ಯತೆ ಇದೆ’ ಎಂದು ವಾಣಿಜ್ಯ ಸಚಿವ ಆನಂದ್ ಶರ್ಮ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

‘ವಾಣಿಜ್ಯ ಕಾರ್ಯದರ್ಶಿ ಮತ್ತು ವಿದೇಶಾಂಗ ವಾಣಿಜ್ಯ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಈರುಳ್ಳಿ, ಟೊಮೆಟೊ ಬೆಲೆ ಏರಿಕೆಗೆ ಅವುಗಳ ಅಕ್ರಮ ಸಂಗ್ರಹವೇ ಕಾರಣವಾಗಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ. 

  

‘ಬಹುತೇಕ ಟೊಮೆಟೊ ಉತ್ಪನ್ನ ದೇಶೀಯವಾಗೇ ಮಾರಾಟವಾಗುತ್ತದೆ. ಒಟ್ಟು ಉತ್ಪಾದನೆಯ ಕೇವಲ ಶೇ 1 ರಷ್ಟು ಮಾತ್ರ ನೆರೆಹೊರೆಯ ದೇಶಗಳಿಗೆ, ಅದರಲ್ಲೂ ಪಾಕಿಸ್ತಾನಕ್ಕೆ ರಫ್ತಾಗುತ್ತದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲಾರ್ ತಿಳಿಸಿದ್ದಾರೆ.ಕಳೆದ 10 ದಿನಗಳ ಹಿಂದೆ ರಾಷ್ಟ್ರದ ರಾಜಧಾನಿಯಲ್ಲಿ ಕೆ.ಜಿಗೆ 15-20 ರೂಪಾಯಿ ಇದ್ದ ಟೊಮೆಟೊ ಬೆಲೆ ಈಗ 40 ರೂಪಾಯಿಗೆ ಏರಿದೆ. ಪ್ರಮುಖ ಉತ್ಪಾದಕ ರಾಜ್ಯಗಳಾದ ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಅಕಾಲಿಕ ಮಳೆಯಿಂದ ಉತ್ಪಾದನೆ ಕುಂಠಿತಗೊಂಡು ಸರಬರಾಜಿನಲ್ಲಿ ವ್ಯತ್ಯಯ ಆಗಿರುವುದು ಈ ಬೆಳವಣಿಗೆಗೆ ಕಾರಣ. ಜನವರಿ ಮಧ್ಯಭಾಗದಲ್ಲಿ ಹೊಸ ಬೆಳೆ ಮಾರುಕಟ್ಟೆ ಪ್ರವೇಶಿಸಿದ ನಂತರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದುಅಧಿಕಾರಿಗಳು ಆಶಿಸಿದ್ದಾರೆ.ಆಮದು ಮುಂದೂಡಿಕೆ: ಬಳಕೆದಾರರಿಗೆ ‘ಕಣ್ಣೀರು’ ತರಿಸುತ್ತಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಸಹಕಾರ ಸಂಸ್ಥೆ ‘ನಾಫೆಡ್’ ಪಾಕಿಸ್ತಾನದಿಂದ ಮಾಡಿಕೊಳ್ಳಲು ಬಯಸಿದ್ದ ಈರುಳ್ಳಿ ಆಮದನ್ನು ಮುಂದಕ್ಕೆ ಹಾಕಿದೆ. ಸಂಸ್ಥೆಯ ಅಧ್ಯಕ್ಷ ಬಿಜೇಂದ್ರ ಸಿಂಗ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ‘ನಾಫೆಡ್’ ದೇಶದಿಂದ ರಫ್ತಾಗುವ ಈರುಳ್ಳಿಯ ನಿಯಂತ್ರಕ ಸಂಸ್ಥೆಯಾಗಿದೆ.ಸರ್ಕಾರದ ವಿಶ್ವಾಸ: ಈರುಳ್ಳಿ ಬೆಲೆ ಅತ್ಯಂತ ಶೀಘ್ರದಲ್ಲಿ ತಹಬಂದಿಗೆ ಬರಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಕಡಿಮೆ ಆವಕ ಇರುವ ಮಾರುಕಟ್ಟೆಗಳಿಗೆ ಈರುಳ್ಳಿ ಸಾಗಣೆ ಸೇರಿದಂತೆ ದಾಸ್ತಾನು ವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳುವುದಾಗಿ ಅದು ಭರವಸೆ ನೀಡಿದೆ.

 

‘ವಿವಿಧ ಪ್ರದೇಶಗಳಿಂದ ಈರುಳ್ಳಿಯನ್ನು ಅಗತ್ಯವಿರುವೆಡೆಗೆ ಸಾಗಿಸಲು ಕಾರ್ಯದರ್ಶಿಗಳ ಸಮಿತಿ ಸಭೆ ತೀರ್ಮಾನಿಸಿದೆ. ದಾಸ್ತಾನು ಕೊರತೆಯಿಂದ ಚಿಲ್ಲರೆ ಮಾರಾಟಕ್ಕೆ ತೀವ್ರ ಅಡಚಣೆ ಉಂಟಾಗಿರುವ ದೇಶದ ವಿವಿಧ ಭಾಗಗಳಿಗೆ ಈರುಳ್ಳಿ ಸಾಗಿಸಲು ಅಗತ್ಯವಾದ ಸೌಲಭ್ಯ ಒದಗಿಸಲು ರೈಲ್ವೆ ಒಪ್ಪಿದೆ. ಈರುಳ್ಳಿ ಬೆಲೆ ಇಳಿಕೆಗೆ ಅವಶ್ಯವಾದ ಎಲ್ಲ ಕ್ರಮಗಳನ್ನೂ ನಾವು ಕೈಗೊಳ್ಳುತ್ತೇವೆ’ ಎಂದು ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಪ್ರಮುಖ ಈರುಳ್ಳಿ ಉತ್ಪಾದಕ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಕರ್ನಾಟಕದಲ್ಲಿ ಇದ್ದುದರಲ್ಲಿ ಒಳ್ಳೆಯ ಉತ್ಪನ್ನ ಬಂದಿದ್ದು ಗುಜರಾತ್ ಸಹ ಹೆಚ್ಚಿನ ಈರುಳ್ಳಿ ಉತ್ಪಾದಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.ಕೆಲವೆಡೆ ಕೆ.ಜಿಗೆ 85 ರೂಪಾಯಿಯಂತೆ ಮಾರಾಟವಾಗುತ್ತಿದ್ದ ಬೆಲೆ ನಿಯಂತ್ರಣಕ್ಕಾಗಿ ಸರ್ಕಾರ ಈರುಳ್ಳಿ ಮೇಲಿನ ಕಸ್ಟಮ್ಸ್ ಮತ್ತು ಹೆಚ್ಚುವರಿ ಸುಂಕವನ್ನು ತೆಗೆದುಹಾಕಿದೆ. ದೆಹಲಿ ಮುಂತಾದ ಕಡೆ ಚಿಲ್ಲರೆ ದರದಲ್ಲಿ ಮಾರಾಟವಾಗುತ್ತಿದ್ದುದಕ್ಕಿಂತ ಕಡಿಮೆ ದರದಲ್ಲಿ ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ.

ಕಣ್ಣು ಕೆಂಪಾಗಿಸುತ್ತಿರುವ ಟೊವೆುಟೊ: ದೆಹಲಿಯ ಆಜಾದ್‌ಪುರ ಮಾರುಕಟ್ಟೆಯಲ್ಲಿ (ಏಷ್ಯಾದ ಅತಿ ದೊಡ್ಡ ಹಣ್ಣು ಮತ್ತು ತರಕಾರಿ ಮಂಡಿ) 10 ದಿನಗಳ ಹಿಂದೆ ಕೆ.ಜಿಗೆ 10- 15 ರೂಪಾಯಿ ಇದ್ದ ಟೊವೆುಟೊ ಸಗಟು ಬೆಲೆ ಈಗ 25-30 ರೂಪಾಯಿಗೆ ಏರಿದೆ ಎಂದು ಅಲ್ಲಿನ ಟೊವೆುಟೊ ವ್ಯಾಪಾರಿಗಳ ಸಂಘದ ಅಧ್ಯಕ್ಷ ದರ್ಶನ್ ಲಾಲ್ ಅರೋರ ಹಾಗೂ ಪ್ರಮುಖ ವ್ಯಾಪಾರಿ ವಿನೋದ್ ಚೌಹಾಣ್ ತಿಳಿಸಿದ್ದಾರೆ. ಇತರ ಪ್ರಮುಖ ನಗರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.‘ಆಕರ್ಷಕ ಹಣ ಗಳಿಸಲು ಟೊವೆುಟೊವನ್ನು ಬೃಹತ್ ಪ್ರಮಾಣದಲ್ಲಿ ಪಾಕಿಸ್ತಾನಕ್ಕೆ ಕಳುಹಿಸಿದ್ದೇ ಈ ಸ್ಥಿತಿಗೆ ಕಾರಣ’ ಎಂದು ಅವರು ದೂರಿದ್ದಾರೆ. ಗುಜರಾತ್ ಮತ್ತು ರಾಜಸ್ತಾನಗಳಿಂದ ಜನವರಿ 10ರ ನಂತರ ಹೊಸ ಉತ್ಪನ್ನ ಬಂದ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಬೆಳ್ಳುಳ್ಳಿ ಖಾ...ರ: ತಿಂಗಳ ಹಿಂದಷ್ಟೇ ದೆಹಲಿಯಲ್ಲಿ ಕೆ.ಜಿಗೆ 160- 180 ರೂಪಾಯಿಗೆ ಮಾರಾಟವಾಗಿದ್ದ ಬೆಳ್ಳುಳ್ಳಿ ಈಗ 250- 280 ರೂಪಾಯಿ ತಲುಪಿದೆ. 80- 120 ರೂಪಾಯಿ ಇದ್ದ ಸಗಟು ಬೆಲೆ, ಗುಣಮಟ್ಟವನ್ನು ಆಧರಿಸಿ 120- 180 ರೂಪಾಯಿಗೆ ಏರಿದೆ ಎಂದು ಆಜಾದ್‌ಪುರದ ಬೆಳ್ಳುಳ್ಳಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಜಿತೇಂದ್ರ ಖುರಾನ ತಿಳಿಸಿದ್ದಾರೆ.ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶಗಳಲ್ಲಿ ಶೇ 30ರಷ್ಟು ಉತ್ಪಾದನೆ ಕುಂಠಿತವಾಗಿದ್ದು, ಮಧ್ಯಪ್ರದೇಶದಿಂದ ಜನವರಿ 15ರ ಬಳಿಕ ರಾಜಧಾನಿಗೆ ಹೊಸ ದಾಸ್ತಾನು ಬರಲಾರಂಭಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಫ್ತಿಗೆ ಒಲವು (ಇಸ್ಲಾಮಾಬಾದ್ ವರದಿ): ಭಾರಿ ಪ್ರವಾಹದಿಂದ ಪಾಕಿಸ್ತಾನದಲ್ಲಿ ಈರುಳ್ಳಿ ಉತ್ಪಾದನೆ ಕುಂಠಿತಗೊಂಡು ದೇಶಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದರ ನಡುವೆಯೂ ಅಲ್ಲಿನ ವ್ಯಾಪಾರಿಗಳು ಭಾರತಕ್ಕೆ ರಫ್ತನ್ನು ಮುಂದುವರಿಸಿದ್ದಾರೆ.ಪಾಕಿಸ್ತಾನದ ವಾರ್ಷಿಕ ಈರುಳ್ಳಿ ಉತ್ಪಾದನೆ 5- 6 ದಶಲಕ್ಷ ಟನ್‌ಗಳಷ್ಟಾಗಿದ್ದು, ಪ್ರಸಕ್ತ ಸೀಸನ್‌ನಲ್ಲಿ ಸಿಂಧ್ ಪ್ರಾಂತ್ಯವೊಂದರಲ್ಲೇ 5- 6 ಲಕ್ಷ ಟನ್ ಬೆಳೆ ಹಾನಿಯಾಗಿದೆ. ಆದರೂ ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದಿಂದ ಈರುಳ್ಳಿ ಆಮದಿಗೆ ಮುಂದಾಗಿರುವ ಭಾರತ ಶೇ 7ರಷ್ಟು ಕಸ್ಟಮ್ಸ್ ಸುಂಕ ಹಿಂತೆಗೆದುಕೊಂಡಿರುವುದರಿಂದ ಅಲ್ಲಿನ ಬೆಳೆಗಾರರು ಉತ್ತೇಜಿತರಾಗಿದ್ದಾರೆ. ಹೀಗಾಗಿ ದೇಶಿ ಮಾರುಕಟ್ಟೆಗಿಂತ ಭಾರತಕ್ಕೆ ರಫ್ತು ಮಾಡುವುದಕ್ಕೇ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ.ಆದರೆ ಗಡಿಯಲ್ಲಿನ ದಟ್ಟ ಮಂಜು ಅವರ ಈ ಉತ್ಸಾಹಕ್ಕೆ ತಣ್ಣೀರೆರಚುತ್ತಿದೆ. ಅಟ್ಟಾರಿ- ವಾಘ ಮಾರ್ಗದ ಮೂಲಕ ಗುರುವಾರ ಕೇವಲ 34 ಲಾರಿಗಳಷ್ಟೇ (340 ಮೆಟ್ರಿಕ್ ಟನ್) ಭಾರತದ ಅಮೃತಸರವನ್ನು ಪ್ರವೇಶಿಸಿದವು. ಬುಧವಾರ 60 ಲಾರಿಗಳು 600 ಮೆಟ್ರಿಕ್ ಟನ್ ಈರುಳ್ಳಿಯನ್ನು ಹೊತ್ತು ತಂದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.