ಶನಿವಾರ, ನವೆಂಬರ್ 16, 2019
21 °C

ದೇವತೆಗಳ `ಚಿತ್ರಯಾನ'

Published:
Updated:
ದೇವತೆಗಳ `ಚಿತ್ರಯಾನ'

`ಅಧಿಕಾರದಾಹದಿಂದ ಪ್ರಜಾಪತಿಯಾಗಿ ಮೆರೆಯುತ್ತಾ ಮಗಳು ದಾಕ್ಷಾಯಿಣಿ ಸಾವಿಗೆ ಕಾರಣನಾದ ದಕ್ಷನನ್ನು ಸಂಹರಿಸಲು ಶಿವನು ವೀರಭದ್ರನನ್ನು ಕಳುಹಿಸುತ್ತಾನೆ. ಎಷ್ಟು ಹೇಳಿದರೂ ವೀರಭದ್ರನ ಮಾತು ಕೇಳದ ದಕ್ಷ ಅಂತಿಮವಾಗಿ ವೀರಭದ್ರನಿಂದಲೇ ಸಂಹಾರವಾಗುತ್ತಾನೆ.ಈ ಪುರಾಣ ಕಥೆಯ ಹಿಂದೆ ತಾತ್ವಿಕ ಸಂದೇಶವಿದೆ. ಈ ಸಂಹಾರದ ಚಿತ್ರಣವನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿದ್ದೇನೆ. ಚಿತ್ರ, ನೋಡಲಷ್ಟೇ ಸುಂದರವಾಗಿ ಕಾಣುವುದು ಮುಖ್ಯವಲ್ಲ, ಅದರಲ್ಲಿ ಸಂದೇಶ ಇರಬೇಕು' ಎಂದು ತಮ್ಮ ಕಲಾಕೃತಿ ಕುರಿತು ಮಾತನಾಡಿದರು ಕಲಾವಿದ ಎಂ.ಪಿ.ಎಂ. ನಟರಾಜಯ್ಯ.ಚಿತ್ರಕಲಾ ಪರಿಷತ್ತಿನಲ್ಲಿ ಏ.22ರವರೆಗೆ ನಡೆಯಲಿರುವ `ಚಿತ್ರಯಾನ' ಕಲಾಪ್ರದರ್ಶನದಲ್ಲಿನ ಚಿತ್ರಗಳ ಕುರಿತು ಕಲಾವಿದ ನಟರಾಜಯ್ಯ ಅವರು `ಮೆಟ್ರೊ'ದೊಂದಿಗೆ ಮಾತನಾಡಿದರು.ದಾವಣಗೆರೆಯಲ್ಲಿ ಜನಿಸಿದ ನಟರಾಜಯ್ಯ ಪ್ರಾಥಮಿಕ ಶಾಲೆಯಲ್ಲಿರುವಾಗಿನಿಂದಲೇ ಚಿತ್ರಕಲೆಯ ಬಗ್ಗೆ ಒಲವು ಬೆಳೆಸಿಕೊಂಡವರು.ನಂತರ ಕಲಾ ಪದವಿಯನ್ನು ಪಡೆದು ಅನಿಮೇಷನ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಆದರೆ ಕಲಾರಾಧನೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಉದ್ದೇಶದಿಂದ ಕೆಲಸ ಬಿಟ್ಟು ಸಂಪೂರ್ಣವಾಗಿ ಕಲೆಯನ್ನೇ ಆರಾಧಿಸಲು ಮುಂದಾದರು.`ಅನಿಮೇಷನ್ ಕಂಪೆನಿಯೊಂದರಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ. `ಲೋಗೊ', `ಕ್ಯಾಟ್‌ಲಾಗ್'ಗಳನ್ನು ವಿನ್ಯಾಸ ಮಾಡುವುದು ನನ್ನ ಕೆಲಸವಾಗಿತ್ತು. ಕೈತುಂಬ ಹಣವೇನೋ ಸಿಗುತ್ತಿತ್ತು. ಆದರೆ ಮನಸ್ಸಿಗೆ ತೃಪ್ತಿ ಇರಲಿಲ್ಲ. ಹಾಗಾಗಿ ಸಿಕ್ಕ ಕೆಲಸ ಬಿಟ್ಟು ಈಗ ಚಿತ್ರಕಲೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ.ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿರುವ ಈ `ಚಿತ್ರಯಾನ' ನನ್ನ ಮೊದಲ ಏಕವ್ಯಕ್ತಿ ಪ್ರದರ್ಶನ. ಇಲ್ಲಿನ ಬಹುತೇಕ ಚಿತ್ರಗಳು ದೇವತಾ ಚಿತ್ರಗಳು. ಒಂದೊಂದು ಚಿತ್ರದ ಹಿಂದೆ ಒಂದೊಂದು ಕಥೆ ಇದೆ. ಎಷ್ಟೋ ಮಂದಿಗೆ ಗೊತ್ತಿರದ ಸಂಗತಿಗಳು ಅದರ ಹಿಂದಿರುತ್ತವೆ. ಇಂಥ ವಿಷಯಗಳನ್ನು ಕುಂಚದ ಮೂಲಕ ಅನಾವರಣಗೊಳಿಸಬೇಕೆಂಬುದೇ ಈ ಪ್ರದರ್ಶನದ ಉದ್ದೇಶ' ಎಂದು ಹೇಳುತ್ತಾರೆ ನಟರಾಜಯ್ಯ.ಮೊದಲ ಪ್ರದರ್ಶನವಾದರೂ ನಟರಾಜಯ್ಯ ಅವರ ದೇವರ ಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಜ್ಞಾನವನ್ನು ಧಾರೆ ಎರೆಯಲು ಆಕಾಶದಿಂದ ಧರೆಗಿಳಿಯುತ್ತಿರುವ ಸರಸ್ವತಿಯ ಡಿಜಿಟಲ್ ಚಿತ್ರ, ನಿಷ್ಕಲ್ಮಶ ಪ್ರೀತಿಯ ಸಂಕೇತದ ಕೃಷ್ಣ, ರಾಧೆಯ ಮನಮೋಹಕ ಚಿತ್ರ ಹಾಗೂ ಐದು ಅಡಿ ಎತ್ತರದ ವೀರಭದ್ರನ ತೈಲ ವರ್ಣದ ಕ್ಯಾನ್ವಾಸ್ ಚಿತ್ರಗಳು ಕಲಾರಸಿಕರನ್ನು ಆಕರ್ಷಿಸದೇ ಇರಲಾರವು. ತೈಲಚಿತ್ರಗಳ ಜೊತೆಗೆ ಐದು ರೇಖಾಚಿತ್ರಗಳು ಪ್ರದರ್ಶನದ ಹೈಲೈಟ್ ಆಗಿವೆ. ನಾಟ್ಯ ಗಣೇಶ, ಬುದ್ಧ, ಹನುಮಂತ, ಸರಸ್ವತಿ ಸೇರಿದಂತೆ ಒಟ್ಟು 25 ಕಲಾಕೃತಿಗಳು ಪ್ರದರ್ಶನದಲ್ಲಿವೆ.ಏ. 22ರವರೆಗೆ ಈ ಚಿತ್ರಯಾನ ನೋಡಲು ಲಭ್ಯ. ಸ್ಥಳ: ಗ್ಯಾಲರಿ ನಂ1, ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10.30ರಿಂದ ರಾತ್ರಿ 7.30ರವರೆಗೆ ಪ್ರದರ್ಶನ ನಡೆಯಲಿದೆ.

ಪ್ರತಿಕ್ರಿಯಿಸಿ (+)