ದೇವದಾಸಿಮಕ್ಕಳಿಗೆ ಮೀಸಲಾತಿ ನೀಡಿ

ಶುಕ್ರವಾರ, ಜೂಲೈ 19, 2019
23 °C

ದೇವದಾಸಿಮಕ್ಕಳಿಗೆ ಮೀಸಲಾತಿ ನೀಡಿ

Published:
Updated:

ಮುಧೋಳ: ದೇವದಾಸಿ ಪದ್ಧತಿ ಸಂಪೂರ್ಣ ಕೊನೆಗಾಣಿಸಲು ಅವರ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣಕ್ಕಾಗಿ ಪ್ರವೇಶದಲ್ಲಿ ಕನಿಷ್ಠ ಶೇ. 3ರಷ್ಟು ಮೀಸಲಾತಿ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜನಿ ಭಾರದ್ವಾಜ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ದೇವದಾಸಿ ನಿರ್ಮೂಲನೆಗೆ ಸಂಬಂಧಿಸಿದಂತೆ ಸಂಶೋಧನಾ ವಿದ್ಯಾರ್ಥಿಯೊಬ್ಬರ ಅಧ್ಯಯನಕ್ಕೆ ಸಹಕರಿಸಿ ದೇವದಾಸಿಯರ ಕುಟುಂಬಗಳಿಗೆ ಬುಧವಾರ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಅವರು ದೇವದಾಸಿ ಪದ್ಧತಿ ಸಮಾಜದ ಕಳಂಕವಾಗಿದ್ದು, ನಿರ್ಮೂಲನೆಗೆ ನೈಜ ಹೋರಾಟದ ಅವಶ್ಯಕತೆಯಿದೆ ಎಂದರು.ದೇವದಾಸಿ ಪದ್ಧತಿ ನಿರ್ಮೂಲನೆ ಆಗುತ್ತಿದೆ. ಆದರೆ ಅವರಿಗೆ ಪುನರ್ವಸತಿ ಕಲ್ಪಿಸಿ ಬೇರೆ ವಾತಾವರಣದಲ್ಲಿ ಜೀವನ ಸಾಗಿಸಲು ವ್ಯವಸ್ಥೆ ಮಾಡಬೇಕಿದೆ. ಮೊರಾರ್ಜಿ ಹಾಗೂ ಇನ್ನಿತರ ವಸತಿ ಶಾಲೆಗಳಲ್ಲಿ ದೇವದಾಸಿಯರ ಮಕ್ಕಳಿಗಾಗಿ ಮೀಸಲು ನಿಗದಿಪಡಿಸಬೇಕು. ಅಲ್ಲದೆ ದೇವದಾಸಿಯರ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ತೆರೆಯುವುದು ಅತ್ಯಗತ್ಯ ಎಂದು ನುಡಿದರು.ಕೆಲವು ಸ್ವಯಂ ಸೇವಾ ಸಂಸ್ಥೆಗಳು ದೇವದಾಸಿಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಹಣ ಗಳಿಕೆಯತ್ತ ಗಮನ ನೀಡಿವೆ. ಸಮಾಜದ ಬಗ್ಗೆ ಪ್ರತಿಯೊಬ್ಬರು ನೈಜ ಕಳಕಳಿಯಿಂದ ಕೆಲಸ ಮಾಡಿದರೆ ದೇವದಾಸಿ ಪದ್ಧತಿಯಂಥ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಸಾಧ್ಯ ಎಂದು ನುಡಿದರು.ಕಳಂಕಗಳು ಸಮಾಜದಿಂದ ದೂರವಾಗಲು ಸಾಧ್ಯವಾಗುತ್ತದೆ ಎಂದರು. ಮುಧೋಳ ತಾಲ್ಲೂಕು ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಎಚ್.ಐ.ವಿ ಪೀಡಿತರ ಅಂಕಿ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಎನ್.ಜಿ.ಒಗಳು ಸಮಾಜ ಹಾಗೂ ಸರಕಾರದ ನಡುವೆ ವ್ಯವಸ್ಥಿತವಾಗಿ ಕೆಲಸಮಾಡಬೇಕು ಎಂದರು.ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾಲೇಜು ಮಟ್ಟದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಿ ವಿದ್ಯಾರ್ಥಿನಿಯರು ಮೋಸ ಹೋಗುವದನ್ನು ತಡೆಯಲು ಯೋಜನೆ ರೂಪಿಸಲಾಗಿದೆ. ಮತ್ತು ಪ್ರತಿ ತಿಂಗಳು ಪೊಲೀಸ್ ಇಲಾಖೆಯಿಂದ ಪ್ರಕರಣಗಳನ್ನು ತರಿಸಿಕೊಂಡು, ಮಹಿಳೆಯರ ಮೇಲೆ ಆದ ದೌರ್ಜನ್ಯಗಳನ್ನು ತಡೆಯಲು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಪ್ರಚೋದಿಸಲಾಗುತ್ತಿದೆ ಎಂದು ಅವರು ಹೇಳಿದರು.ತಾಲ್ಲೂಕಿನ ಕುಳಲಿ, ಮಹಾಲಿಂಗಪುರ ಹಾಗೂ ಮುಧೋಳನಗರದಲ್ಲಿ ದೇವದಾಸಿಯರ ಮನೆಗಳಿಗೆ ಭೇಟಿ ನೀಡಿ ಕೆಲವು ದೇವದಾಸಿಯರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಪಟ್ಟಿಮಾಡಿದರು. ಈ ಸಂದರ್ಭದಲ್ಲಿ ರನ್ನ ಪ್ರತಿಷ್ಠಾನದ ಸದಸ್ಯ ವೈ.ಎಚ್. ಕಾತರಕಿ, ತಹಸೀಲ್ದಾರ ಶಂಕರಗೌಡ ಸೋಮನಾಳ, ಸಮಾಜ ಕಲ್ಯಾಣಾಧಿಕಾರಿ ಡಿ.ಕೆ.ಹೊಸಮನಿ ಮತ್ತಿತರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry