ದೆಹಲಿ: ಓಡುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ, ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

7

ದೆಹಲಿ: ಓಡುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ, ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

Published:
Updated:

ನವದೆಹಲಿ (ಐಎಎನ್ಎಸ್): ಇಪ್ಪತ್ತರ ಹರೆಯದ ಅರೆ-ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಮೇಲೆ ಭಾನುವಾರ ರಾತ್ರಿ ಸಂಚರಿಸುತ್ತಿದ್ದ ಬಸ್ಸಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರ ಕೃತ್ಯ ನಡೆದಿದ್ದು, ವಿದ್ಯಾರ್ಥಿನಿ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಶಂಕಿತ ದಾಳಿಕೋರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.ವಿದ್ಯಾರ್ಥಿನಿಯ ಸ್ಥಿತಿ ಚಿಂತಾಜನಕವಾಗಿದ್ದು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಗಟ್ಟಿಯಾದ ವಸ್ತುವಿನಿಂದ ಹೊಡೆದ ಪರಿಣಾಮವಾಗಿ ಆಕೆಯ ಹೊಟ್ಟೆ ಮತ್ತು ಕರುಳಿನಲ್ಲಿ ತೀವ್ರ ಗಾಯದ ಗುರುತುಗಳಾಗಿವೆ ಎಂದು ವರದಿಗಳು ತಿಳಿಸಿವೆ.ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಅರೆ ವೈದ್ಯಕೀಯ ವಿದ್ಯಾರ್ಥಿ ಭಾನುವಾರ ರಾತ್ರಿ ಚಲನಚಿತ್ರವೊಂದನ್ನುವೀಕ್ಷಿಸಿ, ಮುನ್ರಿಕಾದಿಂದ ದ್ವಾರಕಾ ಕಡೆಗೆ ತೆರಳುವ ಬಸ್ಸು ಏರಿದ ಬಳಿಕ ಈ ಘಟನೆ ಸಂಭವಿಸಿದೆ.ಬಸ್ಸಿನಲ್ಲಿದ್ದ ಆರೇಳು ಮಂದಿ ಸಿಬ್ಬಂದಿ ವಿದ್ಯಾರ್ಥಿನಿಯ ಜೊತೆಗೆ ಅಸಭ್ಯ ವರ್ತನೆ ಆರಂಭಿಸಿದರು. ವಿದ್ಯಾರ್ಥಿನಿಯ ಗೆಳೆಯ ಮಧ್ಯಪ್ರವೇಶಿಸಿದಾಗ ಆತನ ಮೇಲೆ ಹಲ್ಲೆ ನಡೆಸಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಎಂದು ವರದಿಗಳು ಹೇಳಿವೆ.ದಕ್ಷಿಣ ದೆಹಲಿಯ ವಸಂತ ವಿಹಾರ ಪ್ರದೇಶದ ಮಹಿಪಾಲ್ ಪುರ ಬಳಿ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನನ್ನು ಬಸ್ಸಿನಿಂದ ಹೊರಕ್ಕೆ ಎಸೆಯಲಾಯಿತು ಎನ್ನಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್ ನಿಯಂತ್ರಣ ಕೊಠಡಿಯ ವ್ಯಾನೊಂದರಲ್ಲಿ ಇಬ್ಬರನ್ನೂ ಸಫ್ದರ್ ಜಂಗ್ ಆಸ್ಪತ್ರೆಗೆ ಒಯ್ದು ಸೇರಿಸಲಾಯಿತು.ವಿದ್ಯಾರ್ಥಿನಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಆಕೆಯ ಗೆಳೆಯನನ್ನು ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಳುಹಿಸಲಾಗಿದೆ. ಗೆಳೆಯನ ಹೇಳಿಕೆಯನ್ನು ಪಡೆದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅತ್ಯಾಚಾರ ಕೃತ್ಯದಲ್ಲಿ ಷಾಮೀಲಾದ ಶಂಕೆಯಲ್ಲಿ ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಎರಡು ಬಸ್ಸುಗಳನ್ನೂ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿಯ ಪರಿಸ್ಥಿತಿ ಬಗ್ಗೆ ವಿಚಾರಿಸಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಆಕೆಯ ಮೇಲೆ ದಾಳಿ ನಡೆಸಿದವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry