ಶುಕ್ರವಾರ, ಮೇ 14, 2021
21 °C

ದೇವದಾಸಿಯರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದೇವದಾಸಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಗೌರವ ಸಲಹೆಗಾರ ಯು. ಬಸವರಾಜ್ ಒತ್ತಾಯಿಸಿದರು.ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇವದಾಸಿ ಮಹಿಳೆಯರ 2ನೇ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿರುವ ಮಹಿಳೆಯರ ಸಮೀಕ್ಷೆ ಕಾರ್ಯ ಪ್ರಾರಂಭಿಸಬೇಕು ಎಂದು ಸಂಘದಿಂದ ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ, ಸಮೀಕ್ಷೆ ಕಾರ್ಯ ನಡೆಸಿದೆ. ಅದರಂತೆ ಶೀಘ್ರವೇ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸರ್ಕಾರ ದೇವದಾಸಿ ಮಹಿಳೆಯರಿಗೆ ರೂ 400 ಮಾಸಾಶನ, ರೂ 10 ಸಾವಿರ ಸಹಾಯಧನ, 20 ಸಾವಿರ ಸಾಲ ಸೌಲಭ್ಯ ನೀಡಲು ಒಪ್ಪಿದೆ. ಆದರೆ, ಈ ಬಾರಿಯ ಬಜಟ್‌ನಲ್ಲಿ ದೇವದಾಸಿಯರಿಗೆ ಸಂಬಂಧಿಸಿದಂತೆ ಯಾವುದೇ ಅಂಶವನ್ನು ಸೇರಿಸದೇ ಇರುವುದು ಖಂಡನೀಯ ಎಂದರು.ಜೀವನದಲ್ಲಿ ಯಾವುದೋ ಘಟ್ಟದಲ್ಲಿ ಈ ದೇವದಾಸಿ ಪದ್ಧತಿಗೆ ಸಿಲುಕಿರುವ ಮಹಿಳೆಯರನ್ನು ಸಮಾಜದಲ್ಲಿ ಕೆಟ್ಟ ದೃಷ್ಟಿಯಿಂದ ಕಾಣಲಾಗುತ್ತಿದೆ. ಇದು ಸಲ್ಲ. ಅವರನ್ನು ಸಮಾನತೆಯಿಂದ ಕಾಣಬೇಕು. ಸರ್ಕಾರ ಅವರ ಸಾಮಾಜಿಕ ಮತ್ತು ಆರ್ಥಿಕ ಜೀವನಮಟ್ಟ ಸುಧಾರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಲ್. ಭಟ್ ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ಎಚ್. ಕೃಷ್ಣಪ್ಪ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಬಿ. ಮಾಳಮ್ಮ, ಜಿಲ್ಲಾ ಅಧ್ಯಕ್ಷೆ ಚೌಡಮ್ಮ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಟಿ. ಪದ್ಮಾವತಿ, ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕಿ ಮಂಜುಳಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.