ಶನಿವಾರ, ನವೆಂಬರ್ 23, 2019
17 °C

ದೆಹಲಿ: ಮುಂದುವರಿದ ಪ್ರತಿಭಟನೆ, ಮೆಟ್ರೋ ನಿಲ್ದಾಣಗಳು ಬಂದ್

Published:
Updated:
ದೆಹಲಿ: ಮುಂದುವರಿದ ಪ್ರತಿಭಟನೆ, ಮೆಟ್ರೋ ನಿಲ್ದಾಣಗಳು ಬಂದ್

ನವದೆಹಲಿ (ಪಿಟಿಐ): ಅತ್ಯಾಚಾರಕ್ಕೆ ತುತ್ತಾದ ದೆಹಲಿಯ ಐದು ವರ್ಷದ ಬಾಲಕಿಗೆ ನ್ಯಾಯ ಒದಗಿಸಬೇಕು ಮತ್ತು ಪೊಲೀಸ್ ಕಮೀಷನರ್ ನೀರಜ್ ಕುಮಾರ್ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನಕಾರರು ದೆಹಲಿ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸೋಮವಾರ ಮೂರನೇ ದಿನ ಸತತ ಪ್ರತಿಭಟನಾ ಪ್ರದರ್ಶನ ನಡೆಸಿದರು.ಈ ಮಧ್ಯೆ ಸಂಭವನೀಯ ಡಿಸೆಂಬರ್ ಮಾದರಿ ಪ್ರತಿಭಟನೆಗಳನ್ನು ತಡೆಯಲು ಪೊಲೀಸರು ಸಂಸತ್ ಭವನದ ಬಳಿ ಅಡ್ಡಗಟ್ಟೆಗಳನ್ನು ನಿರ್ಮಿಸಿದ ಪರಿಣಾಮವಾಗಿ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ರೇಸ್ ಕೋರ್ಸ್ ರಸ್ತೆ, ಕೇಂದ್ರ ಸಚಿವಾಲಯ ಮತ್ತು ಸಂಸತ್ ಭವನಕ್ಕೆ ಸಮೀಪದ ಉದ್ಯೋಗಭವನ, ಇಂಡಿಯಾ ಗೇಟ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ನಿವಾಸಕ್ಕೆ ಸಮೀಪದಲ್ಲಿನ ಮೂರು ಮೆಟ್ರೋ ನಿಲ್ದಾಣಗಳನ್ನು ಪ್ರತಿಭಟನಾ ಪ್ರದರ್ಶನ ತಡೆಯುವ ಸಲುವಾಗಿ ಪೊಲೀಸರು ಮೊದಲೇ ಮುಚ್ಚಿದರು.ಸೋಮವಾರ ಸಂಸತ್ತಿನ ಮುಂಗಡಪತ್ರ ಸಮಾವೇಶ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಯಿತು.

ಏನಿದ್ದರೂ ಕಳೆದ ಮೂರು ದಿನಗಳಲ್ಲಿ ಬೆಳಗಿನ ವೇಳೆಯಲ್ಲಿ ಏಮ್ಸ್ ಬಳಿ ಯಾವುದೇ ಪ್ರತಿಭಟನೆಗಳು ಕಂಡು ಬರಲಿಲ್ಲ.ಪೊಲೀಸರು ರೆಡ್ ಕ್ರಾಸ್ ರಸ್ತೆ, ರಫಿ ಮಾರ್ಗ, ರೈಸೀನಾ ಹಿಲ್ಸ್ ರಸ್ತೆ ಮತ್ತು ರಾಜಪಥದ ಕೆಲವು ಅಡ್ಡರಸ್ತೆಗಳನ್ನು ಮುಚ್ಚಿದ ಪರಿಣಾಮವಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮಾನ್ ಸಿಂಗ್ ರಸ್ತೆಯಲ್ಲಿ ಪೊಲೀಸರು ಅಡ್ಡಗಟ್ಟೆಗಳನ್ನು ಹಾಕಿದ ಪರಿಣಾಮವಾಗಿ ಇಂಡಿಯಾ ಗೇಟ್ ಬಳಿ ವಾಹನ ಸಂಚಾರ ಅಲ್ಲೋಲಕಲ್ಲೋಲಗೊಂಡಿತು.ಇಂಡಿಯಾಗೇಟ್ ನತ್ತ ಸಾಗುವ ರಸ್ತೆಗಳಲ್ಲಿ ವಾಹನಗಳ ದೊಡ್ಡ ದೊಡ್ಡ ಸಾಲುಗಳು ಕಂಡು ಬಂದವು.ಈ ಮಧ್ಯೆ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಯ (ಎಎಪಿ) ಸದಸ್ಯರು ದೆಹಲಿ ಪೊಲೀಸ್ ಕೇಂದ್ರ ಕಚೇರಿ ಮತ್ತು ಐಟಿಒ ಬಳಿ ಈದಿನ ಬೆಳಗ್ಗೆ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರು. ಪೊಲೀಸ್ ಕೇಂದ್ರ ಕಚೇರಿ ಬಳಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)