ಶುಕ್ರವಾರ, ಏಪ್ರಿಲ್ 23, 2021
24 °C

ದೆಹಲಿ ನಾಯಕರು ರಸ್ತೆ ಸುಂಕ ವಸೂಲಿಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಮೇಲೆ ಸವಾರಿ ಮಾಡುತ್ತಿದ್ದಾರೆ. ಬಿಜೆಪಿಯ ದೆಹಲಿ ನಾಯಕರು ಕೇವಲ ರಸ್ತೆ ಸುಂಕ ವಸೂಲಿ ಮಾಡುವವರು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಶನಿವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರ ಮತ್ತು ಭೂಹಗರಣದ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಅವರನ್ನು ಪ್ರಶ್ನಿಸುವ ನೈತಿಕತೆಯನ್ನೇ ಬಿಜೆಪಿ ಹೈಕಮಾಂಡ್ ಕಳೆದುಕೊಂಡಿದೆ’ ಎಂದರು.ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ದ ಮೂಲಕ ವಾಮಮಾರ್ಗದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಶಾಸಕರ ಖರೀದಿ ನಡೆಸಿದ ಆ ಪಕ್ಷ, ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕರ್ನಾಟಕ ಹಿಮ್ಮುಖವಾಗಿ ಸಾಗುತ್ತಿದೆ ಎಂದು ದೂರಿದರು.‘ಆಂಧ್ರಪ್ರದೇಶ ಮತ್ತು ಒಡಿಶಾ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇನೆ. ಹಿಂದೆ ಎಲ್ಲ ರಾಜ್ಯಗಳ ಜನರೂ ಕರ್ನಾಟಕದ ರಾಜಕಾರಣಿಗಳನ್ನು ಗೌರವಿಸುತ್ತಿದ್ದರು. ಆದರೆ ಬಿಜೆಪಿ ಸರ್ಕಾರದ ಹಗರಣಗಳು ಮತ್ತು ಅಕ್ರಮಗಳಿಂದಾಗಿ ನಮ್ಮ ರಾಜ್ಯದ ಬಗೆಗಿನ ಅಭಿಪ್ರಾಯ ಬದಲಾಗಿದೆ. ಕರ್ನಾಟಕದ ವರ್ಚಸ್ಸಿಗೆ ಮಸಿ ಬಳಿದಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದೇ ನಮ್ಮ ಗುರಿ’ ಎಂದು ಹೇಳಿದರು.ರಕ್ಷಣೆ ನೀಡಿಲ್ಲ: ಪತನದ ಹಾದಿಯಲ್ಲಿದ್ದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‌ನ ಕೆಲ ಮುಖಂಡರು ರಕ್ಷಿಸಿದ್ದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನ ಯಾವುದೇ ಮುಖಂಡರು ಬಿಜೆಪಿ ಸರ್ಕಾರಕ್ಕೆ ರಕ್ಷಣೆ ನೀಡಿಲ್ಲ. ಆ ಹಂತದಲ್ಲಿ ಶಾಸಕರ ಬೆಂಬಲ ಇದ್ದ ಕಾರಣ ಸರ್ಕಾರ ಉಳಿದುಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಉರುಳಿಸುವುದು ಮತ್ತು ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವುದು ಬೇರೆ ಬೇರೆ. ಕಾಂಗ್ರೆಸ್ ಯಾವಾಗಲೂ ಸರ್ಕಾರವನ್ನು ಉರುಳಿಸಲು ಬಯಸುವುದಿಲ್ಲ’ ಎಂದರು.‘ಜೆಡಿಎಸ್ ಒಂದು ಜಗಳಗಂಟ ಪಕ್ಷ. ಜಗಳದ ಮೂಲಕವೇ ಬಿಜೆಪಿ ಸರ್ಕಾರವನ್ನು ಬೀಳಿಸಬಹುದು ಎಂಬ ಭ್ರಮೆ ಹೊಂದಿದೆ’ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭವಿಷ್ಯದ ಯಾವುದೇ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.ಯಾರಿಂದಲೂ ಅಡ್ಡಿ ಇಲ್ಲ: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಗೊಂದಲದ ಬಗ್ಗೆ ಉತ್ತರಿಸಿದ ಹರಿಪ್ರಸಾದ್, ‘2001-02ರಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿತ್ತು. ನಂತರ ಕೆಪಿಸಿಸಿ ಅಧ್ಯಕ್ಷರಾದ ಕೆಲವರು ಹಾಲಿ ಪದಾಧಿಕಾರಿಗಳನ್ನೇ ಮುಂದುವರಿಸಲು ಒಲವು ತೋರಿದ್ದರು. ಈಗ ಡಾ.ಜಿ.ಪರಮೇಶ್ವರ್ ನೂತನ ಪಟ್ಟಿ ಸಿದ್ಧಪಡಿಸುತ್ತಿದ್ದು, ಎಐಸಿಸಿ ಒಪ್ಪಿಗೆ ದೊರೆತ ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ’ ಎಂದರು.‘ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವಲ್ಲಿ ಕೆಪಿಸಿಸಿ ಅಧ್ಯಕ್ಷರೇ ಅಂತಿಮ. ಅವರು ನೀಡುವ ಪಟ್ಟಿ ಸಮರ್ಪಕವಾಗಿದ್ದರೆ ಎಐಸಿಸಿ ಒಪ್ಪಿಗೆ ನೀಡುತ್ತದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ವಿರುದ್ಧವಾಗಿ ದೆಹಲಿಯಲ್ಲಿರುವ ಕಾಂಗ್ರೆಸ್ ಮುಖಂಡರು ಪಟ್ಟಿಯಲ್ಲಿ ಬದಲಾವಣೆ ಮಾಡಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.ಬೆದರು ಬೊಂಬೆ: ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರ ಜಗನ್‌ಮೋಹನ್ ರೆಡ್ಡಿ ನೂತನ ಪಕ್ಷ ಸ್ಥಾಪಿಸಿರುವ ಕುರಿತು ಪ್ರಶ್ನಿಸಿದಾಗ, ‘ಜಗನ್ ಮೋಹನ್ ರಾಜಕೀಯದಲ್ಲಿ ಇನ್ನೂ ಎಳೆಯ ಬಾಲಕ. ಅವರು ಒಂದು ಬೆದರು ಬೊಂಬೆ. ಕಾಂಗ್ರೆಸ್ ಸರ್ಕಾರವನ್ನು ಹೆದರಿಸಲು ಅವರಿಂದ ಸಾಧ್ಯವಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.