ಗುರುವಾರ , ಮಾರ್ಚ್ 4, 2021
29 °C

ದೆಹಲಿ ಸರ್ಕಾರ: ಪಕ್ಷೇತರ ಶಾಸಕ ಶೊಕೀನ್ ಬೆಂಬಲ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ ಸರ್ಕಾರ: ಪಕ್ಷೇತರ ಶಾಸಕ ಶೊಕೀನ್ ಬೆಂಬಲ ವಾಪಸ್

ನವದೆಹಲಿ (ಪಿಟಿಐ): ಆಮ್ ಆದ್ಮಿ ಪಕ್ಷದಿಂದ (ಎಎಪಿ) ಉಚ್ಚಾಟಿತರಾದ ವಿನೋದ ಕುಮಾರ್ ಬಿನ್ನಿ ಬಳಿಕ ಈಗ ಇನ್ನೊಬ್ಬ ಪಕ್ಷೇತರ ಶಾಸಕ ರಂಬೀರ್ ಶೊಕೀನ್ ಅವರು ತಾವು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಸೋಮವಾರ ಪ್ರಕಟಿಸಿದರು.ಚುನಾವಣೆ ಕಾಲದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರವು ವಿಫಲವಾಗಿರುವ ಕಾರಣ ತಾವು ಅದಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುತ್ತಿರುವುದಾಗಿ ಶೊಕೀನ್ ನುಡಿದರು.ಮುಂಡ್ಕಾ ಕ್ಷೇತ್ರದ ಶಾಸಕರಾದ ಶೊಕೀನ್ ತಾವು ಈದಿನ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸಾತಿಯ ನಿರ್ಧಾರವನ್ನು ತಿಳಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕರೆಯುವುದಾಗಿ ಹೇಳಿದರು.ದೆಹಲಿಯಲ್ಲಿನ ವಿದ್ಯುತ್ ಮತ್ತು ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಹಲವಾರು ದಿನಗಳಾದರೂ ಈ ಬಗ್ಗೆ ಗಮನ ಹರಿಸಲು ಅವರು ವಿಫಲರಾಗಿದ್ದಾರೆ ಎಂದು ಶೊಕೀನ್ ನುಡಿದರು.ಗ್ರಾಮಗಳ ಮೇಲಿನ ಅನಗತ್ಯ ನಿಯಂತ್ರಣಗಳ ನಿವಾರಣೆ, 'ಲಾಲ್ ದೋರಾ' ಗಡಿಗಳ ವಿಸ್ತರಣೆ ಮತ್ತು ನೀರಿನ ವಿಷಯದ ನೆಲೆಯಲ್ಲಿ ನಾವು ಎಎಪಿಗೆ ಬೆಂಬಲ ನೀಡಿದ್ದೆವು. ಆದರೆ ಅವರು ಈ ಎಲ್ಲ ರಂಗಗಳಲ್ಲೂ ವಿಫಲರಾಗಿದ್ದಾರೆ ಎಂದು ಪಕ್ಷೇತರ ಶಾಸಕ ಹೇಳಿದರು.'ಫೆಬ್ರುವರಿ 4ರಂದು ನಾನು, ಬಿನ್ನಿ ಮತ್ತು ಜೆಡಿ(ಯು) ಶಾಸಕ ಶೋಯಿಬ್ ಇಕ್ಬಾಲ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೆವು.  ವಾರದೊಳಗೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಾರಂಭ ಮಾಡುವುದಾಗಿ ಅವರು ನಮಗೆ ಭರವಸೆ ನೀಡಿದರು. ಆದರೆ ಈವರೆಗೆ ಏನೂ ಮಾಡಿಲ್ಲ. ನಾನು ಕೇಜ್ರಿವಾಲ್ ಜಿ ಅವರಿಗೆ ದೂರವಾಣಿ ಕೂಡಾ ಮಾಡಿದೆ. ಅವರು ಅದಕ್ಕೆ ಸ್ಪಂದಿಸಲಿಲ್ಲ, ಮರು ಕರೆಯನ್ನೂ ಮಾಡಲಿಲ್ಲ. ಆದ್ದರಿಂದ ನಾನು ಬೆಂಬಲ ಹಿಂತೆಗೆದುಕೊಳ್ಳಲು ನಿರ್ಧರಿಸಿದೆ' ಎಂದು ಶೊಕೀನ್ ನುಡಿದರು.ಏನಿದ್ದರೂ ಇಕ್ಬಾಲ್ ಅವರು ತಾವು ಎಎಪಿ ಸರ್ಕಾರಕ್ಕೆ ಬೆಂಬಲ ಮುಂದುವರೆಸುವುದಾಗಿ ಸೋಮವಾರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.