ದೆಹಲಿ ಪಾಲಂ ಮಡಿಲಿಗೆ ಕಬಡ್ಡಿ ಶೋಲೆ ಕಪ್

7

ದೆಹಲಿ ಪಾಲಂ ಮಡಿಲಿಗೆ ಕಬಡ್ಡಿ ಶೋಲೆ ಕಪ್

Published:
Updated:

ರಾಮನಗರ: ಅಖಿಲ ಭಾರತ `ಎ~ ಗ್ರೇಡ್ ಆಹ್ವಾನಿತ ಕಬಡ್ಡಿ ಟೂರ್ನಿಯ (ಶೋಲೆ ಕಪ್-2012) ಮಹಿಳಾ ವಿಭಾಗದಲ್ಲಿ ದೆಹಲಿಯ ಪಾಲಂ ಸ್ಪೋರ್ಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದೆಹಲಿ ತಂಡ ಪಶ್ಚಿಮ ರೈಲ್ವೆ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ತೀವ್ರ ಹಣಾಹಣಿಯಿಂದ ಕೂಡಿದ್ದ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ದೆಹಲಿ ಮತ್ತು ಪಶ್ಚಿಮ ರೈಲ್ವೆ ತಂಡ ಕ್ರಮವಾಗಿ 8-6 ಅಂಕಗಳನ್ನು ಪಡೆದಿದ್ದವು. ದೆಹಲಿ ತಂಡ ಎರಡು ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು. ಕೊನೆಯ ಸುತ್ತಿನಲ್ಲಿ ಅಂತಿಮವಾಗಿ ಎರಡೂ ತಂಡಗಳು 11- 11 ಅಂಕಗಳೊಂದಿಗೆ ಸಮಬಲ ಪ್ರದರ್ಶನ ಮಾಡಿದವು.ಆಗ ನಿಯಮದ ಪ್ರಕಾರ ಎರಡೂ ತಂಡಗಳಿಗೆ 5 ದಾಳಿಗಳನ್ನು ನೀಡಲಾಯಿತು. ಅದರಲ್ಲಿ ದೆಹಲಿ ತಂಡವು 6-5 ಅಂಕಗಳಲ್ಲಿ ಪಶ್ಚಿಮ ರೈಲ್ವೆ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶೋಲೆ ಕಪ್‌ನ ಚಾಂಪಿಯನ್‌ಶಿಪ್ ಜತೆಗೆ ದೆಹಲಿ ತಂಡ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಪಡೆಯಿತು.ಸೆಮಿನಲ್ಸ್: ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್‌ನಲ್ಲಿ ದೆಹಲಿ ತಂಡವು 12-9 ಅಂಕಗಳಿಂದ ಕರ್ನಾಟಕದ ಆಳ್ವಾಸ್ ತಂಡವನ್ನು ಹಾಗೂ ಪಶ್ಚಿಮ ರೈಲ್ವೆ ತಂಡವು  15-13 ಅಂಕಗಳಿಂದ ಪೂನಾ ತಂಡವನ್ನು ಸೋಲಿಸಿ ಅಂತಿಮ ಹಂತ ಪ್ರವೇಶಿಸಿದ್ದವು.ಪುರುಷರ ವಿಭಾಗ: ಗೆಲುವಿನ ಓಟವನ್ನು ಮುಂದುವರೆಸಿರುವ ಎಸ್‌ಬಿಎಂ ಹಾಗೂ ಕೆಪಿಟಿಸಿಎಲ್ ಪುರುಷರ ಕಬಡ್ಡಿ ತಂಡಗಳು `ಶೋಲೆ ಕಪ್~ ಫೈನಲ್ ಪ್ರವೇಶಿಸಿದವು.ರೋಚಕವಾಗಿದ್ದ ಸೆಮಿಫೈನಲ್ ಪಂದ್ಯದಲ್ಲಿ ಕೆಪಿಟಿಸಿಎಲ್ ತಂಡ 21-16 ಅಂಕಗಳಲ್ಲಿ ರೈಲ್ವೆ ಗಾಲಿ ಕಾರ್ಖಾನೆ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಎಸ್‌ಬಿಎಂ ತಂಡವು ಎಚ್‌ಎಎಲ್ ತಂಡವನ್ನು 28- 12 ಅಂಕಗಳಿಂದ ಮಣಿಸಿ ಅಂತಿಮ ಸುತ್ತು ಪ್ರವೇಶಿಸಿತು.ಸೆಮಿಫೈನಲ್ ಪಂದ್ಯಗಳನ್ನು ವೀಕ್ಷಿಸಿದ ನಟ ವಿಜಯ್ ಅವರು, `ಕಬಡ್ಡಿ ಗ್ರಾಮೀಣ ಕ್ರೀಡೆಯಾಗಿದ್ದು, ಇದರ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ದೊರೆಯಬೇಕಿದೆ. ರಾಮನಗರದಲ್ಲಿ ರಾಷ್ಟ್ರಮಟ್ಟದ ಕಬಡ್ಡಿಯನ್ನು ಸಮರ್ಥಕವಾಗಿ ಆಯೋಜಿಸಿರುವುದು ಸಂತಸ ತಂದಿದೆ. ಇಂತಹ ಹಲವು ಪಂದ್ಯಗಳು ಈ ಭಾಗದಲ್ಲಿ ನಡೆಯುವಂತಾಗಲಿ. ಗ್ರಾಮೀಣ ಪ್ರದೇಶದ ಹುಲಿ ಆಟವೆಂದೇ ಪ್ರಸಿದ್ಧಿಯಾಗಿರುವ ಕಬಡ್ಡಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುವಂತಾಗಲಿ~ ಎಂದು ಆಶಿಸಿದರು.ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, ಗಂಡು ಮಕ್ಕಳ ಕ್ರೀಡೆ ಎಂದೇ ಪ್ರಸಿದ್ಧವಾಗಿದ್ದ ಕಬಡ್ಡಿಯನ್ನು ಇಂದಿನ ದಿನಗಳಲ್ಲಿ ಮಹಿಳೆಯರೂ ಸರಿ ಸಮಾನವಾಗಿ ಆಡುತ್ತ ತಮ್ಮ ಸಾಮರ್ಥ್ಯ ತೋರುತ್ತಿರುವುದು ಅಭಿನಂದನೀಯ. ಕಬಡ್ಡಿ ಪಂದ್ಯಗಳು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಾಗ ಮಾತ್ರ ನಮ್ಮೆಲ್ಲರಿಗೂ ನಮ್ಮದಿ ಬರುತ್ತದೆ~ ಎಂದು ಅವರು ಹೇಳಿದರು.ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಬಿಜೆಪಿ ಮುಖಂಡ ಗಿರಿಗೌಡ, ಮುಖಂಡ ಪಾರ್ಥಸಾರಥಿ ಮೊದಲಾದವರು ಉಪಸ್ಥಿತರಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರು ಗ್ಯಾಲರಿಯಿಂದ ಪಂದ್ಯಾವಳಿಗಳನ್ನು ವೀಕ್ಷಿಸಿ, ಕೇಕೆ ಹಾಕಿ ಸಂಭ್ರಮಿಸಿ, ಕಬಡ್ಡಿಯನ್ನು ಸವಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry