ಮಂಗಳವಾರ, ಮೇ 18, 2021
24 °C

ದೆಹಲಿ ಪೊಲೀಸರಿಂದ ಕುಂದ್ರಾ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿದ ದೆಹಲಿ ಪೊಲೀಸರು ಬುಧವಾರ ಮಾಹಿತಿ ಪಡೆದರು.ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಹೊತ್ತಿರುವ ರಾಯಲ್ಸ್ ತಂಡ ಶ್ರೀಶಾಂತ್, ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಅವರ ಜೊತೆಗಿನ ಒಪ್ಪಂದದ ಬಗ್ಗೆ ಪೊಲೀಸರು ವಿವರ ಪಡೆದುಕೊಂಡರು. ಲೋಧಿ ರಸ್ತೆಯಲ್ಲಿರುವ ದೆಹಲಿ ಪೊಲೀಸ್‌ನ ವಿಶೇಷ ಘಟಕ ಕಚೇರಿಗೆ ಬುಧವಾರ ಬೆಳಿಗ್ಗೆ ಬಂದು ಕುಂದ್ರಾ ವಿಚಾರಣೆಗೆ ಒಳಗಾದರು.ಕೆಲವು ವಾರಗಳ ಹಿಂದೆ ಪೊಲೀಸರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಮತ್ತು ಐಪಿಎಲ್ ಸಿಇಒ ಸುಂದರ್ ರಾಮನ್ ಅವರಿಂದ ಐಪಿಎಲ್ ತಂಡಗಳ ಮತ್ತು ಆಟಗಾರರ ನಡುವಿನ ಕರಾರು ಮತ್ತು ಒಪ್ಪಂದಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಕುಂದ್ರಾರಿಂದ ಮಾಹಿತಿ ಪಡೆಯುವ ವೇಳೆ ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಹಾಗೂ ಸಾಕ್ಷಿದಾರ ಆಗಿರುವ ಸಿದ್ಧಾರ್ಥ್ ತ್ರಿವೇದಿ ಕೂಡಾ ದೆಹಲಿ ಪೊಲೀಸ್‌ನ ವಿಶೇಷ ಘಟಕ ಕಚೇರಿಗೆ ಬಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾದರು.ಶ್ರೀಶಾಂತ್ ಮತ್ತು ಇತರೆ 22 ಮಂದಿ ವಿರುದ್ಧ ದೆಹಲಿ ಪೊಲೀಸರು ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವೇಗಿ ಶ್ರೀಶಾಂತ್, ಚಾಂಡಿಲಾ ಅವರನ್ನು ಜೂನ್ 18ರ ವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 26 ಜನರನ್ನು ಬಂಧಿಸಿದ್ದಾರೆ. ವಿವಾಹ ಕಾರಣಕ್ಕಾಗಿ ಅಂಕಿತ್‌ಗೆ ಜೂನ್ 6ರ ವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ಕೇರಳದ ಆಟಗಾರ ಶ್ರೀಶಾಂತ್ ಗೆಳೆಯ ಅಭಿಷೇಕ್ ಶುಕ್ಲಾ ಅವರಿಗೆ ಜಾಮೀನು ಲಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.