ದೆಹಲಿ ಸ್ಫೋಟ: ಜಾಗತಿಕ ಪ್ರಮುಖರ ಖಂಡನೆ

ಸೋಮವಾರ, ಮೇ 27, 2019
29 °C

ದೆಹಲಿ ಸ್ಫೋಟ: ಜಾಗತಿಕ ಪ್ರಮುಖರ ಖಂಡನೆ

Published:
Updated:

ವಾಷಿಂಗ್ಟನ್(ಪಿಟಿಐ/ಐಎಎನ್‌ಎಸ್): ದೆಹಲಿ ಹೈಕೋರ್ಟ್ ಆವರಣದಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ವಿಶ್ವಸಂಸ್ಥೆ, ಭದ್ರತಾ ಮಂಡಳಿ, ಐರೋಪ್ಯ ಒಕ್ಕೂಟ, ಚೀನಾ ಹಾಗೂ ಇಂಡೊನೇಷ್ಯಾ, ಮೃತರಿಗೆ ಸಂತಾಪ ಸೂಚಿಸಿ, ಭಾರತಕ್ಕೆ ಪ್ರತ್ಯೇಕ ಸಂದೇಶಗಳನ್ನು ಕಳುಹಿಸಿವೆ.`ಸ್ಫೋಟವನ್ನು ಶ್ವೇತಭವನ ಬಲವಾಗಿ ಖಂಡಿಸುತ್ತದೆ. ಇಂತಹ ಕ್ಲಿಷ್ಟ ಕಾಲದಲ್ಲಿ ತಮ್ಮ ದೇಶವು ಭಾರತದ `ಆಪ್ತ ಮಿತ್ರ~ನಾಗಿ ನಿಲ್ಲಲಿದೆ~ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಟಾಮಿ ವೀಟರ್ ತಿಳಿಸಿದ್ದಾರೆ.

ನಿರಪರಾಧಿ ಜನರ ವಿರುದ್ಧ ಉಗ್ರರು ದಾಳಿ ಮತ್ತು ಹಿಂಸಾಚಾರ ನಡೆಸುತ್ತಿರುವುದಕ್ಕೆ ಯಾವುದೇ ಸಕಾರಣಗಳಿಲ್ಲ. ಈ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವ ಭಾರತದ ಪ್ರಯತ್ನಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಿ ಅಮೆರಿಕ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದಿದ್ದಾರೆ.ಇದಕ್ಕೂ ಮುನ್ನ, ಸ್ಫೋಟವನ್ನು ಖಂಡಿಸಿರುವ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ವಿಕ್ಟೋರಿಯಾ ನುಲಂದ್, ಹೇಡಿಗಳು ನಡೆಸಿರುವ ದಾಳಿ ಮತ್ತು ಭೀಕರ ಹಿಂಸಾಚಾರವನ್ನು ಮತ್ತೊಮ್ಮೆ ಎದುರಿಸಿ, ಧೈರ್ಯ ಮತ್ತು ಅದ್ಭುತ ತಾಳ್ಮೆ ಪ್ರದರ್ಶಿಸಿದ ಭಾರತೀಯರನ್ನು ಪ್ರಶಂಸಿಸಿದ್ದಾರೆ.ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಮತ್ತು ಭದ್ರತಾ ಮಂಡಳಿ ಹಾಲಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಲೆಬನಾನ್ ದೇಶದ ಪ್ರತಿನಿಧಿ ನವಾಜ್ ಸಲಾಂ, `ಇಂತಹ ಹೀನ ಭಯೋತ್ಪಾದನಾ ಕೃತ್ಯ ಅತಿದೊಡ್ಡ ಅಪರಾಧವಾಗಿದ್ದು, ಯಾರೂ ಸಮರ್ಥಿಸರು~ ಎಂದು ಪ್ರತ್ಯೇಕವಾಗಿ ಖಂಡಿಸಿದ್ದಾರೆ.ಭಾರತ ಸರ್ಕಾರ ಮತ್ತು ಭಾರತೀಯರಿಗೆ ಅನುಕಂಪ ತಿಳಿಸಿರುವ ಮೂನ್, ನಾಗರಿಕರ ವಿರುದ್ಧ ಉಗ್ರರು ನಡೆಸಿರುವ ಗೊಂದಲದ ಹಿಂಸೆಯನ್ನು ಎಂದಿಗೂ ಸಮರ್ಥಿಸದಿರುವ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಅಪರಾಧಿಗಳು ಆದಷ್ಟು ಬೇಗ ಪತ್ತೆಯಾಗುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಉಪ ವಕ್ತಾರ ಎಡ್ವರ್ಡೊ ಡೆಲ್ ಬ್ಯೂಯಿ ತಿಳಿಸಿದ್ದಾರೆ.ಪ್ರತ್ಯೇಕ ಹೇಳಿಕೆ ನೀಡಿರುವ ಸಲಾಂ, `ಎಲ್ಲ ಬಗೆಯ ಭಯೋತ್ಪಾದನೆ ಮತ್ತು ಅದರ ಪ್ರಯೋಗಗಳು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅತಿ ಗಂಭೀರ ಬೆದರಿಕೆಯಾಗಿದ್ದು, ಇಂತಹ ಯಾವುದೇ ದುಷ್ಕೃತ್ಯ ಮತ್ತು ಅಪರಾಧವನ್ನು ಯಾರೂ ಒಪ್ಪುವುದಿಲ್ಲ~ ಎಂದು ಟೀಕಿಸಿದ್ದಾರೆ. ನೊಂದವರಿಗೆ ಅನುಕಂಪ ಸೂಚಿಸಿರುವ ಅವರು, `ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭದ್ರತಾ ಮಂಡಳಿ ಕಟಿಬದ್ಧವಾಗಿದೆ~ ಎಂದೂ ನುಡಿದಿದ್ದಾರೆ.ಬ್ರಸ್ಸೆಲ್ಸ್ ವರದಿ

ಸ್ಫೋಟವನ್ನು ಖಂಡಿಸಿ, ಮೃತರಿಗೆ ಅನುಕಂಪ ವ್ಯಕ್ತಪಡಿಸಿರುವ ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿಗಳ ಮುಖ್ಯಸ್ಥೆ ಕ್ಯಾಥರಿನಾ ಅಶ್ಟಾನ್, ಈ ಭೀಕರ ದಾಳಿ ನಡೆಸಿದವರನ್ನು ಪತ್ತೆಹಚ್ಚಿ ಕಠಿಣವಾಗಿ ಶಿಕ್ಷಿಸುವ ಅವಶ್ಯಕತೆ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.ಬೀಜಿಂಗ್ ವರದಿ

ದಾಳಿಯನ್ನು ಖಂಡಿಸಿ, ನೊಂದವರಿಗೆ ಸಾಂತ್ವನ ಮತ್ತು ಸಂತಾಪ ತಿಳಿಸಿರುವ ಚೀನಾ, ಭಯೋತ್ಪಾದನೆ ವಿರುದ್ಧ ಜಂಟಿ ಅಂತರರಾಷ್ಟ್ರೀಯ ಹೋರಾಟಕ್ಕೆ ಕರೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿಯು ವೆಯಿಮಿನ್, ಭಯೋತ್ಪಾದನೆಯನ್ನು ಸಂಪೂರ್ಣ ಮೂಲೋತ್ಪಾಟನೆ ಮಾಡಲು, ಅದರ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಪರಸ್ಪರ ಸಹಕರಿಸಿ ಹೋರಾಟ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸ್ಫೋಟಕ್ಕೆ ಬಲಿಯಾದ ಭಾರತೀಯರಿಗೆ ಸಹಾನುಭೂತಿ ವ್ಯಕ್ತಪಡಿಸಿರುವ ಇಂಡೊನೇಷ್ಯಾ ಸರ್ಕಾರ, ಈ ಅಮಾನವೀಯ ಮತ್ತು ಹೇಯ ಕೃತ್ಯ ನಡೆಸಿದವರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದೆ. ಈ ಘಟನೆ ಭಯೋತ್ಪಾದನೆ ಇನ್ನೂ ಜೀವಂತವಾಗಿರುವುದನ್ನು ನೆನಪಿಗೆ ತಂದಿದ್ದು, ಇದರ ವಿರುದ್ಧ ಎಲ್ಲ ಪಕ್ಷ, ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಎಚ್ಚರಿಕೆಯ ಜಂಟಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry