ಶುಕ್ರವಾರ, ನವೆಂಬರ್ 22, 2019
23 °C

ದೆಹಲಿ ಬಾಲೆಗೆ ಶಸ್ತ್ರಚಿಕಿತ್ಸೆ: ಆರೋಗ್ಯ ಸ್ಥಿರ, ಚೇತರಿಕೆ

Published:
Updated:

ನವದೆಹಲಿ (ಐಎಎನ್ಎಸ್): ರಾಜಧಾನಿಯಲ್ಲಿ ಅಮಾನವೀಯ ಅತ್ಯಾಚಾರಕ್ಕೆ ಗುರಿಯಾದ ಐದು ವರ್ಷದ ಬಾಲಕಿಯ ಆರೋಗ್ಯ ಶಸ್ತ್ರಚಿಕಿತ್ಸೆಯ ಬಳಿಕ ಸ್ಥಿರವಾಗಿದೆ ಎಂದು ವೈದ್ಯರು ಭಾನುವಾರ ಇಲ್ಲಿ ತಿಳಿಸಿದರು.'ಆಕೆಯ ದೇಹಸ್ಥಿತಿ ಸ್ಥಿರವಾಗಿದೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾಳೆ' ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ವೈದ್ಯಕೀಯ ಮೇಲ್ವಿಚಾರಕ ಡಿ.ಕೆ. ಶರ್ಮಾ ವರದಿಗಾರರಿಗೆ ತಿಳಿಸಿದರು.'ಅಕೆಯ ಅಂಗಾಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರಾಣಾಪಾಯದಿಂದ ಆಕೆ ಪಾರಾಗಿದ್ದಾಳೆ. ಪ್ರಜ್ಞಾವಸ್ಥೆಯಲ್ಲಿದ್ದು ಹೆತ್ತವರು ಮತ್ತು ವೈದ್ಯರ ಜೊತೆ ಮಾತನಾಡುತ್ತಿದ್ದಾಳೆ. ಆದರೆ ಅತ್ಯಲ್ಪ ಜ್ವರ ಆಕೆಯನ್ನು ಬಾಧಿಸುತ್ತಿದೆ' ಎಂದು ಶರ್ಮಾ ಹೇಳಿದರು.'ಬಾಲಕಿ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾಳೆ. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ದಾಳೆ. ಔಷಧಗಳಿಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾಳೆ' ಎಂದು ಅವರು ನುಡಿದರು.ನೆರೆಮನೆಯ 22ರ ಹರೆಯದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ದೊಡ್ಡ ಕರುಳಿನ ಕೊನೆಭಾಗದಲ್ಲಿ ಕೃತಕ ಮಲವಿಸರ್ಜನೆ ವ್ಯವಸ್ಥೆಗೆ ಅನುಕೂಲವಾಗುವಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.ಬಾಲಕಿಗೆ ತನಗೇನಾಗಿದೆ ಎಂಬುದರ ಅರಿವು ಉಂಟಾಗಿದೆಯೇ ಎಂಬ ಪ್ರಶ್ನೆಗೆ 'ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಕಿರಿಯ ವಯಸ್ಸು ಆಕೆಯದು' ಎಂದು ವೈದ್ಯರು ಉತ್ತರಿಸಿದರು.'ಆಕೆ ಭಯಪಟ್ಟುಕೊಂಡಿದ್ದಾಳೆ ಎಂದು ನಾನು ಹೇಳಲಾರೆ. ತನ್ನ ಪರಿಸ್ಥಿತಿಯ ತೀವ್ರತೆ ಏನು ಎಂಬುದು ಅರಿವಾಗದಷ್ಟು ಪುಟ್ಟ ಹುಡುಗಿ ಆಕೆ' ಎಂದು ಅವರು ನುಡಿದರು.

ಪ್ರತಿಕ್ರಿಯಿಸಿ (+)