ಶುಕ್ರವಾರ, ನವೆಂಬರ್ 15, 2019
24 °C
ಪ್ರತಿಭಟನಕಾರ್ತಿಗೆ ಕಪಾಳಮೋಕ್ಷ: ಎಸಿಪಿ ಅಮಾನತು

ದೆಹಲಿ: ಐದು ವರ್ಷದ ಹಸುಳೆ ಮೇಲೆ ಅಮಾನವೀಯ ಅತ್ಯಾಚಾರ

Published:
Updated:

ನವದೆಹಲಿ (ಐಎಎನ್ಎಸ್): ಎರಡು ದಿನಗಳ ಕಾಲ ಅಮಾನವೀಯ ಅತ್ಯಾಚಾರಕ್ಕೆ ಗುರಿಯಾಗಿ, ಜೀವನ್ಮರಣ ಹೋರಾಟ ನಡೆಸುತ್ತಿರುವ ಐದು ವರ್ಷದ ಬಾಲಕಿಯನ್ನು ಚಿಕಿತ್ಸೆಗಾಗಿ ಲೋಕನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಶುಕ್ರವಾರ ತಿಳಿಸಿವೆ.'ಉತ್ತಮ ಚಿಕಿತ್ಸೆಗಾಗಿ ಬಾಲಕಿಯನ್ನು ಸ್ವಾಮಿ ದಯಾನಂದ ಆಸ್ಪತ್ರೆಯಿಂದ ಲೋಕನಾಯಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂದು ಮೂಲಗಳು ಐಎಎನ್ ಎಸ್ ಗೆ ತಿಳಿಸಿದವು.ಏಪ್ರಿಲ್ 15ರಂದು ಅಪಹರಣಗೊಂಡ ದಿನದಿಂದ ಬಾಲಕಿಯ ಮೇಲೆ ನೆರೆಮನೆಯಾತ ಹಲವಾರು ಸಲ ಅತ್ಯಾಚಾರ ಎಸಗಿದ್ದಾನೆ. ಎರಡು ದಿನಗಳಿಗೂ ಹೆಚ್ಚು ಕಾಲ ಆತ ಬಾಲಕಿಯನ್ನು ಪೂರ್ವ ದೆಹಲಿಯ ಗಾಂಧಿ ನಗರದ ತನ್ನ ಫ್ಲ್ಯಾಟಿನಲ್ಲಿ ಒತ್ತೆಸೆರೆ ಇಟ್ಟುಕೊಂಡು, ಆಕೆಗೆ ನೀರು, ಆಹಾರ ಕೊಡದೆ ಚಿತ್ರಹಿಂಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಅದೇ ಕಟ್ಟಡದ ಆವರಣದಲ್ಲೇ ಇದ್ದ ಕುಟುಂಬ ಸದಸ್ಯರು ಬಾಲಕಿಯ ಅಳು ಕೇಳಿ ಬುಧವಾರ ಸಂಜೆ ಆಕೆಯನ್ನು ರಕ್ಷಿಸಿದರು.'ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ನಮಗೆ ಆಕೆಯ ಗುಪ್ತಾಂಗದೊಳಕ್ಕೆ ತಳ್ಳಲಾಗಿದ್ದ 200 ಮಿ.ಲೀ. ಬಾಟಲಿ ಮತ್ತು ಕ್ಯಾಂಡಲ್ ನ ಎರಡು ಮೂರು ತುಂಡುಗಳು ಲಭಿಸಿದವು. ಐದು ವರ್ಷದ ಮಗುವಿನ ಜೊತೆಗೆ ಇಂತಹ ಬರ್ಬರ ಕೃತ್ಯ ಎಸಗಿದ್ದನ್ನು ನಾನು ಕಂಡದ್ದು ಇದೇ ಮೊದಲು' ಎಂದು ಸ್ವಾಮಿ ದಯಾನಂದ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಆರ್.ಕೆ. ಬನ್ಸಲ್ ವರದಿಗಾರರಿಗೆ ತಿಳಿಸಿದರು.'ಆಕೆಯ ತುಟಿ ಮತ್ತು ಗಲ್ಲಗಳಲ್ಲಿ ಗಾಯದ ಗುರುತುಗಳಿದ್ದವು. ಕತ್ತಿನ ಮೇಲೆ ಆಕೆಯ ಕತ್ತು ಬಿಗಿಯಲು ಯತ್ನಿಸಿದ್ದನ್ನು ತೋರಿಸುವ ಮೂಗೇಟಿನ ಗಾಯಗಳಿದ್ದವು. ಆಕೆಯ ರಕ್ತದೊತ್ತಡ ಮಾಮೂಲಿಗಿಂತ ತುಂಬಾ ಕೆಳಮಟ್ಟಕ್ಕೆ ಕುಸಿದಿತ್ತು. ಆಸ್ಪತ್ರೆಗೆ ದಾಖಲಾದಾಗ ಆಕೆ ತೀವ್ರ ಜ್ವರದಿಂದ ನರಳುತ್ತಿದ್ದಳು' ಎಂದು ಅವರು ನುಡಿದರು.ಕುಟುಂಬ ಸದಸ್ಯರ ಪ್ರಕಾರ ಘಟನೆ ಬಗ್ಗೆ ದೂರು ನೀಡಿದಾಗ ಅದನ್ನು ದಾಖಲಿಸಿಕೊಳ್ಳಲು ಪೊಲೀಸರೂ ನಿರಾಕರಿಸಿದರು ಎಂದು ಹೇಳಲಾಗಿದೆ.ಪ್ರತಿಭಟನಕಾರ್ತಿಗೆ ಕಪಾಳಮೋಕ್ಷ -ಎಸಿಪಿ ಅಮಾನತು: ಈ ಮಧ್ಯೆ ಘಟನೆಯನ್ನು ಖಂಡಿಸಿ ಸ್ವಾಮಿ ದಯಾನಂದ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತೆಯೊಬ್ಬರ ಕಪಾಳಕ್ಕೆ ಭಾರಿಸಿದರೆಂಬ ಕಾರಣಕ್ಕಾಗಿ ಎಸಿಪಿ ಬಿ.ಎಸ್. ಅಹಲ್ವತ್ ಅವರನ್ನು ತತ್ ಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಲಾಗಿದ್ದು, ಪ್ರಕರಣವನ್ನು ಇಲಾಖಾ ತನಿಖೆಗೆ ವಹಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ ನೀರಜ್ ಕುಮಾರ್ ತಿಳಿಸಿದ್ದಾರೆ

ಪ್ರತಿಕ್ರಿಯಿಸಿ (+)